ADVERTISEMENT

ನಾಗರಹೊಳೆ–ಬಂಡೀಪುರದಲ್ಲಿ ಸಫಾರಿಗೆ ಆದೇಶ: ಷರತ್ತು ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 11:38 IST
Last Updated 20 ಫೆಬ್ರುವರಿ 2026, 11:38 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

ಮೈಸೂರು: ‘ಮಾನವ-ಹುಲಿ ಸಂಘರ್ಷದ ಕಾರಣದಿಂದಾಗಿ ಕಳೆದ ನ.7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಲಾಗಿದೆ. ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಅರಣ್ಯ, ಜೀವಿವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶುಕ್ರವಾರ ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಶನಿವಾರದಿಂದ ಸಫಾರಿ ಪುನರಾರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘನೆಯಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಈಗ ಬಳಸಬೇಕು. ಹೆಚ್ಚಾಗಿ ಬಸ್‌ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು. ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲಾಗುವುದು’ ಎಂದರು.

ವನ್ಯಜೀವಿಗಳು ಕಾಡಿನಿಂದ ಹೊರಬಾರದಂತೆ ಕ್ರಮಕ್ಕೆ ಸೂಚನೆ: ‘ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿಲೋ ಮೀಟರ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಿಸಿ ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಂಡು ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಯಾವುದೇ ಸೌಲಭ್ಯ ಬೇಕಿದ್ದರೂ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದರು.

ಮಾನವ ಜೀವ ರಕ್ಷಣೆ ಆದ್ಯತೆ: ‘ವನ್ಯಜೀವಿಗಳ ರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳ ಜೀವ ರಕ್ಷಣೆಯೂ ಅರಣ್ಯ ಇಲಾಖೆಯ ಪ್ರಥಮ ಆದ್ಯತೆ ಆಗಿದೆ. ಇದರ ಜೊತೆಗೆ ಬೆಳೆ ರಕ್ಷಣೆಗೂ ಒತ್ತು ನೀಡಬೇಕು’ ಎಂದು ತಿಳಿಸಿದರು.

‘ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ವಸತಿ ಪ್ರದೇಶಗಳಲ್ಲಿನ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು, ಜಾನುವಾರುಗಳಿಗೆ ಮೇವು ಒದಗಿಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಿಯೋಗಿಸಬೇಕು’ ಎಂದು ಹೇಳಿದರು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ: ‘ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಆಗಬೇಕಾದರೆ ಸ್ಥಳೀಯರ ನೆರವು, ಸಹಕಾರ, ಸಹಯೋಗ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಸೌಹಾರ್ದದಿಂದ ವರ್ತಿಸಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆ ಮಾಡಬೇಕು’ ಎಂದು ಸೂಚಿಸಿದರು.

ಇ-ಗಸ್ತು ಅಳವಡಿಕೆಗೆ ಸೂಚನೆ: ‘ಇಲಾಖೆಯ ಕಾಯಂ ಸಿಬ್ಬಂದಿ ಕಡ್ಡಾಯವಾಗಿ ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶ ಬಳಸಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಬೇಕು’ ಎಂದರು.

‘ಸಮಗ್ರ ಕಮಾಂಡ್ ಕೇಂದ್ರದಲ್ಲಿ ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಕೂಡಲೇ ಸಂಬಂಧಿಸಿದ ವಲಯದ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಬೇಕು. 1926 ದೂರವಾಣಿ ಸಂಖ್ಯೆಗೆ ಬರುವ ದೂರು ಮತ್ತು ಮಾಹಿತಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಸೂಚಿಸಿದರು.

ಕಾಳ್ಗಿಚ್ಚು ನಿಯಂತ್ರಿಸಬೇಕು: ‘ನಾಗರಹೊಳೆ, ಬಂಡೀಪುರ, ಬಿ.ಆರ್.ಟಿಯಲ್ಲಿ ಈ ಬೇಸಿಗೆಯಲ್ಲಿ ಕಾಳ್ಗಿಚ್ಚು ನಿಯಂತ್ರಿಸಲು ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ಯಾವುದೇ ವನ್ಯಜೀವಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡಿನಿಂದ ಹೊರಬಾರದಂತೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಮೈಸೂರು ನಗರದಲ್ಲಿ ಹೆಚ್ಚಿನ ಸಸಿ ನೆಡಿ: ಮುಂಬರುವ ಮಳೆಗಾಲದಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಪಟ್ಟಣ, ನಗರ ಪ್ರದೇಶಗಳ ರಸ್ತೆಯ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸಬೇಕು ಎಂದು ಸೂಚಿವರು ಸೂಚಿಸಿದರು.

‘ವೃಕ್ಷ ಸಂರಕ್ಷಣೆ ಮತ್ತು ವೃಕ್ಷ ಸಂವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು.

ಸಿಸಿಎಫ್ ಮಾಲತಿ ಪ್ರಿಯಾ, ಹುಲಿ ಯೋಜನೆಯ ನಿರ್ದೇಶಕ ರಮೇಶ್‌ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಪತಿ, ಸೋನಾಲ್, ಪ್ರಭಾಕರನ್, ಸೀಮಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.