ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಚರ್ಚ್ ಮೈಸೂರು ಸೀಮೆಯ ಹಳೆಯ ಚರ್ಚ್‌ಗಳಲ್ಲೊಂದಾಗಿದ್ದು ಇದಕ್ಕೆ 243 ವರ್ಷಗಳ ಇತಿಹಾಸವಿದೆ.
ಫ್ರಾನ್ಸ್ ಮೂಲದ ಕ್ರೈಸ್ತ ಮಿಷನರಿ ಫಾ.ಮೈಕೆಲ್ ಕರ್ಡೋಸ್ 243 ವರ್ಷಗಳ ಹಿಂದೆಯೇ ಅಂದರೆ, 1781ರಲ್ಲಿ ಇಲ್ಲಿ ಧಾರ್ಮಿಕ ಸಭೆ ನಡೆಸುತ್ತಿದ್ದರು ಎಂಬುದಕ್ಕೆ ಚರ್ಚ್‌ನ ಮುಂದಿರುವ ಶಿಲುಬೆ ಕಲ್ಲು ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಕರಾವಳಿಯಿಂದ (ದಕ್ಷಿಣ ಕನ್ನಡ) ಶಹರ್ ಗಂಜಾಂಗೆ ಬಂದ ರೋಮನ್ ಕ್ಯಾಥೊಲಿಕ್ ಪಂಗಡದ ಫಾ.ಮೈಕೆಲ್ ಕರ್ಡೋಸ್ ಪಾಲಹಳ್ಳಿಯಲ್ಲೂ ಧಾರ್ಮಿಕ ಸಭೆ ನಡೆಸಲು ಶುರು ಮಾಡಿದರು.
1859ರಲ್ಲಿ ಫ್ರಾನ್ಸ್‌ನಿಂದ ಪಾಲಹಳ್ಳಿಗೆ ಬಂದ ಕ್ರೈಸ್ತ ಮಿಷನರಿ ಫಾ.ಜೀನ್ ಬ್ಯಾಪ್ಟಿಸ್ಟ್ ರೆನೌಡ್ಡಿನ್ ಪಾಲಹಳ್ಳಿಯಲ್ಲಿ ಶಾಶ್ವತವಾದ ಚರ್ಚ್ ನಿರ್ಮಿಸಿದರು. ಅದು ಈಗ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಚರ್ಚ್ ಎಂದು ಪ್ರಸಿದ್ಧಿಯಾಗಿದೆ. ಗುಡಿಸಲಿನಿಂದ ಹೆಂಚಿನ ಮನೆಗೆ, ನಂತರ ಸಿಮೆಂಟ್ ಕಟ್ಟಡವಾಗಿ ಈ ಚರ್ಚ್ ರೂಪಾಂತರಗೊಂಡಿದೆ. 24 ವರ್ಷಗಳ ಹಿಂದೆ (2000) ಈ ಚರ್ಚ್ ಜೀರ್ಣೋದ್ಧಾರಗೊಂಡಿದೆ. ಫಾ.ಅಂತೋಣಪ್ಪ ಎಂಬವರು 5 ವರ್ಷಗಳಿಂದ ಈ ಚರ್ಚ್‌ನ ಮುಖ್ಯಸ್ಥರಾಗಿದ್ದು, ಧಾರ್ಮಿಕ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ.
ಒಕ್ಕಲಿಗರು ಕ್ರೈಸ್ತ ಧರ್ಮಕ್ಕೆ: ಪಾಲಹಳ್ಳಿ ಗ್ರಾಮದ ಒಕ್ಕಲಿಗ ಜಾತಿಯ ರಾಮೇಗೌಡನ ಮಗ ರಾಜೇಗೌಡ ಕ್ರೈಸ್ತ ಧರ್ಮವನ್ನು ಸೇರಿ ರಾಜಪ್ಪ ಎಂದು ಹೆಸರು ಬದಲಿಸಿಕೊಂಡರು. ರಾಜಪ್ಪ ಅವರ ಪೀಳಿಗೆಯ ಪಿ.ಆರ್. ಮರಿಯಪ್ಪ, ಅವರ ಮಗ ರಾಜಪ್ಪ– ಹೀಗೆ ಮುಂದುವರಿಯುತ್ತಿದೆ. ಗ್ರಾಮದಲ್ಲಿ ಒಕ್ಕಲಿಗ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಪರಿವರ್ತನೆಗೊಂಡಿರುವ ಸುಮಾರು 30 ಕುಟುಂಬಗಳಿವೆ. ಈ ಪೈಕಿ ಕೆಲವರು ಗ್ರಾಮದಲ್ಲಿ ಹಿಂದೂಗಳು ಆಚರಿಸುವ ನಡೆಯುವ ‘ಶಂಭುಲಿಂಗೇಶ್ವರನ ಹಬ್ಬ’ ಮತ್ತು ‘ಅಮ್ಮನ ಹಬ್ಬ’ಗಳಲ್ಲಿ ಕೂಡ ಪಾಲ್ಗೊಳ್ಳುತ್ತಾರೆ.
‘ನಾವು ಒಕ್ಕಲಿಗ ಕ್ರೈಸ್ತರು. ನಮ್ಮಂತೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಒಕ್ಕಲಿಗರ ಕುಟುಂಬದಿಂದ ಹೆಣ್ಣು ತರುವುದು, ಕೊಡುವುದು ಮಾಡುತ್ತೇವೆ. ಬೆಂಗಳೂರಿನ ಹಾರೋಬೆಲೆ, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ, ಗಾಡಾನಹಳ್ಳಿ, ದಾಸನಪುರ, ಕೆ.ಆರ್. ನಗರದ ದೋರನಹಳ್ಳಿ, ಹುಣಸೂರಿನ ಕೂಡ್ಲೂರು, ಗದ್ದಿಗೆ ಸಮೀಪದ ಶಾಂತಿಪುರ, ಚನ್ನರಾಯಪಟ್ಟಣ ತಾಲ್ಲೂಕಿನ ಆಲ್ಫಾನ್ಸ್ ನಗರದಲ್ಲಿ ಒಕ್ಕಲಿಗ ಕ್ರೈಸ್ತರಿದ್ದು ನಮ್ಮ ನಡುವೆ ಮದುವೆ ಸಂಬಂಧ ಬೆಳೆಸುತ್ತೇವೆ’ ಎಂದು ಪಾಲಹಳ್ಳಿಯ ರಾಮೇಗೌಡ ಅವರ ಮರಿ ಮೊಮ್ಮಗ ರಾಜಪ್ಪ ಹೇಳುತ್ತಾರೆ.
ಪಾಲಹಳ್ಳಿಯ ರೋಮನ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆ ಸಡಗರ, ಸಂಭ್ರಮದಿಂದ ನಡೆಯುತ್ತದೆ. ಡಿ.24ರ ರಾತ್ರಿಯಿಂದ ಡಿ.25ರ ಮುಂಜಾನೆ ವರೆಗೆ ಪ್ರಾರ್ಥನೆ, ಬಲಿ ಪೂಜೆ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ಈಸ್ಟರ್, ಗುಡ್ ಫ್ರೈಡೇ ಮತ್ತು ಸೇಂಟ್ ಬ್ಯಾಪ್ಟಿಸ್ಟ್ ಫೆಸ್ಟಿವಲ್ ಕೂಡ ಆಚರಿಸಲಾಗುತ್ತದೆ. ಸೇಂಟ್ ಬ್ಯಾಪ್ಟಿಸ್ಟ್ ಫೆಸ್ಟಿವಲ್ (ಅರುಳಪ್ಪನ ಹಬ್ಬ) ನಲ್ಲಿ ವಿದೇಶಿಯರೂ ಭಾಗವಹಿಸುತ್ತಾರೆ ಎಂಬುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.