
ಮನುಸ್ಮೃತಿಗೆ ಬೆಂಕಿ
ಮೈಸೂರು: ‘ಮನುಸ್ಮೃತಿಯನ್ನು ಸುಡಬೇಕು, ಸಮಾನತೆಯ ಜ್ಯೋತಿಯನ್ನು ಸಮಾಜದೆಲ್ಲೆಡೆ ಬೆಳಗಬೇಕು’ ಎಂಬ ಆಶಯ ಇಲ್ಲಿ ವ್ಯಕ್ತವಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಯವರು ಪುರಭವನದ ಆವರಣದಲ್ಲಿ ಮನುಸ್ಮತಿಯ ಪ್ರತಿಯನ್ನು ಸುಟ್ಟು ಹಾಕಿದರು.
ಅಂಬೇಡ್ಕರ್ ಪ್ರತಿಮೆ ಎದುರು ಸೇರಿದ ಕಾರ್ಯಕ್ರರ್ತರು, ‘ಜಾತಿ ಬಿಡಿ-ಮತ ಬಿಡಿ’, ‘ಮಾನವತೆಗೆ ಜೀವ ಕೊಡಿ’ ಮೊದಲಾದ ಘೋಷಣೆಗಳನ್ನು ಕೂಗಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಮಾತನಾಡಿ, ‘ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮತಿಯನ್ನು ಅಂಬೇಡ್ಕರ್ ಸುಟ್ಟಿದ್ದರು. ಇದಾಗಿ ದಶಕಗಳೇ ಉರುಳಿದ್ದರೂ ಜಾತಿ, ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಬಾಲ್ಯವಿವಾಹ, ಬೆತ್ತಲೆಸೇವೆ ಮೊದಲಾದವು ನಿಂತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಸಮ ಸಮಾಜದ ನಿರ್ಮಾಣದ ಕನಸು ಹೊತ್ತು ಸಮಾನತೆ, ಸಹೋದರತೆಯ ಆಶಯದೊಂದಿಗೆ ಸಂವಿಧಾನದ ಮೂಲಕ ದೊಡ್ಡ ಕೊಡುಗೆಯನ್ನು ಅಂಬೇಡ್ಕರ್ ನೀಡಿದ್ದಾರೆ’ ಎಂದು ಸ್ಮರಿಸಿದರು.
‘ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ರಚನೆಕಾರರು ಮನುಸ್ಮತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರ್‌ಎಸ್‌ಎಸ್ ಆಗ ಹೇಳಿತ್ತು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹಿಂದಿನಿಂದಲೂ ಅಂಬೇಡ್ಕರ್ ಅವರ ಮೇಲೆ ಮತ್ತು ಸಂವಿಧಾನದ ಬಗ್ಗೆ ಅಸಹಿಷ್ಣುತೆ ಹೊಂದಿದೆ. ಮನುಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ ಪ್ರಜಾತಾಂತ್ರಿಕ ಸಂವಿಧಾನವನ್ನು ನಾವು ರೂಪಿಸಿಕೊಂಡಿದ್ದನ್ನು ಸಹಿಸದ ಶಕ್ತಿಗಳು ಈಗಲೂ ಇವೆ. ಇನ್ನೂ ಮತ್ತಷ್ಟು ಬಲಗೊಳ್ಳುತ್ತಿವೆ’ ಎಂದು ದೂರಿದರು.
‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸಾರಿರುವ ಯುದ್ಧಕ್ಕೆ ಪ್ರತಿಯಾಗಿ ನಾವು ಜಾಗೃತಿ ಮೂಡಿಸಬೇಕು. ಅಂಬೇಡ್ಕರ್ ಹೋರಾಟ ಮುಂದುವರಿಸಬೇಕು’ ಎಂದು ಆಶಿಸಿದರು.
ಲೀಡ್ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಕೆ.ಎನ್.ಶಿವಲಿಂಗಯ್ಯ, ಮುಖಂಡರಾದ ಪ್ರಕಾಶ್, ತಿಮ್ಮೇಗೌಡ, ಆರ್.ಸೋಮಣ್ಣ, ಶಿವು, ಕಳಸ್ತವಾಡಿ ಶಿವು, ರಾಜಣ್ಣ, ಚಕ್ಕೂರು ಶಿವು, ಮಲ್ಲಿಕಾರ್ಜುನ, ಮಹದೇವಮ್ಮ, ರಮೇಶ್, ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.