ADVERTISEMENT

SM Krishna: ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ; ಬದುಕು ರೂಪಿಸಿದ್ದು ಮೈಸೂರಿನಲ್ಲಿ..

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 9:00 IST
Last Updated 10 ಡಿಸೆಂಬರ್ 2024, 9:00 IST
<div class="paragraphs"><p>2024ರ ಮಾರ್ಚ್‌ನಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಜಾವಗಲ್ ಶ್ರೀನಾಥ್, ಎಂ.ಆರ್. ಸೀತಾರಾಮ್, ಎಸ್.ಎಂ. ಕೃಷ್ಣ ಹಾಗೂ ಭಾಷ್ಯಂ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. </p></div>

2024ರ ಮಾರ್ಚ್‌ನಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಜಾವಗಲ್ ಶ್ರೀನಾಥ್, ಎಂ.ಆರ್. ಸೀತಾರಾಮ್, ಎಸ್.ಎಂ. ಕೃಷ್ಣ ಹಾಗೂ ಭಾಷ್ಯಂ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

   

ಪ್ರಜಾವಾಣಿ ಸಂಗ್ರಹ ಚಿತ್ರ

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಓದಿದ್ದು, ಬದುಕು ರೂಪಿಸಿಕೊಂಡಿದ್ದು ಮೈಸೂರಿನಲ್ಲಿ. ಆರೇಳು ವರ್ಷ ಕಾಲ ಇಲ್ಲಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿನಿಲಯದಲ್ಲಿ ಬಾಲ್ಯ ಕಳೆದ ಅವರು, ನಂತರದಲ್ಲೂ ಆಶ್ರಮದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು.

ADVERTISEMENT

ಮಂಡ್ಯದವರಾದ ಕೃಷ್ಣರ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗೆ ಅವರ ಓದು ಮುಂದುವರಿದಿದ್ದು ಮೈಸೂರಿನಲ್ಲೇ. ಒಂಟಿಕೊಪ್ಪಲಿನ ಮಹಾಜನ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಗೆ ಸೇರ್ಪಡೆಗೊಂಡ ಕೃಷ್ಣ ನಂತರ ರಾಮಕೃಷ್ಣ ಆಶ್ರಮದ ಸಖ್ಯಕ್ಕೆ ಬಂದರು. ಆಶ್ರಮದ ವಿದ್ಯಾರ್ಥಿನಿಲಯದಲ್ಲಿ, ವೇದಾನಂದ–ಶಾಂಭವಾನಂದ ಮಹಾರಾಜರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧ ಜೀವನ ಅವರದ್ದಾಯಿತು.

ಬಾಲ್ಯದಲ್ಲೇ ಉತ್ತಮ ವಾಗ್ಮಿ ಆಗಿದ್ದ ಕೃಷ್ಣ ಸಂಗೀತ, ಯೋಗಾಭ್ಯಾಸದಂತಹ ಚಟುವಟಿಕೆಗಳಲ್ಲೂ ಮುಂದು. ಆಶ್ರಮದ ಭಜನಾ ತಂಡದೊಂದಿಗೆ ತಬಲಾ ನುಡಿಸುತ್ತ ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಹ ಕೊಟ್ಟಿದ್ದರು.

‘ರಾಮಕೃಷ್ಣ ಆಶ್ರಮದ ವಿದ್ಯಾರ್ಥಿನಿಲಯದಲ್ಲಿದ್ದ ವೇಳೆ ಒಂಟಿಕೊಪ್ಪಲಿನಲ್ಲಿ ನಾನು ಸೇರಿದಂತೆ 24 ಮಂದಿ ಕೊಠಡಿಯಲ್ಲಿದ್ದೆವು. ಆಗ ಶಾಂಭವಾನಂದ ನೇತೃತ್ವದಲ್ಲಿ ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದೆವು. ನಮಗೆಲ್ಲರಿಗೂ ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ ಮಾಡಿಸಿದ್ದರು’ ಎಂದು ಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭ ನೆನೆದಿದ್ದರು.

ತಮಗೆ ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ ಜೊತೆ ದೊರೆತ ₹5 ಲಕ್ಷ ಹಾಗೂ ವೈಯಕ್ತಿಕ ದೇಣಿಗೆಯಾಗಿ ₹2 ಲಕ್ಷವನ್ನು ಆಶ್ರಮಕ್ಕೆ ದೇಣಿಗೆ ನೀಡಿದ್ದರು.

ಮಹಾರಾಜ ಕಾಲೇಜಿನಲ್ಲಿ ಪದವಿ:

1948ರಲ್ಲಿ ಮಹಾಜನ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಅವರು ನಂತರ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್‌ ಓದಿದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯ ಆಯ್ದುಕೊಂಡ ಅವರಿಗೆ ರಾಷ್ಟ್ರಕವಿ ಕುವೆಂಪು, ಎಂ.ಎ. ಗೋಪಾಲಸ್ವಾಮಿ, ಟಿ.ಎ. ಪುರುಷೋತ್ತಮ್‌, ದೇಜಗೌ, ಸಿ.ಡಿ. ನರಸಿಂಹಯ್ಯರಂತಹ ಗುರುಗಳ ಮಾರ್ಗದರ್ಶನ ಸಿಕ್ಕಿತು.

ಕಾಲೇಜಿನಲ್ಲಿದ್ದಾಗ ವಾಲಿಬಾಲ್ ಮತ್ತು ಟೆನಿಸ್ ಅವರ ಇಷ್ಟದ ಆಟಗಳು. ನಂತರದಲ್ಲೂ ಟೆನಿಸ್ ವರ ನೆಚ್ಚಿನ ಆಟವಾಗಿತ್ತು.

ರಾಮಕೃಷ್ಣ ಆಶ್ರಮದಲ್ಲಿ 2022ರ ಜುಲೈ 10ರಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸ್ವಾಮಿ ಮುಕ್ತಿದಾನಂದ ವಿರಚಿತ ‘ವಿವೇಕ ಮಾರ್ಗದರ್ಶಿ’ ಮತ್ತು ‘ಸ್ವಾಮಿ ಶಾಂಭವಾನಂದ: ಎ ಮಾಂಕ್ ವಿತ್ ಎ ವಿಷನ್ ಆ್ಯಂಡ್ ಮಿಷನ್’ ಕೃತಿಗಳನ್ನು ಬಿಡುಗಡೆ ಮಾಡಿದರು. ಸ್ವಾಮಿ ಮುಕ್ತಿದಾನಂದ, ಪಾರ್ಥಸಾರಥಿ ಹಾಗೂ ಕೀರ್ತಿ ಕುಮಾರ್ ಜೊತೆಗಿದ್ದರು

ಗೌರವ ಡಾಕ್ಟರೇಟ್‌:

ಮೈಸೂರು ವಿಶ್ವವಿದ್ಯಾಲಯವು ಇದೇ ವರ್ಷ ಮಾರ್ಚ್‌ನಲ್ಲಿ ನಡೆದ 104ನೇ ಘಟಿಕೋತ್ಸವದಲ್ಲಿ ಎಸ್‌.ಎಂ. ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್‌ ನೊಂದಿಗೆ ಗೌರವಿಸಿತ್ತು.

ಅರಮನೆಯೊಡನೆ ನಂಟು:

ಎಸ್.ಎಂ. ಕೃಷ್ಣರ ತಂದೆ ಮಲ್ಲಯ್ಯನವರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದು, ಅರಮನೆ ಹಾಗೂ ಮೈಸೂರಿನೊಡನೆ ನಂಟು ಹೊಂದಿದ್ದರು. ಕೃಷ್ಣ ಅವರೂ ಮೈಸೂರು ರಾಜವಂಶಸ್ಥರ ಜೊತೆ ಉತ್ತಮ ಒಡನಾಟ ಹೊಂದಿದ್ದು, ಶ್ರೀಕಂಠದತ್ತ ಒಡೆಯರ್‌ ಸ್ನೇಹಿತರಾಗಿದ್ದರು.

ಮೈಸೂರು ಭಾಗದ ಅನೇಕ ರಾಜಕಾರಣಿಗಳಿಗೆ ಕೃಷ್ಣ ತಮ್ಮ ಸಂಪುಟದಲ್ಲಿ ಅವಕಾಶ ನೀಡಿದ್ದರು. ಎಚ್‌. ವಿಶ್ವನಾಥ್‌, ಕೋಟೆ ಶಿವಣ್ಣ, ಬೆಂಕಿ ಮಹದೇವು ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಮೈಸೂರಿನ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೃಷ್ಣ ನೆರವಾಗಿದ್ದರು. ಮೈಸೂರು–ಬೆಂಗಳೂರು ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ ಆಗಿದ್ದು ಕೃಷ್ಣ ಕಾಲದಲ್ಲಿ. ಮೈಸೂರು ಹೊರವರ್ತುಲ ರಸ್ತೆ ಅಭಿವೃದ್ಧಿ ಆಗಿದ್ದೂ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ.

ಮೈಸೂರಿನ ಸುತ್ತೂರು ಮಠ, ರಾಜೇಂದ್ರ–ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಈ ಭಾಗದ ಮಠಗಳು, ಸ್ವಾಮೀಜಿಗಳ ಜೊತೆಗೂ ಕೃಷ್ಣ ಉತ್ತಮ ಬಾಂಧವ್ಯ ಹೊಂದಿದ್ದರು.

ಮಾಜಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಕೃಷ್ಣ, ಇದೇ ವರ್ಷ ಮಾರ್ಚ್‌ನಲ್ಲಿ ನಡೆದ ಪ್ರಸಾದ್ ಅವರ ರಾಜಕೀಯ ಸುವರ್ಣ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲೂ ಭಾಗಿ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.