ಮೈಸೂರು: ದಸರಾ ಆನೆಗಳಿಗೆ ಅಶೋಕಪುರಂನ ಅರಣ್ಯ ಭವನದಲ್ಲಿ ಭಾನುವಾರ ಸಂಜೆ ಬಿರುಮಳೆಯ ನಡುವೆ ಪೂಜೆ ಸಲ್ಲಿಸಿ ಅರಮನೆಗೆ ಬೀಳ್ಕೊಡಲಾಯಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿಯಿಂದ ಅರಣ್ಯ ಭವನಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಆ.4ರಂದು ಬಂದಿದ್ದವು.
ಅರಮನೆ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ . ಸಿಂಗಾರಗೊಂಡು ಸಾಲಾಗಿ ನಿಂತಿದ್ದ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಲಕ್ಷ್ಮಿ, ಕಂಜನ್, ಏಕಲವ್ಯ, ಪ್ರಶಾಂತ ಆನೆಗಳ ಪಾದ ತೊಳೆದು ಹೂ, ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.
ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.
ಡಿಸಿಎಫ್ ಪ್ರಭುಗೌಡ ಪುಷ್ಪಾರ್ಚನೆ ಮಾಡಿ ಅರಮನೆಗೆ ಬೀಳ್ಕೊಟ್ಟರು. ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ಆನೆಗಳು ಅರಮನೆಯತ್ತ ಹೆಜ್ಜೆ ಹಾಕಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.