ADVERTISEMENT

ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 13:21 IST
Last Updated 16 ಡಿಸೆಂಬರ್ 2025, 13:21 IST
<div class="paragraphs"><p>ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ</p></div>

ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊ‍ಪ್ಪಳ ಜಿಲ್ಲಾ ಬಚಾವೊ ಸಮಿತಿ ಪ್ರತಿಭಟನೆ

   

–ಪ್ರಜಾವಾಣಿ ಚಿತ್ರ

ಬೆಳಗಾವಿ: ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬಲ್ಡೋಟ(ಬಿಎಸ್‌ಪಿಎಲ್‌) ಮತ್ತು ಗಿಣಿಗೇರಿ ಸುತ್ತಲಿನಲ್ಲಿ ಕಿರ್ಲೋಸ್ಕರ್‌, ಕಲ್ಯಾಣಿ ಸ್ಟೀಲ್‌, ಮುಕುಂದ–ಸುಮಿ, ಎಕ್ಸ್‌–ಇಂಡಿಯಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಕೊ‍ಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯವರು, ಇಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ADVERTISEMENT

ಸುವರ್ಣ ವಿಧಾನಸೌಧ ಬಳಿ ಇರುವ ಪ್ರತಿಭಟನಾ ವೇದಿಕೆಯಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಯಾವ ಕಾರಣಕ್ಕೂ ಕಾರ್ಖಾನೆಗಳನ್ನು ವಿಸ್ತರಣೆ ಮಾಡಬಾರದು’ ಎಂದು ಒತ್ತಾಯಿಸಿದರು.

‘ಬಲ್ಡೋಟ ಕಾರ್ಖಾನೆ ವಿಸ್ತರಣೆ ತಡೆದು, ಕೊಪ್ಪಳ–ಭಾಗ್ಯನಗರದ ಒಂದೂವರೆ ಲಕ್ಷ ಜನರ ಆರೋಗ್ಯ ಕಾಪಾಡಬೇಕು. ಕೊಪ್ಪಳ ತಾಲ್ಲೂಕಿನ 20 ಹಳ್ಳಿಗಳಲ್ಲಿ ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ, ತುಂಗಭದ್ರಾ ನದಿ ಕಲುಷಿತಗೊಳಿಸುತ್ತಿರುವ ವಿದ್ಯುತ್‌ ಉತ್ಪಾದನೆ ಕಾರ್ಖಾನೆಗಳನ್ನು ಮುಚ್ಚಬೇಕು. ಬಲ್ಡೋಟ ಅತಿಕ್ರಮಿಸಿದ ಬಸಾಪುರ ಕೆರೆಯನ್ನು ಹೈಕೋರ್ಟ್‌ ಆದೇಶದಂತೆ ಜಾನುವಾರುಗಳಿಗಾಗಿ ನೀರು ಕುಡಿಯಲು ಮುಕ್ತವಾಗಿ ಇರಿಸಬೇಕು’ ಎಂದು ಆಗ್ರಹಿಸಿದರು.

‘ಕಾರ್ಖಾನೆಗಳ ಮಾಲಿನ್ಯದಿಂದ ಹಾಳಾಗಿರುವ ಪರಿಸರ ಮತ್ತು ಜನರ ಆರೋಗ್ಯದ ಬಗ್ಗೆ ಅಧ್ಯಯನಕ್ಕಾಗಿ ತಂತ್ರಜ್ಞರ ಸಮಿತಿ ರಚಿಸಬೇಕು. ಈಗಾಗಲೇ ಸಲ್ಲಿಕೆಯಾದ ನಕಲಿ ವರದಿ ಬಗ್ಗೆಯೂ ತನಿಖೆಯಾಗಬೇಕು’ ಎಂದಿ ಒತ್ತಾಯಿಸಿದರು.

ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಹಾಂತೇಶ ಕೋತಬಾಳ, ಪ್ರಕಾಶ ಮೇದಾರ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಮಾಲಾ ಬಡಿಗೇರ, ಶಿವಾನಂದಯ್ಯ ಬೀಳಗಿಮಠ ಇತರರಿದ್ದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ಬೇಡಿಕೆ ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.