ADVERTISEMENT

ಕೊಪ್ಪಳ: ಹುಲಿಗಿಗೆ ಪಾದಯಾತ್ರೆ ಹೊರಟಿದ್ದ ವ್ಯಕ್ತಿ ಮೇಲೆ ಲಾರಿ ಹರಿದು ಸಾವು

​ಪ್ರಜಾವಾಣಿ ವಾರ್ತೆ
Published 31 ಮೇ 2024, 4:12 IST
Last Updated 31 ಮೇ 2024, 4:12 IST
   

ಕೊಪ್ಪಳ: ಜಿಲ್ಲೆಯ ಧಾರ್ಮಿಕ ತಾಣ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಲಾರಿ ಹರಿದು ಮೃತಪಟ್ಟಿದ್ದಾರೆ.

ಶುಕ್ರವಾರ (ಇಂದು) ದೇವಿಯ ಮಹಾರಥೋತ್ಸವ ನಡೆಯಲಿದ್ದು, ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಸಾಕಷ್ಟು ಭಕ್ತರು ಪಾದಯಾತ್ರೆ ಮೂಲಕ ಹುಲಿಗಿ ತಲುಪುತ್ತಿದ್ದಾರೆ. ತಾಲ್ಲೂಕಿನ ಕೆರಹಳ್ಳಿ ಫ್ಲೈ ಓವರ್‌ ಬಳಿ ಘಟನೆ ನಡೆದಿದ್ದು ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಯಮನೂರಪ್ಪ ಸಣ್ಣಮನಿ (34) ಎಂಬುವರು ಮೃತಪಟ್ಟಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದವರು.

ಇವರ ಸಮೀಪದಲ್ಲಿ ಹೋಗುತ್ತಿದ್ದ ಮಹಾಂತೇಶ್‌ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಾಂತೇಶ್ ಅವರ ಕಾಲಿನ ಒಂದು ಭಾಗ ಫ್ಲೈ ಓವರ್‌ ಮೇಲೆ, ಉಳಿದ ದೇಹ ಫ್ಲೈ ಓವರ್‌ ಕೆಳಗಡೆ ಬಿದ್ದಿದ್ದು ರಸ್ತೆ ಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಕೆಲ ಹೊತ್ತಿನಲ್ಲಿಯೇ ಅವನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

ಎರಡನೇ ಘಟನೆ

ಹುಲಿಗಿಗೆ ಪಾದಯಾತ್ರೆ ತೆರಳುವಾಗ ಅಪಘಾತಕ್ಕೆ ಬಲಿಯಾದ ವಾರದ ಎರಡನೇ ಪ್ರಕರಣ ಇದಾಗಿದೆ.

ಅಗಿ ಹುಣ್ಣಿಮೆ ಅಂಗವಾಗಿ ಒಂದು ವಾರದ ಹಿಂದೆ ಕೊಪ್ಪಳದಿಂದ ಹುಲಿಗಿಗೆ ಪಾದಯಾತ್ರೆ ತೆರಳುತ್ತಿದ್ದ ಗುರುರಾಜ ಅರಕೇರಿ ಎಂಬುವರ ಮೇಲೆ ಮಿನಿ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.