ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಲೇಖಕಿ ಬಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಾಮುಂಡೇಶ್ವರಿ ಮೂರ್ತಿಗೆ ದೀಪ ಬೆಳಗಿ ದಸರಾ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಮೈಸೂರು: ‘ನನ್ನ ಬದುಕು ನನಗೆ ಹಲವು ಪಾಠ ಕಲಿಸಿದೆ. ವ್ಯಷ್ಟಿಯಿಂದ ಸಮಷ್ಟಿಯತ್ತ ಸಾಗುವುದೇ ನಿಜವಾದ ದಾರಿ ಎಂಬುದು ಅದರಲ್ಲೊಂದು. ನನ್ನ ಧಾರ್ಮಿಕ ನಂಬಿಕೆ, ಜೀವನದರ್ಶನ ಜೀವಪರವಾಗಿದೆ. ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು, ಹಗೆಗಳಿಂದಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು’
–ನಾಡದೇವಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಸೋಮವಾರ ದೀಪ ಬೆಳಗಿ, ಪುಷ್ಪಾರ್ಪಣೆ ಮಾಡಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ ಲೇಖಕಿ ಬಾನು ಮುಷ್ತಾಕ್ ಮಾಡಿದ ಪ್ರತಿಪಾದನೆ ಇದು.
‘ಎಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿಯು ಯಾರನ್ನೂ ಹೊರತಳ್ಳುವುದಿಲ್ಲ. ಆದರೆ ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ’ ಎಂದು ಹೇಳಿದರು.
ಸೌಹಾರ್ದ, ಸಮಾನತೆಗಾಗಿ ಶ್ರಮಿಸಿದ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬಾನು ಸ್ಮರಿಸಿದರು.
‘ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ, ತಂಪಾದ ನದಿಯಂತೆ, ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ದ್ವೇಷ, ರಕ್ತಪಾತದಲ್ಲಿ ಮನುಕುಲ ಮುಳುಗಿರುವಾಗ, ದಸರಾ ಘೋಷಣೆಯು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ. ಸರ್ವಜನಾಂಗದ ಶಾಂತಿಯ ತೋಟ’ ಎಂದು ಹೇಳಿದರು.
‘ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ, ಮೌಲ್ಯ. ಅದನ್ನು ಗೌರವಿಸೋಣ. ಇಲ್ಲಿ ಸೌಹಾರ್ದದ ಕುರುಹುಗಳಿವೆ. ಇಲ್ಲಿನ ಬಿಸಿಲು ಕೂಡ ಮಾನವೀಯತೆಯ ಪ್ರತೀಕವಾಗಿದೆ. ಶಕ್ತಿ, ಧೈರ್ಯ, ಮಮತೆ ಹಾಗೂ ರಕ್ಷಕತ್ವದ ಸಂಕೇತವಾದ ದೇವಿ ಚಾಮುಂಡಿ ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ’ ಎಂದು ಆಶಿಸಿದರು.
‘ದಸರೆ ಎಂದರೆ ಹಬ್ಬವಷ್ಟೇ ಅಲ್ಲ. ನಾಡಿನ ನಾಡಿ ಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಳ್ಳುವ ಗಳಿಗೆ. ಸಮನ್ವಯ ಮೇಳ. ವೈವಿಧ್ಯದಲ್ಲಿ ಏಕತೆ ಇರುವ ಸುಗಂಧ. ದಸರಾ ಹಬ್ಬ ಮೈಸೂರು ನಗರಕ್ಕೆ, ನಾಡಿಗೆ, ದೇಶಕ್ಕೆ ಸೀಮಿತವಾಗದೇ, ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳಗಿಸಲಿ. ಇಂದು ಬೆಳಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ’ ಎಂದು ಹೇಳಿದರು.
‘ಈ ನೆಲದಲ್ಲಿ ಹುಟ್ಟಿದ ಪ್ರತಿ ಜೀವಕ್ಕೂ ಈ ಮಣ್ಣಿನ ವಾರಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ. ನವರಾತ್ರಿಯಲ್ಲಿ ಉರ್ದು ಭಾಷಿಕರು ತಮ್ಮ ಗುರುತು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ವಾಸವಿದ್ದ ನನ್ನ ಆಪ್ತ ಸಂಬಂಧಿ ಮೊಹಮದ್ ಗೌಸ್ ಎಂಬವರು ಮೈಸೂರು ಮಹಾರಾಜರ ಅಂಗರಕ್ಷಕ ಪಡೆ ಸೈನಿಕರಾಗಿದ್ದರು. ಅಂಥ ಹಲವರು ಅಂಗರಕ್ಷಕ ಪಡೆಯಲ್ಲಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ಅನುಮಾನಿಸದೆ ಅಂಗರಕ್ಷಕ ಪಡೆಗೆ ನೇಮಿಸಿಕೊಂಡಿದ್ದರು. ಇದು ಅವಿಸ್ಮರಣೀಯವಾದ ಹೆಮ್ಮೆ’ ಎಂದು ನೆನಪಿಸಿಕೊಂಡರು.
‘ಇತಿಹಾಸದತ್ತ ನೋಡಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ಅವರು ಹಂಚಿಕೊಳ್ಳುವ ಮನದ ಅರಸ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಭೇದ ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಅವರು ನೀಡಿದ ಸಂದೇಶ, ಸಂಪತ್ತನ್ನು ಹಂಚಿದಾಗ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ’ ಎಂದು ಅಭಿಪ್ರಾಯಪಟ್ಟರು.
ಹತ್ತು ವರ್ಷದ ಹಿಂದೆ ಬರೆದ ‘ಬಾಗಿನ’ ಕವಿತೆಯನ್ನು ಭಾಷಣದ ಕೊನೆಗೆ ಓದಿದ ಅವರು, ಬಾಗಿನ ಪಡೆದ ಮುಸ್ಲಿಂ ಮಹಿಳೆಯಲ್ಲಿ ಮೂಡುವ ಭಾವನೆಗಳನ್ನು ಬಣ್ಣಿಸಿದರು.
ಸೌಹಾರ್ದ ಸಾರಿದ ದಸರಾ
ಮೈಸೂರು: ಹಿಂದೆಂದೂ ಕಾಣದ ಪೊಲೀಸ್ ಬಿಗಿ ಭದ್ರತೆ ‘ಅಘೋಷಿತ ನಿಷೇಧಾಜ್ಞೆ’ ನಡುವೆ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ಉದ್ಘಾಟನೆಗೊಂಡ ನಾಡಹಬ್ಬ ಮೈಸೂರು ದಸರಾ ಉತ್ಸವವು ರಾಜ್ಯದಲ್ಲಿ ಕೋಮು ಸೌಹಾರ್ದ ಧಾರ್ಮಿಕ ಸಹಿಷ್ಣುತೆ ಮತ್ತು ಭಾಷಾ ಸಾಮರಸ್ಯದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿತು. ‘ಜೈ ಹಿಂದ್’ ‘ಜೈ ಕರ್ನಾಟಕ’ ದ ಜೊತೆಗೆ ‘ಜೈ ಸಂವಿಧಾನ’ ಘೋಷಣೆಯೂ ಮೊಳಗಿತು.
ನೂರು ವರ್ಷ ಪೂರೈಸಿದ ಕುವೆಂಪು ಅವರ ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಲು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಅನುರಣಿಸಿತು. ‘ದಸರೆಯು ಎಲ್ಲ ಜಾತಿ ಧರ್ಮಗಳ ಜನರ ಹಬ್ಬ’ ಎಂಬ ಗಟ್ಟಿ ಸಂದೇಶವನ್ನೂ ಸಾರಿತು. ನವರಾತ್ರಿ ಆಚರಣೆಯ ಮೊದಲ ದಿನದ ಬಣ್ಣವಾದ ಹಳದಿ ಸೀರೆಯುಟ್ಟು ಮೈಸೂರು ಮಲ್ಲಿಗೆ ಮುಡಿದು ಗಮನಸೆಳೆದ ಲೇಖಕಿ ಬಾನು ಮುಷ್ತಾಕ್ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಳಿಕ ದಸರಾ ಉದ್ಘಾಟಿಸಲು ಅವರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಕನ್ನಡಾಂಬೆ ಕುರಿತು ಅವರ ಹೇಳಿಕೆಯನ್ನು ಆಕ್ಷೇಪಿಸಿ ‘ಮುಸ್ಲಿಮರಾದ ಅವರು ಉತ್ಸವ ಉದ್ಘಾಟಿಸಬಾರದು’ ಎಂದು ಆಗ್ರಹಿಸಿದ್ದ ಬಿಜೆಪಿ ಮುಖಂಡರಿಗೆ ದಸರಾ ಉದ್ಘಾಟನೆ ವೇದಿಕೆಯಿಂದಲೇ ಸೌಹಾರ್ದ–ಸಹಿಷ್ಣುತೆಯ ಪಾಠ ಮಾಡಿದರು. ‘ಸಂವಿಧಾನದ ಪ್ರಸ್ತಾವನೆ ಓದಿ’ ಎಂದು ಹೇಳಿದ ಸುಪ್ರೀಂ ಕೋರ್ಟ್ ಸೂಚನೆ ಮತ್ತೆ ನೆನಪಾಗುವಂತೆಯೂ ಮಾಡಿದರು.
‘ಇದು ನನ್ನ ಜೀವನದ ಅತ್ಯಂತ ಗೌರವದ ಗಳಿಗೆ’ ಎಂಬ ಧನ್ಯತೆ ವ್ಯಕ್ತಪಡಿಸಿದ ಅವರ ಪ್ರತಿ ಮಾತು ಸಾಮರಸ್ಯ–ಸಹಿಷ್ಣುತೆ ಶಾಂತಿ ಪ್ರೀತಿಯ ಕುರಿತೇ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಮಾತನಾಡಿದ ಎಲ್ಲರೂ ಅದನ್ನೇ ಪುನರುಚ್ಚರಿಸಿದರು.
‘ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಮಾತು ಆರಂಭಿಸಿದ ಬಾನು ‘ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ ಬಣ್ಣದಲ್ಲೆ ಅರಳಲಿ ತನ್ನ ಸುವಾಸನೆಯನ್ನೇ ಬೀರಲಿ ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ’ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಾನು ಅವರ ಆಯ್ಕೆಯನ್ನು ಪ್ರಶ್ನಿಸಿದ್ದವರ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಅರ್ಜಿದಾರರಿಗೆ ಹೇಳಿದ್ದನ್ನು ಉಲ್ಲೇಖಿಸಿದರು.
‘ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪರವಾಗಿಯೇ ಇವೆ. ಎಲ್ಲರೂ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಗಳು’ ಎಂದು ಪ್ರತಿಪಾದಿಸಿದರು. ಶಾಸಕ ಜಿ.ಟಿ.ದೇವೇಗೌಡ ಅವರೂ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಎಲ್ಲ ಕಡೆ ಪೊಲೀಸರು: ಅಘೋಷಿತ ನಿಷೇಧಾಜ್ಞೆ
ಬಾನು ಮುಷ್ತಾಕ್ ಅವರ ಆಯ್ಕೆ ಖಂಡಿಸಿ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಯ ನಾಯಕರು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳಿಕೆ ನೀಡಿದ್ದರಿಂದ ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಗರದ ಎಲ್ಲ ರಸ್ತೆ ವೃತ್ತಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಲ್ಲಿಯೂ ಗುಂಪು ಸೇರಲು ಜನರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ನೂರಾರು ಪೊಲೀಸರು ಬಾನು ಅವರಿಗೆ ರಕ್ಷಣೆ ನೀಡಿ ಬೆಟ್ಟಕ್ಕೆ ಕರೆತಂದರು. ಅವರ ಕುಟುಂಬಸ್ಥರಿಗೆಂದೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಮೇಲೆ ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಒಳ ಹೊರಗೂ ಪೊಲೀಸರ ಕಣ್ಗಾವಲು ಹೆಚ್ಚಿತ್ತು. ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ನಿವಾಸಿಗಳಿಗೆ ಮನೆಯಿಂದ ಹೊರ ಬರಲು ಅವಕಾಶ ನೀಡಿರಲಿಲ್ಲ. ಪಾಸ್ ಇದ್ದ ಸಾರ್ವಜನಿಕರಿಗಷ್ಟೇ ಪ್ರವೇಶವಿದ್ದು ಅವರನ್ನು ತಪಾಸಣೆ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯಿಂದ ಮೂರು ಹಂತದ ಬಿಗಿ ತಪಾಸಣೆ ಮಾಡಲಾಯಿತು. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗಿತ್ತು.
ಓಲೈಕೆ ರಾಜಕಾರಣ ಬೇಡ; ಸಿದ್ದರಾಮಯ್ಯ
‘ಯಾರನ್ನೋ ಓಲೈಸಿ ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ ದೇಶಕ್ಕೆ ಮಾಡುವ ಅಪಚಾರ ಅಕ್ಷಮ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಮಾತನಾಡಿ ಸಭಿಕರನ್ನು ಹಿಡಿದಿಟ್ಟ ಅವರು ಸಂವಿಧಾನದ ಜಾತ್ಯತೀತ ಧರ್ಮಾತೀತ ಮೌಲ್ಯ ಪ್ರತಿಪಾದನೆಯನ್ನು ಒತ್ತಿ ಹೇಳಿದರು. ‘ರಾಜಕಾರಣ ಮಾಡಲು ಬೇರೆ ಸ್ಥಳ ಸಂದರ್ಭಗಳಿವೆ. ಗೋಡಾ ಹೈ ಮೈದಾನ್ ಹೈ. ಚುನಾವಣೆಯಲ್ಲಿ ರಾಜಕಾರಣ ಮಾಡಬೇಕೇ ಹೊರತು ದಸರೆಯಂಥ ಉತ್ಸವದಲ್ಲಿ ಅಲ್ಲ’. ‘ಬಾನು ಮುಷ್ತಾಕ್ ಅವರು ದಸರೆ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ’ ಮತ್ತೊಮ್ಮೆ ಸಮರ್ಥಿಸಿಕೊಂಡರು. ಬಾನು ಅವರ ಕತೆಗಳ ಅನುವಾದಕಿ ದೀಪಾ ಭಾಸ್ತಿಯವರನ್ನೂ ಸ್ಮರಿಸಿದರು. ಜೈ ಭಾರತ್ ಜೈ ಕರ್ನಾಟಕದ ಜೊತೆ ಜೈ ಸಂವಿಧಾನ ಎಂದು ಘೋಷಣೆ ಕೂಗಿದರು.
ದೇಗುಲದಲ್ಲೂ ಬಾನು ಪೂಜೆ
ಉದ್ಘಾಟನೆಗೂ ಮುನ್ನ ಬಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರು ನೀಡಿದ ಮಂಗಳಾರತಿಯನ್ನು ತೆಗೆದುಕೊಂಡರು. ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ರೇಷ್ಮೆ ಸೀರೆಯನ್ನು ‘ಬಾಗಿನ’ವಾಗಿ ನೀಡಿ ಸತ್ಕರಿಸಿದರು. ಈ ವೇಳೆ ಬಾನು ಅವರ ಕಣ್ಣಾಲಿಗಳು ತುಂಬಿ ಬಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.