ಮೈಸೂರಿನಲ್ಲಿ ಗುರುವಾರ ಮುಕ್ತಾಯಗೊಂಡ ‘ಸಿ.ಎಂ. ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಸಮಗ್ರ ಚಾಂಪಿಯನ್ಸ್ ಬೆಂಗಳೂರು ನಗರ ವಿಭಾಗ ತಂಡ ಪ್ರಶಸ್ತಿಯೊಂದಿಗೆ.
ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರು: ಅಥ್ಲೆಟಿಕ್ಸ್ ಹಾಗೂ ಗುಂಪು ವಿಭಾಗದ ಕ್ರೀಡೆಗಳೆರೆಡರಲ್ಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ನಗರ ವಿಭಾಗವು ‘ಸಿ.ಎಂ. ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬೆಂಗಳೂರು ನಗರ ವಿಭಾಗವು ಒಟ್ಟು 865 ಅಂಕಗಳೊಂದಿಗೆ ಈ ಸಾಧನೆ ಮಾಡಿತು. ಮೈಸೂರು ವಿಭಾಗ ತಂಡವು 597 ಅಂಕಗಳೊಂದಿಗೆ ರನ್ನರ್ ಅಪ್ ಹಾಗೂ ಬೆಳಗಾವಿ ವಿಭಾಗವು 493 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು. 319 ಅಂಕ ಗಳಿಸಿದ ಬೆಂಗಳೂರು ಗ್ರಾಮಾಂತರ ಹಾಗೂ 104 ಅಂಕದೊಂದಿಗೆ ಕಲಬುರಗಿ ವಿಭಾಗ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದವು.
ಆಶ್ರಿತ್, ನಿಯೋಲ್‌ಗೆ ಪ್ರಶಸ್ತಿ:
ಅಥ್ಲೆಟಿಕ್ಸ್ ಪುರುಷರ ವಿಭಾಗದಲ್ಲಿ 800 ಮೀ. ಓಟ, 1500 ಮೀ ಓಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಎಂ.ಎಸ್. ಆಶ್ರಿತ್ 1006 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆದರು. ಮಹಿಳಾ ವಿಭಾಗದಲ್ಲಿ 100 ಮೀ. ಓಟದ ವಿಜೇತೆ ನಿಯೋಲ್ ಅನಾ ಕಾರ್ನೆಲಿಯೊ 991 ಅಂಕಗಳೊಂದಿಗೆ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಥ್ಲೆಟಿಕ್ಸ್ ಪುರುಷರ ವಿಭಾಗದಲ್ಲಿ 9 ಹಾಗೂ ಮಹಿಳೆಯರ ವಿಭಾಗದಲ್ಲಿ 7 ಸೇರಿದಂತೆ ಒಟ್ಟಾರೆ 16 ಕೂಟ ದಾಖಲೆಗಳು ನಿರ್ಮಾಣ ಆದವು.
ಅಥ್ಲೆಟಿಕ್ಸ್ ಮಹಿಳಾ ವಿಭಾಗದಲ್ಲಿ ಮೈಸೂರು ವನಿತೆಯರು ಒಟ್ಟು 7 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟಾರೆ 95 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರು. ಬೆಂಗಳೂರು ನಗರ 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನೊಂದಿಗೆ 59 ಅಂಕ ಗಳಿಸಿ ದ್ವಿತೀಯ ಹಾಗೂ ಬೆಳಗಾವಿ 2 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 50 ಅಂಕ ಸ್ಥಾನ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಅಥ್ಲೆಟಿಕ್ಸ್ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಸ್ಪರ್ಧಿಗಳು 3 ಚಿನ್ನ, 8 ಬೆಳ್ಳಿ, 4 ಕಂಚಿನೊಂದಿಗೆ 77 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಬೆಳಗಾವಿ ವಿಭಾಗವು 4 ಚಿನ್ನ, 1 ಬೆಳ್ಳಿ, 8 ಕಂಚಿನೊಂದಿಗೆ ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗವು 6 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನೊಂದಿಗೆ 56 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯಿತು.
ಕೊನೆಯ ದಿನದ ಫಲಿತಾಂಶ: ಅಥ್ಲೆಟಿಕ್ಸ್:
ಪುರುಷರು: 10 ಕಿ.ಮೀ. ಓಟ: ಆರ್. ಪುರುಷೋತ್ತಮ (ಮೈಸೂರು. ಕಾಲ: 32 ನಿ. 36.46 ಸೆ.)–1, ಟಿ.ಎಸ್. ಸಂದೀಪ್ (ಬೆಂಗಳೂರು)–2, ಸಂಗಮೇಶ್ ಹಳ್ಳಿ (ಬಾಗಲಕೋಟೆ)–3; ಟ್ರಿಪಲ್ ಜಂಪ್: ಜಫರ್‌ಖಾನ್ (ಬೆಳಗಾವಿ. ದೂರ: 15 ಮೀ. )–1, ಯಶಸ್ ಗೌಡ (ಮಂಡ್ಯ)–2, ಜೆ.ಸಿ. ರಮೇಶ್ ನಾಯಕ (ಮೈಸೂರು)–3; 4X400 ಮೀ ರಿಲೆ: ಬೆಂಗಳೂರು ಗ್ರಾಮೀಣ (ಕಾಲ: 3ನಿ.16.84 ಸೆ.)–1, ಬೆಂಗಳೂರು ನಗರ–2, ಬೆಳಗಾವಿ–3.
ಮಹಿಳೆಯರು: ಟ್ರಿಪಲ್ ಜಂಪ್: ಎಚ್. ಐಶ್ವರ್ಯಾ (ಬೆಳಗಾವಿ. ದೂರ: 11 ಮೀ)–1, ಸ್ಮಿತಾ ಕಾಕತ್ಕರ್ (ಬೆಳಗಾವಿ)–2, ಅಮೂಲ್ಯಾ (ಶಿವಮೊಗ್ಗ)–3; 4X400 ಮೀ. ರಿಲೇ: ಮೈಸೂರು (ಕಾಲ: 4ನಿ. 00.45 ಸೆ)–1, ಬೆಂಗಳೂರು ಗ್ರಾಮಾಂತರ–2.
ದಸರಾ 10ಕೆ ಓಟ 28ರಂದು
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸೆ. 28ರಂದು ನಗರದಲ್ಲಿ ‘ಡಿವೈಇಎಸ್ ಮೈಸೂರು ದಸರಾ 10 ಕಿ.ಮೀ. ಓಟ’ ಆಯೋಜಿಸಿದೆ.
‘15 ವರ್ಷ ಮೇಲ್ಪಟ್ಟವರು ಪಾಲ್ಗೊಳ್ಳಬಹುದಾಗಿದ್ದು, ಉಚಿತ ಪ್ರವೇಶವಿದೆ. ಮುಕ್ತ ವಿಭಾಗ ಹಾಗೂ 45 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹10 ಸಾವಿರ, ₹7 ಸಾವಿರ ಹಾಗೂ ₹5 ಸಾವಿರ ನಗದು ಬಹುಮಾನವಿದೆ. 2,500ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಇಲಾಖೆಯ ಆಯುಕ್ತ ಆರ್.ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಸಕ್ತರು ಆನ್‌ಲೈನ್ ಮೂಲಕ ನೋಂದಾಯಿಸುವುದು ಕಡ್ಡಾಯ.
ಮಾಹಿತಿಗೆ ದೂರವಾಣಿ ಸಂಖ್ಯೆ 0821–2564179, 81519 93256, 74117 63256 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.