ADVERTISEMENT

ಕೊಪ್ಪಳ | ರಾಷ್ಟ್ರೀಯ ಹೋಳಿ ಉತ್ಸವ: ಬಂಜಾರ ಸಂಸ್ಕೃತಿ ಅನಾವರಣ

ಬಹದ್ದೂರ್ ಬಂಡಿ: ಸಾಂಪ್ರದಾಯಿಕ ಉಡುಗೆ ತೊಟ್ಟು ಕುಣಿದು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:35 IST
Last Updated 3 ಮಾರ್ಚ್ 2026, 4:35 IST
ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡಿ‌ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ರಾಷ್ಟ್ರೀಯ ಹೋಳಿ ಉತ್ಸವವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು
ಕೊಪ್ಪಳ ತಾಲ್ಲೂಕಿನ ಬಹದ್ದೂರ್ ಬಂಡಿ‌ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ರಾಷ್ಟ್ರೀಯ ಹೋಳಿ ಉತ್ಸವವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು   

ಕೊಪ್ಪಳ: ಕಣ್ಣು ಹಾಯಿಸಿದಷ್ಟೂ ದೂರ ವಿದ್ಯುತ್ ದೀಪಗಳ ಅಲಂಕಾರ, ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ, ಪೂಜಾ ಕಾರ್ಯಕ್ರಮ, ಸಮುದಾಯದ ಗುರು ಹಾತಿರಾಮ್ ಬಾಬಾ ತಪಸ್ಸು ಮಾಡಿದ ಪವಿತ್ರ ಕಟ್ಟೆಗೆ ವಿಶೇಷ ಪೂಜೆ. ಇದು ತಾಲ್ಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕಂಡುಬಂದ ಚಿತ್ರಣ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕೊಪಳಗಡ್ ಭಾದ್ದರ ಬಂಡಾ ಸೇವಾ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಬಂಜಾರ ಧರ್ಮಗುರುಗಳ ಮಹಾಸಭಾ ಸಹಯೋಗದಲ್ಲಿ ರಾಷ್ಟ್ರೀಯ ಹೋಳಿ ಉತ್ಸವ ಜರುಗಿತು. ರಾಜ್ಯದ ವಿವಿಧ ‌ಜಿಲ್ಲೆಗಳು, ಮಹಾರಾಷ್ಟ್ರ, ಹೈದರಾಬಾದ್ ಹಾಗೂ ಇತರ ರಾಜ್ಯಗಳಿಂದ ಬಂಜಾರ ಸಮುದಾಯದ ಜನ ಪಾಲ್ಗೊಂಡಿದ್ದರು.

ಹಾತಿರಾಮ್ ಬಾಬಾ ಕಟ್ಟೆಯ ಬಳಿ ಧರ್ಮಗುರುಗಳು ಪೂಜೆ ಸಲ್ಲಿಸಿದರು. ಬಳಿಕ ಸಂತಸೇವಾಲಾಲ್ ಸ್ಮರಣೆ ಜರುಗಿತು. ಸಮುದಾಯದ ಜನ ಬಂಜಾರ ಸಾಂಪ್ರದಾಯಿಕ ಉಡುಗೊರೆ ತೊಟ್ಟು ಗಮನ ಸೆಳೆದರು. ಬೆಳಿಗಿನ ಜಾವದ ತನಕ ಅದ್ದೂರಿಯಾಗಿ ಸಂಭ್ರಮದಿಂದ ಹೋಳಿ ಉತ್ಸವ ಜರುಗಿತು. ಜನ ಕುಣಿದು, ಪರಸ್ಪರ ಹೋಳಿ ಉತ್ಸವದ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಬಂಜಾರ ಸಮಾಜದ ಇತಿಹಾಸ, ಪರಂಪರೆ, ಈ ಹೋಳಿ ಆಚರಣೆಗ ತನ್ನದೆ ಆದ ಇತಿಹಾಸವಿದೆ. ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಸಮುದಾಯದ ಜನರಿದ್ದಾರೆ. ಜನರ ಅಭಿವೃದ್ದಿಗೆ ₹1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಮುದಾಯದ ಮಕ್ಕಳಿಗಾಗಿಯೇ ಪ್ರತ್ಯೇಕ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ಬಂಜಾರ ಸಮುದಾಯದ ಜನ ಎಲ್ಲರೊಂದಿಗೂ ಬೆರೆಯುವ ಗುಣ ಹೊಂದಿದ್ದಾರೆ. ತಾವು ಅತೀವ ಕಷ್ಟಪಟ್ಟರೂ ತಮ್ಮ ಮಕ್ಕಳನ್ನು ಪಟ್ಟಣದಲ್ಲಿ ಓದಿಸುತ್ತಿದ್ದಾರೆ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ,
ನಿವೃತ್ತ ಮುಖ್ಯ ಎಂಜಿನಿಯರ್ ಶಿವಾನಂದ, ಸಿದ್ಧಲಿಂಗ ಮಹಾರಾಜ, ತೆಲಂಗಾಣದ ರಮೇಶಗಿರಿ ಮಹಾಸ್ವಾಮಿ, ಸೇವಾ ಟ್ರಸ್ಟ್ ಅಧ್ಯಕ್ಷ ಭರತ್ ನಾಯ್ಕ, ಸಮುದಾಯದ ‌ಮುಖಂಡರಾದ ಪಿ. ಲಕ್ಷ್ಮಣನಾಯ್ಕ, ಯಮನೂರಪ್ಪ‌ ನಾಯ್ಕ್, ಪರಸ್ಪರ ‌ನಾಯ್ಕ‌ ಕಲಕೇರಿ, ರಾಮಪ್ಪ‌ ಜಾಧವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಹೋಳಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನ
ಹೋಳಿ ಉತ್ಸವದ ಅಂಗವಾಗಿ ಸಾಂಪ್ರದಾಯಿಕ ಧಿರಿಸು ತೊಟ್ಟು ಕಂಗೊಳಿಸಿದ ಬಂಜಾರ ಸಮುದಾಯದ ಮಹಿಳೆಯರು
ವಿವಿಧ ಧಾರ್ಮಿಕ ಮುಖಂಡರು ಅಗ್ನಿಗೆ ಪೂಜೆ ಮಾಡುವ ಮೂಲಕ ರಾಷ್ಟ್ರೀಯ ಹೋಳಿ ಉತ್ಸವಕ್ಕೆ ಚಾಲನೆ ನೀಡಿದರು
ಲಂಬಾಣಿ ಸಮುದಾಯಕ್ಕೆ ಬಹದ್ದೂರ್ ಬಂಡಿ ಪವಿತ್ರ ಕ್ಷೇತ್ರ. ಸಮುದಾಯ ರಾಜಕೀಯವಾಗಿಯೂ ಅವಕಾಶ ಪಡೆದು ಮುಂದೆ ಬರಬೇಕು.
ಸಿ.ವಿ. ಚಂದ್ರಶೇಖರ್ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ
ಬಣ್ಣಬಣ್ಣಗಳು ಕೂಡಿದಾಗ ಹೇಗೆ ಅಂದವಾಗಿ ಕಾಣುತ್ತವೆಯೊ ಅದೇ ರೀತಿ ‌ಮನಸ್ಸು ಮನಸ್ಸುಗಳು ಕೂಡಿದಾಗ ಬದುಕು ಚೆನ್ನಾಗಿ ಇರುತ್ತದೆ. ಹೋಳಿ ಕೇವಲ ಹಬ್ಬವಲ್ಲ ಬದುಕಿನ ಸಂಭ್ರಮ.
ಡಾ. ಬಸವರಾಜ ಕ್ಯಾವಟರ್ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ‌ಸದಸ್ಯ
ಬದುಕಿ ಬದುಕಲು ‌ಬಿಡಿ ಸಿದ್ದಾಂತ: ಜಾಧವ್
ಮಾಜಿ ಸಂಸದ ಡಾ. ಉಮೇಶ ಜಾಧವ್ ಮಾತನಾಡಿ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು ಸರಿಪಡಿಸಬೇಕಾಗಿದೆ. ಎಲ್ಲವನ್ನೂ‌ ಕಸಿದುಕೊಳ್ಳಬೇಕು ಎನ್ನುವ ಮನೋಭಾವನೆ ‌ನಮಗಿಲ್ಲ ನೀವು ಬದುಕಿ ಹಾಗೂ ನಮಗೂ‌ ಬದುಕಲು ಬಿಡಿ ಎನ್ನುವ ಸಿದ್ದಾಂತ ಹೊಂದಿದ್ದೇವೆ ಎಂದರು. ಬಂಜಾರ ಸಮುದಾಯಕ್ಕೆ ಬಹದ್ದೂರ್ ಬಂಡಿ ಪವಿತ್ರವಾಗಿದೆ. ಕ್ಷೇತ್ರದಲ್ಲಿರುವ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋಗಿ ಅಭಿವೃದ್ಧಿಗೆ ‌ಅನುದಾನ ಪಡೆದುಕೊಳ್ಳೋಣ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.