ADVERTISEMENT

ಗಂಗಾವತಿ | ಪಂಪಾ ವಿರೂಪಾಕ್ಷೇಶ್ವರ ಭ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:31 IST
Last Updated 26 ಜನವರಿ 2026, 7:31 IST
ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮಹಿಳೆಯರು ಬಳೆ ಖರೀದಿ ಮಾಡುತ್ತಿರುವುದು
ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮಹಿಳೆಯರು ಬಳೆ ಖರೀದಿ ಮಾಡುತ್ತಿರುವುದು   

ಗಂಗಾವತಿ: ಇಲ್ಲಿನ ಹಿರೇಜಂತಕಲ್ ಸಮೀಪದ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ದೇವಸ್ಥಾನದ ಆವರಣದಿಂದ ಪಾದಗಟ್ಟೆವರೆಗೆ ಭಾನುವಾರ ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭ್ರಹ್ಮರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ 5ರಿಂದಲೇ ದೇವಸ್ಥಾನದಲ್ಲಿನ ಪಂಪ ವಿರೂಪಾಕ್ಷೇಶ್ವರ ಮತ್ತು ಪಾರ್ವತಿ ದೇವಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಜೊತೆಗೆ ವಿಶೇಷ ಅಲಂಕಾರ ಸೇರಿ ಹೋಮ-ಹವನಗಳು ನಡೆದವು. ವಿವಿಧ ಪೂಜಾ ಕಾರ್ಯಗಳ ನಂತರ 12 ಗಂಟೆಗೆ ತಾಲ್ಲೂಕು ಆಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಭಕ್ತರು ಮಡಿತೇರು ಎಳೆಯಲಾಯಿತು.

ರಸ್ತೆ, ಬೃಹತ್ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯ ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ಸಂಜೆ ರಥೋತ್ಸವ ಸಾಗುತ್ತಿದ್ದಾಗ ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು, ಹಿರಿಯರು ಉತ್ತತ್ತಿ ಎಸೆದು ಗೌರವ ಸಲ್ಲಿಸಿದರು.

ADVERTISEMENT

ಪಂಪಾ ವಿರೂಪಾಕ್ಷೇಶ್ವರ ರಥೋತ್ಸವ ಕಣ್ತುಂಬಿಕೊಳ್ಳಲು ಕುಟುಂಬದ ಸದಸ್ಯರ ಸಮೇತ ಗಂಗಾವತಿ ವಿವಿಧ ವಾರ್ಡ್ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಂದ ಭಕ್ತರು ತಂಡೋಪತಂಡವಾಗಿ ಹರಿದು ಬಂದಿದ್ದರು. ಇನ್ನೂ ಜಾತ್ರೆ ಮತ್ತು ರಥೋತ್ಸವ ನಿಮಿತ್ತ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನವನ್ನು ಬಾಳೆದಿಂಡು, ಹೂವಿನ ತೋರಣಗಳ ಜೊತೆಗೆ ವಿದ್ಯುತ್ ಅಲಂಕಾರ ಮಾಡಿದ ದೃಶ್ಯಗಳು ಕಂಡು ಬಂದವು.

ಮಹಿಳೆಯರು ಕುಟುಂಬಸ್ಥರ ಸಮೇತ ನೂತನ ವಸ್ತ್ರಗಳನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿ ವಿರುಪಾಕ್ಷೇಶ್ವರ ಸ್ವಾಮಿ ಜೊತೆಗೆ ಪಾರ್ವತಿ ದೇವಿಯ ದರ್ಶನ ಪಡೆದರು. ನಂತರ ಮಕ್ಕಳೊಂದಿಗೆ ಜಾತ್ರೆಯಲ್ಲಿ ಕಿವಿಯೋಲೆ, ಬಳೆ, ಮಕ್ಕಳ ಆಟದ ಸಾಮಾನು ಸೇರಿ ವಿವಿಧ ಜ್ಯೋಗ್ಯಾರ ವಸ್ತುಗಳು ಖರೀದಿಸಿದರು.

ದಾಸೋಹ ವ್ಯವಸ್ಥೆ: ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಕುಟುಂಬದಿಂದ ಹುಗ್ಗಿ, ರೊಟ್ಟಿ, ಕಾಳು, ಬದನೆಕಾಯಿ ಪಲ್ಯ, ಅನ್ನ, ಸಾಂಬಾರಿನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಾಸಕ ಜಿ‌.ಜನಾರ್ದನರೆಡ್ಡಿ, ಅವರ ಪತ್ನಿ ಅರುಣಾ ಲಕ್ಷ್ಮಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ, ಕಾಡ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ವಿರುಪಾಕ್ಷೇಶ್ವರನ ದರ್ಶನ ಪಡೆದರು.

ತಹಶೀಲ್ದಾರ್‌ ಯು.ನಾಗರಾಜ, ಡಿವೈಎಸ್‌ಪಿ ಜಿ.ಎಸ್.ನ್ಯಾಮನಗೌಡ, ನಗರಠಾಣೆ ಪಿಐ ಪ್ರಕಾಶ ಮಾಳೆ, ಸೇರಿದಂತೆ ನಗರಸಭೆ ಮಾಜಿ ಸದಸ್ಯರು, ವಿವಿಧ ಸಂಘ ಟನೆಗಳ ಮುಖಂಡರು, ಭಕ್ತರು ಉಪಸ್ಥಿತರಿದ್ದರು.

ಗಂಗಾವತಿ ಹಿರೇಜಂತಕಲ್ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವ ರ ದೇವಸ್ಥಾನದ ಜಾತ್ರೆಯ ನಿಮಿತ್ತ ಭಾನುವಾರ ನಡೆದ ಮಹಾರಥೋತ್ಸವದಲ್ಲಿ ನೆರೆದಿರುವ ಭಕ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.