ಮಂಡ್ಯ: ‘ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ’ ಎಂಬ ಖ್ಯಾತಿ ಗಳಿಸಿರುವ ಮಂಡ್ಯ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಕನ್ನಡ ಮಾಧ್ಯಮದ 351 ಶಾಲೆಗಳು ಬಾಗಿಲು ಮುಚ್ಚಿವೆ. ಶೂನ್ಯ ದಾಖಲಾತಿ ಕಾರಣದಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.
ನಾಗಮಂಗಲ ತಾಲ್ಲೂಕಿನಲ್ಲಿ ಬರೋಬ್ಬರಿ 103 ಶಾಲೆಗಳಿಗೆ ಬೀಗ ಬಿದ್ದಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕು ಎನಿಸಿದೆ. ಪಾಂಡವಪುರ ತಾಲ್ಲೂಕಿನಲ್ಲಿ 53 ಮತ್ತು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 50 ಸರ್ಕಾರಿ ಶಾಲೆಗಳು ಬಂದ್ ಆಗಿದ್ದು, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
351 ಶಾಲೆಗಳಲ್ಲಿ 261 ಸರ್ಕಾರಿ, 19 ಅನುದಾನಿತ ಹಾಗೂ 71 ಅನುದಾನ ರಹಿತ (ಖಾಸಗಿ) ಶಾಲೆಗಳಾಗಿವೆ. ಅಂದರೆ ಸರ್ಕಾರಿ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಲು ಮುಚ್ಚಿವೆ.
2025–26ನೇ ಸಾಲಿನಲ್ಲಿ (ಪ್ರಸಕ್ತ ವರ್ಷ) ಶೂನ್ಯ ದಾಖಲಾತಿ ಕಾರಣಕ್ಕೆ ಬರೋಬ್ಬರಿ 55 ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದರಲ್ಲಿ 39 ಸರ್ಕಾರಿ, 4 ಅನುದಾನಿತ ಮತ್ತು 12 ಅನುದಾನರಹಿತ ಶಾಲೆಗಳಾಗಿವೆ.
ನಾಗಮಂಗಲ ತಾಲ್ಲೂಕಿನಲ್ಲಿ ಬೀಚನಹಳ್ಳಿ, ಅದ್ದಿಹಳ್ಳಿ, ಅರೆಅಲ್ಪಹಳ್ಳಿ, ಚೋಳಸಂದ್ರ, ಗರುಡನಹಳ್ಳಿ, ಕಬ್ಬಿನಕೆರೆ; ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಬೆಟ್ಟದ ಹೊಸೂರು, ಒಡಕಹಳ್ಳಿ, ಮತ್ತಿಘಟ್ಟ, ಕಟ್ಟಹಳ್ಳಿ; ಪಾಂಡವಪುರ ತಾಲ್ಲೂಕಿನಲ್ಲಿ ಕ್ಯಾತನಹಳ್ಳಿಯ ಉರ್ದು ಶಾಲೆ ಮತ್ತು ಶಿಕಾರಿಪುರ ಶಾಲೆ ಹಾಗೂ ಮಂಡ್ಯ ತಾಲ್ಲೂಕಿನಲ್ಲಿ ಗುಂಡಾಪುರ, ಮುದ್ದನಘಟ್ಟ, ಮರಳೇಕೆರೆ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಖಾಲಿ ಕಟ್ಟಡಗಳಾಗಿ ಉಳಿದಿವೆ.
ಆಂಗ್ಲ ಮಾಧ್ಯಮದ ವ್ಯಾಮೋಹ: ‘ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಠ್ಯಪುಸ್ತಕ ಸಮವಸ್ತ್ರ ಬಿಸಿಯೂಟ ಶೂ ಮತ್ತು ಸಾಕ್ಸ್ ನೀಡಿದರೂ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಕಟ್ಟಿ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಕಂಪ್ಯೂಟರ್ ಲ್ಯಾಬ್ ಪ್ರಯೋಗಾಲಯ ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುತ್ತಿದೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳಲು ಪೋಷಕರು ಮನಸು ಮಾಡಬೇಕು’ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ದಾಖಲಾತಿ ಆಂದೋಲನ ಪೋಷಕರ ಸಭೆ ಮಾಡುತ್ತಿದ್ದೇವೆ. ಆದರೂ ಹೆಚ್ಚಿನ ಸಂಖ್ಯೆಯ ಪೋಷಕರು ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಕಳೆದ ವರ್ಷ 10 ಮತ್ತು ಈ ವರ್ಷ 9 ಶಾಲೆಗಳು ಬಾಗಿಲು ಮುಚ್ಚಿವೆ’ ಎಂದು ನಾಗಮಂಗಲ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ ಕೆ. ತಿಳಿಸಿದರು.
ಮಕ್ಕಳ ದಾಖಲಾತಿ ಇಲ್ಲದ ಕಾರಣ ಪ್ರಸಕ್ತ ವರ್ಷ 55 ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಮುಂದಿನ ವರ್ಷ ಮಕ್ಕಳು ದಾಖಲಾದರೆ ಈ ಶಾಲೆಗಳು ಪುನರಾರಂಭವಾಗುತ್ತವೆ-ಎಚ್. ಶಿವರಾಮೇಗೌಡ, ಡಿಡಿಪಿಐ ಮಂಡ್ಯ
ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕೆಂಬ ನಿಯಮ ಜಾರಿಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗೆ ಸರ್ಕಾರ ಕ್ರಮಕೈಗೊಳ್ಳಬೇಕು-ಎಚ್.ಸಿ. ಮಂಜುನಾಥ, ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.