ADVERTISEMENT

ಮಾಂಸ ಮಾರಾಟ: ಸರ್ಕಾರದ ನಿರ್ಧಾರಕ್ಕೆ ಶಾಸಕ ಬಯ್ಯಾಪುರ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 11:25 IST
Last Updated 11 ಏಪ್ರಿಲ್ 2020, 11:25 IST
ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ    

ಕುಷ್ಟಗಿ: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಹೀಗಿದ್ದೂ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಂಸ ಸೇವನೆ ಮಾಡುವವರು ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ಎಲ್ಲಕಡೆ ಇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದುಸ್ತರವಾಗಿದೆ. ದಿನಸಿ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದಕ್ಕೇ ನಿರ್ಬಂಧ ಇರುವಾಗ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದನ್ನು ತಾವು ಬಲವಾಗಿ ವಿರೋಧಿಸುವುದಾಗಿ ಹೇಳಿದರು.

ಅದೇ ರೀತಿ ಮದ್ಯ ಮಾರಾಟಕ್ಕೆ ಒತ್ತಡ ಬರುತ್ತಿರುವ ಕಾರಣಕ್ಕೆ ಸರ್ಕಾರ ಅದಕ್ಕೂ ಮಣಿಯುವ ಸಾಧ್ಯತೆ ಇದೆ. ಮದ್ಯ ವ್ಯಸನಿಗಳು ಇರುವಲ್ಲಿಗೇ ಹೋಗಿ ಅವರಿಗೆ ಬೇಗಾದ ಮದ್ಯ ಪೂರೈಸುವಂಥ ವ್ಯವಸ್ಥೆಗೆ ಸರ್ಕಾರ ಅವಕಾಶ ಕಲ್ಪಿಸಿದರೂ ಅಚ್ಚರಿಯಿಲ್ಲ. ಅದೇ ರೀತಿ ಮದ್ಯ ದೊರಕದೆ ಇದ್ದರೆ ವ್ಯಸನಿಗಳು ಸಾಯುತ್ತಾರೆ ಎಂಬುದೂ ಅಪ್ಪಟ ಸುಳ್ಳು. ಮೂರು ವಾರ ಅನ್ನ ನೀರು ಇಲ್ಲದಿದ್ದರೂ ಕೆಲವರು ಬದುಕಿರುವ ಉದಾಹರಣೆಗಳಿವೆ. ಸರ್ಕಾರ ಒತ್ತಡಕ್ಕೆ ಮಣಿದು ಮದ್ಯ ಮಾರಾಟಕ್ಕೂ ಅವಕಾಶ ನೀಡಬಾರದು ಎಂದು ಶಾಸಕ ಬಯ್ಯಾಪುರ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.