ADVERTISEMENT

ಅಪ್ಪನ ನೆರಳಿನಲ್ಲಿ ಬದುಕಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಟೀಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 12:08 IST
Last Updated 18 ನವೆಂಬರ್ 2021, 12:08 IST
ಪ್ರಿಯಾಂಕ್ ಖರ್ಗೆ ಮತ್ತು ಪ್ರತಾಪ್ ಸಿಂಹ
ಪ್ರಿಯಾಂಕ್ ಖರ್ಗೆ ಮತ್ತು ಪ್ರತಾಪ್ ಸಿಂಹ    

ಕೊಪ್ಪಳ: ನಮ್ಮ ಅಪ್ಪ, ಅಮ್ಮ ರಾಜಕೀಯ ಹಿನ್ನೆಲೆಯವರೇನಲ್ಲ. ಅಂತಹ ಪ್ರಭಾವಳಿಯೂ ಇದ್ದಿಲ್ಲ. ಮೈಸೂರಿನಲ್ಲಿ ಒಬ್ಬರೇ ಒಬ್ಬ ಶಾಸಕರು ಇಲ್ಲದ ಸಂದರ್ಭದಲ್ಲಿ ನನ್ನನ್ನು ಸಂಸದನಾಗಿ ಮತದಾರರು ಚುನಾಯಿಸಿದ್ದಾರೆ. ಇದು ನಿರ್ಭಿತಿಯಿಂದ ಪತ್ರಕರ್ತನಾಗಿ ಬರವಣಿಗೆ ರೂಢಿಸಿಕೊಂಡ ಪರಿಣಾಮ ಜನ ನಮ್ಮನ್ನು ಗುರುತಿಸಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಗುರುವಾರ ಕೊಪ್ಪಳದಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ನಡೆದ ಜನ ಸ್ವರಾಜ್ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, ಪ್ರಿಯಾಂಕ್ ಅಂದರೆ ಯಾವ ಲಿಂಗ, ಮರಿ ಖರ್ಗೆ ಎಂದರೆ ಏನು ತಪ್ಪು, ಸಾವಿರಾರು ಕೋಟಿ ಆಸ್ತಿ ಹೇಗೆ ಬಂತು ಎಂಬ ಸರಳ ಪ್ರಶ್ನೆ ಕೇಳಿದ್ದೆ, ಅದಕ್ಕೆ ಅವರು ಉತ್ತರಿಸುವ ಬದಲು ನೋಟಿಸ್ ಕಳುಹಿಸಿದ್ದಾರೆ. ಅದಕ್ಕೆ ಅಲ್ಲಿಯೇ ಉತ್ತರಿಸಲಾಗುವುದು ಎಂದರು.

ಬಿಟ್ ಕಾಯಿನ್ ಬಗ್ಗೆ ಎಲ್ಲ ಗೊತ್ತಿರುವ ಪ್ರಿಯಾಂಕ್ ಅವರಿಗೆ ನಮ್ಮ ಮೇಲೆ ಆರೋಪ ಮಾಡುವ ಬದಲು ಆತ್ಮಾವಲೋಕನ ಮಾಡಿಕೊಂಡಿದ್ದರೆ ಸಾಕಿತ್ತು. ಈಗ ಏನೇನೋ ತಡಬಡಾಯಿಸುತ್ತಿರುವುದನ್ನು ನೋಡಿದರೆ ಬಿಟ್ ಕಾಯಿನ್ ಪ್ರಕರಣದ ಪಾತ್ರಧಾರಿಗಳು ಯಾರು ಎಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.

ಖರ್ಗೆ ಸಾಹೇಬರ ಹೆಗಲಿಗೆ ಹೆಗಲು ಕೊಟ್ಟು ದುಡಿದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ, ಡಾ.ಉಮೇಶ ಜಾಧವ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಮರಿ ಖರ್ಗೆ ಅವರು ಮೂಲೆಗುಂಪು ಮಾಡಲು ನೋಡಿದರು. ಚುನಾವಣೆಯಲ್ಲಿ ಅವರೇ ಮೂಲೆಗುಂಪಾದರು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.