ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಡ್ಯ: ಸಕ್ಕರೆ ನಾಡಿನಲ್ಲಿ ಡಿಸೆಂಬರ್ 20, 21, ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಕನ್ನಡಕ್ಕಾಗಿ ಓಡು’ ಘೋಷಣೆಯೊಂದಿಗೆ ಸುಮಾರು 10,000ಕ್ಕೂ ಅಧಿಕ ಜನರು ನಗರದ ಸರ್ ಎಂ.ವಿ ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆಯವರೆಗೆ ಮ್ಯಾರಥಾನ್ ನಲ್ಲಿ ಪಾಲ್ಗೊಂಡರು.
ಶಾಸಕ ಪಿ. ರವಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಆರು ಕಿಲೋಮೀಟರ್ ಅಂತರದ ಮ್ಯಾರಥಾನ್ ಓಟದಲ್ಲಿ ಯುವಕರು, ಯುವತಿಯರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಉತ್ಸಾಹದಿಂದ ಹೆಜ್ಜೆ ಹಾಕಿದರು.
ಚಿತ್ರನಟರಾದ ಡಾಲಿ ಧನಂಜಯ, ನೀನಾಸಂ ಸತೀಶ್, ಸಪ್ತಮಿ ಗೌಡ ಅವರು ಸ್ವಲ್ಪ ದೂರ ಓಟದಲ್ಲಿ ಪಾಲ್ಗೊಂಡು ಯುವಕ- ಯುವತಿಯರಿಗೆ ಸ್ಫೂರ್ತಿ ತುಂಬಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೇ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳಿಗೆ ದಾರಿಯುದ್ದಕ್ಕೂ ನೀರಿನ ಬಾಟಲಿ, ಬಿಸ್ಕತ್ ಅನ್ನು ಸ್ವಯಂಸೇವಕರು ನೀಡಿದರು.
ಭಾಗವಹಿಸಿದವರಿಗೆ ಉಚಿತವಾಗಿ ‘ಕನ್ನಡಕ್ಕಾಗಿ ಓಡು’ ಹೆಸರಿನ ಟೀ ಶರ್ಟ್ ವಿತರಿಸಲಾಯಿತು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.