ADVERTISEMENT

ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ: 6 ತಿಂಗಳ ನಂತರ ಅಸ್ಥಿಪಂಜರ ಪತ್ತೆ!

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 14:42 IST
Last Updated 5 ಜನವರಿ 2026, 14:42 IST
<div class="paragraphs"><p>ಮೃತ ಮಹದೇವಸ್ಥಾಮಿ</p></div>

ಮೃತ ಮಹದೇವಸ್ಥಾಮಿ

   

ಭಾರತೀನಗರ (ಮಂಡ್ಯ ಜಿಲ್ಲೆ): ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಅಸ್ಥಿಪಂಜರ ಆರು ತಿಂಗಳ ನಂತರ ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆಯಲ್ಲಿ ಸೋಮವಾರ ಪತ್ತೆಯಾಗಿದೆ. 

ಮಹದೇವಸ್ವಾಮಿ ಅಲಿಯಾಸ್‌ ಬೋಟಿ ಮಹದೇವ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಇವರಿಗೆ ಪತ್ನಿ ಪವಿತ್ರಾ, ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ.

ADVERTISEMENT

ಮಹದೇವಸ್ವಾಮಿ ಅವರು ಭಾರತೀನಗರದ ಬೀದಿಬದಿ ಶೆಡ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದು, ದೊಡ್ಡಅರಸಿನಕೆರೆಯ ಬಾಡಿಗೆ ಮನೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಒಂದೂವರೆ ವರ್ಷದ ಹಿಂದೆ ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಬಿಟ್ಟು ನಾಪತ್ತೆಯಾಗಿದ್ದರು. ಗಂಡನ ಪತ್ತೆಗಾಗಿ ಪತ್ನಿ ಪವಿತ್ರಾ ನಿರಂತರ ಹುಡುಕಾಟ ನಡೆಸಿದ್ದರು. ನಂತರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿ ಖಾಸಗಿ ಕಾರ್ಖಾನೆಯಲ್ಲಿ ಪವಿತ್ರಾ ಕೆಲಸ ನಿರ್ವಹಿಸುತ್ತಿದ್ದರು.

ಪತ್ನಿ ಬೆಂಗಳೂರಿಗೆ ತೆರಳಿದ ನಂತರ ಯಾರಿಗೂ ಕಾಣದಂತೆ ರಾತ್ರಿ ವೇಳೆ ಮನೆ ಸೇರಿದ ಮಹದೇವಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಬಾಡಿಗೆ ಮನೆಯ ಮಾಲೀಕ ಮಾಯಿಗಯ್ಯ ಅವರ ಪತ್ನಿ ಗೀತಾ ಎಂಬುವವರು ಬಾಕಿ ಇರುವ ಬಾಡಿಗೆ ಹಣವನ್ನು ನೀಡಿ, ಮನೆ ಖಾಲಿ ಮಾಡಿಸಿಕೊಡುವಂತೆ ಮಹದೇವಸ್ವಾಮಿ ಅವರ ತಮ್ಮ ರವಿ ಅವರನ್ನು ನಿರಂತರವಾಗಿ ಕೇಳುತ್ತಿದ್ದರು. ಮಹದೇವಸ್ವಾಮಿ ಸಿಗುವವರೆಗೆ ಕಾಲಾವಕಾಶ ಕೊಡುವಂತೆ ರವಿ ಮನವಿ ಮಾಡಿದ್ದರು. ಮನೆಯ ಮಾಲೀಕರು ಕೂಡ ಒಪ್ಪಿದ್ದರು. ಮನೆಯ ಬಾಗಿಲು ಹಾಕಿದಂತೆಯೇ ಇದ್ದ ಕಾರಣ, ಯಾರಿಗೂ ಸಂಶಯ ಬಂದಿರಲಿಲ್ಲ ಎನ್ನಲಾಗಿದೆ. 

ಮುಂಬರುವ ಫೆಬ್ರುವರಿ ತಿಂಗಳಿನಲ್ಲಿ ಗ್ರಾಮ ದೇವತೆ ಏಳೂರಮ್ಮ ದೇವಿಯ ಜಾತ್ರೆ ಇರುವುದರಿಂದ ಸುಣ್ಣ, ಬಣ್ಣ ಬಳಿಯಲು ಮನೆ ಖಾಲಿ ಮಾಡಿಕೊಡುವಂತೆ ಮಾಲೀಕರು ರವಿಗೆ ಕಟ್ಟುನಿಟ್ಟಾಗಿ ಕೇಳಿದ್ದರು.

ಹೀಗಾಗಿ ರವಿ ಅವರು ಸೋಮವಾರ ಮನೆಯಲ್ಲಿನ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಮನೆಯ ಬಾಗಿಲು ತೆರೆಯಲು ಯತ್ನಿಸಿದಾಗ, ಒಳಗಿನಿಂದ ಬೀಗ ಹಾಕಿರುವುದು ಗೊತ್ತಾಗಿದೆ. ಹರೆ ಮತ್ತಿತರ ಆಯುಧ ಬಳಸಿ ಬಾಗಿಲನ್ನು ಒಡೆದಿದ್ದಾರೆ. ಮನೆ ಬಾಗಿಲ ಹಿಂಬದಿಯಲ್ಲೇ ನೇಣು ಹಾಕಿಕೊಂಡ ಮಹದೇವಸ್ವಾಮಿ ಅಸ್ಥಿಪಂಜರ ಪತ್ತೆಯಾಗಿದೆ.

ಕೆ.ಎಂ.ದೊಡ್ಡಿ ಪೊಲೀಸರು ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಅಸ್ಥಿಪಂಜರ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.