ADVERTISEMENT

ದಸರಾ ಕವಿಗೋಷ್ಠಿಯಲ್ಲಿ ‘ಪಂಚ ಕಾವ್ಯದೌತಣ’

ಅನಾಥಾಶ್ರಮ, ವೃದ್ಧಾಶ್ರಮ, ಪೌರಕಾರ್ಮಿಕರ ಪ್ರತಿನಿಧಿಗಳಿಗೆ ಅವಕಾಶ

ಎಂ.ಮಹೇಶ್
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ಸಿ.ಪಿ. ಕೃಷ್ಣಕುಮಾರ್
ಸಿ.ಪಿ. ಕೃಷ್ಣಕುಮಾರ್   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ‘ಕವಿಗೋಷ್ಠಿ’ಗೆ ಈ ಬಾರಿ ಹೊಸತನದ ಸ್ಪರ್ಶ ನೀಡಲಾಗಿದ್ದು, ‘ಪಂಚ ಕಾವ್ಯದೌತಣ’ ಉಣಬಡಿಸಲು ತಯಾರಿ ನಡೆದಿದೆ.

‘ಪ್ರಭಾತ’, ‘ಪ್ರಚುರ’, ‘ಪ್ರಜ್ವಲ’ ‘ಪ್ರತಿಭಾ’ ಹಾಗೂ ‘ಪ್ರಬುದ್ಧ’ ಶೀರ್ಷಿಕೆಯಲ್ಲಿ ಕವಿಗೋಷ್ಠಿಗಳನ್ನು ವಿನ್ಯಾಸಗೊಳಿಸಲಾಗಿದ್ದು, ವಿಶೇಷ ವ್ಯಕ್ತಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಸೆ.23ರಿಂದ ಸೆ.27ರವರೆಗೆ ಕವಿಗೋಷ್ಠಿ ನಡೆಯಲಿದೆ. 23ರಂದು ಬೆಳಿಗ್ಗೆ 10.30ಕ್ಕೆ ‘ಪಂಚ ಕಾವ್ಯದೌತಣ’ಕ್ಕೆ ಚಾಲನೆ ದೊರೆಯಲಿದ್ದು, ಅಂದು ‘ಪ್ರಭಾತ’ ಕವಿಗೋಷ್ಠಿಯನ್ನು ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸುವರು. 24ರಂದು ‘ಪ್ರಚುರ ಕವಿಗೋಷ್ಠಿ’ಯನ್ನು ಗೀತೆ ರಚನೆಕಾರ ಜೋಗಿ ಪ್ರೇಮ್‌ ಉದ್ಘಾಟಿಸುವರು. 25ರಂದು ಪ್ರಜ್ವಲ ಕವಿಗೋಷ್ಠಿಗೆ ಗೀತ ರಚನೆಕಾರ ಪ್ರಮೋದ್ ಮರವಂತೆ ಚಾಲನೆ ನೀಡಲಿದ್ದಾರೆ. 26ರಂದು ಪ್ರತಿಭಾ ಕವಿಗೋಷ್ಠಿಗೆ ಪ್ರೊ.ನಂಜಯ್ಯ ಹೊಂಗನೂರು ಹಾಗೂ 27ರಂದು ನಡೆಯುವ ಪ್ರಬುದ್ಧ ಕವಿಗೋಷ್ಠಿ ಉದ್ಘಾಟನೆಗೆ ಸಿ.ಪಿ. ಕೃಷ್ಣಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಪ್ರಾದೇಶಿಕ ಬದಲಿಗೆ: ‘ಈ ಬಾರಿ ‘ಪ್ರಾದೇಶಿಕ’ ಬದಲಿಗೆ ‘ಪ್ರಭಾತ’ ಕವಿಗೋಷ್ಠಿಯನ್ನು ನಡೆಸಲಾಗುತ್ತಿದ್ದು, ಒಂದು ಕವನಸಂಕಲನ ಪ್ರಕಟಿಸಿರುವವರನ್ನು ಆಯ್ಕೆ ಮಾಡಿದ್ದೇವೆ. ‘ಪ್ರಚುರ’ ವಿಭಾಗದಲ್ಲಿ ಕವಿತೆ ರಚಿಸುವ ಅಭಿರುಚಿಯುಳ್ಳ ಅನಾಥಾಶ್ರಮದವರು, ವೃದ್ಧಾಶ್ರಮ ನಿವಾಸಿಗಳು, ಪೌರಕಾರ್ಮಿಕರು, ವಿಶೇಷ ವ್ಯಕ್ತಿಗಳು, ಲಿಂಗತ್ವ ಅಲ್ಪಸಂಖ್ಯಾತರಿಗೆ ಇದೇ ಮೊದಲ ಬಾರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಹಾಸ್ಯಕಾವ್ಯದ ಜುಗಲ್‌ಬಂದಿ ಹಾಗೂ ಜನಪದ ಕವಿಗೋಷ್ಠಿಯೂ ನಡೆಯಲಿದೆ. ಜಿಲ್ಲಾ ಹಾಗೂ ಭಾಷಾವಾರು ಪ್ರಾತಿನಿಧ್ಯ ಇರಲಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಹಾಗೂ ಕವಿಗೋಷ್ಠಿ ಉಪ ಸಮಿತಿಯ ಕಾರ್ಯದರ್ಶಿ ಪ್ರೊ.ಎನ್.ಕೆ. ಲೋಲಾಕ್ಷಿ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಕಳೆದ ವರ್ಷ ‘ಪಂಚ ಕಾವ್ಯೋತ್ಸವ’ದ ಶೀರ್ಷಿಕೆಯಲ್ಲಿ, ‘ಪ್ರಾದೇಶಿಕ’, ‘ವಿಶಿಷ್ಟ’, ‘ವಿನೋದ’, ‘ವೈವಿಧ್ಯ‘ ಹಾಗೂ ‘ಸಮಗ್ರ’ ಎಂಬ ಐದು ಕವಿಗೋಷ್ಠಿಗಳನ್ನು ನಡೆಸಲಾಗಿತ್ತು.

ನಾಡಗೀತೆಗೆ 100: ಕುವೆಂಪು ಸಂಸ್ಥೆಯಲ್ಲಿ ಕವಿಗೋಷ್ಠಿ

ನಾಡಗೀತೆ ರಚನೆಯಾಗಿ ನೂರು ವರ್ಷ ತುಂಬಿದ ನೆನಪಿಗಾಗಿ ಕುವೆಂಪು ಅವರಿಗೆ ಗೌರವ ಸಲ್ಲಿಸಲು ಇದೇ ಮೊದಲ ಬಾರಿಗೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಎಲ್ಲ ಕವಿಗೋಷ್ಠಿಗಳನ್ನೂ ಏರ್ಪಡಿಸಿರುವುದು ವಿಶೇಷ. ಈ ಹಿಂದೆ ಪ್ರತಿ ಕವಿಗೋಷ್ಠಿಯೂ ಬೇರೆ ಸಭಾಂಗಣಗಳಲ್ಲಿ ನಡೆಯುತ್ತಿತ್ತು. ಪ್ರಸಿದ್ಧ ಹಿರಿಯ ಕವಿಗಳು ಪಾಲ್ಗೊಳ್ಳುವ ಪ್ರಧಾನ ಕವಿಗೋಷ್ಠಿಯನ್ನು ಜಗನ್ಮೋಹನ ಅರಮನೆ ಸಭಾಂಗಣದಲ್ಲೇ ನಡೆಸಲಾಗುತ್ತಿತ್ತು.  ‘ಕುವೆಂಪು ಓಡಾಡಿದ ನೆಲದಲ್ಲಿ ಕವನ ವಾಚಿಸಬೇಕೆಂಬ ಕವಿಗಳ ಬಯಕೆ ಈ ಬಾರಿ ಈಡೇರಲಿದೆ. ಅದಕ್ಕಾಗಿ ಬಿಎಂಶ್ರೀ ಸಭಾಂಗಣದ ದುರಸ್ತಿ ನಡೆದಿದೆ. ವೈ–ಫೈ ಎಲ್‌ಇಡಿ ಪರದೆ ಅಳವಡಿಸಲಾಗುವುದು’ ಎಂದು ಪ್ರೊ.ಲೋಲಾಕ್ಷಿ ಮಾಹಿತಿ ನೀಡಿದರು.

ಪ್ರೇಮ್‌
ಪ್ರಮೋದ್‌ ಮರವಂತೆ
ಅರವಿಂದ ಮಾಲಗತ್ತಿ
ಪ್ರೊ.ನಂಜಯ್ಯ ಹೊಂಗನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.