
ಮೈಸೂರಿನ ಉದಯಗಿರಿಯಲ್ಲಿ ಠಾಣೆಗೆ ಎಸೆದಿದ್ದ ಕಲ್ಲಿನಿಂದ ಜಖಂಗೊಂಡ ಪೊಲೀಸ್ ವಾಹನಗಳು
ಮೈಸೂರು: ಈ ವರ್ಷ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಕೊಲೆ, ಅಪಘಾತ, ಭ್ರಷ್ಟಾಚಾರ, ಸಾವು– ನೋವಿನ ಪ್ರಕರಣಗಳ ಕರಿನೆರಳು ಹರಡಿತ್ತು. ಮುಂಬೈ ಪೊಲೀಸರು ನಗರಕ್ಕೆ ಬಂದು ಪತ್ತೆ ಹಚ್ಚಿದ ಭಾರಿ ಪ್ರಮಾಣದ ‘ಮಾದಕವಸ್ತು ತಯಾರಿಕಾ ಘಟಕ’ವು ಸಾಂಸ್ಕೃತಿಕ ನಗರಿಗೆ ಜಾಗತಿಕ ಮಟ್ಟದಲ್ಲಿ ‘ಕಳಂಕ’ವನ್ನು ಮೆತ್ತಿತು.
ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲೆಸೆತ, ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ, ‘ಕೊಲೆಯಾಗಿದ್ದಾರೆ’ ಎನ್ನಲಾಗಿದ್ದ ಮಹಿಳೆ ಪತ್ತೆಯಾದ ಸುದ್ದಿಯು ರಾಜ್ಯದಲ್ಲಿ ಸಂಚಲನ ಮೂಡಿಸಿತು.
‘ಸಾಮಾಜಿಕ ಮಾಧ್ಯಮದಲ್ಲಿ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ’ ಎಂದು ಆರೋಪಿಸಿ ಫೆ.10ರಂದು ಮುಸ್ಲಿಂ ಸಮುದಾಯದ ಸಾವಿರಾರು ಜನ ಜಮಾಯಿಸಿ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಿದ್ದರು. ಪೋಸ್ಟ್ ಹಾಕಿದ್ದ ಕಲ್ಯಾಣಗಿರಿಯ ನಿವಾಸಿ ಸತೀಶ್ ಹಾಗೂ ಕಲ್ಲು ಎಸೆದ ಅನೇಕರನ್ನು ಬಂಧಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ಈ ಘಟನೆಯು ಆಹಾರವಾಯಿತು.
ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣದಲ್ಲಿ ಸಜಾ ಕೈದಿಗಳಾಗಿದ್ದ ಗುಂಡ್ಲುಪೇಟೆಯ ಮಾದೇಶ (36), ಕೊಳ್ಳೇಗಾಲದ ನಾಗರಾಜ್ (32), ಅತ್ಯಾಚಾರ ಪ್ರಕರಣದ ಅಪರಾಧಿ ಸಕಲೇಶಪುರದ ರಮೇಶ್ (30) ಅನಾರೋಗ್ಯದಿಂದ ಮೃತಪಟ್ಟರು.
ದಸರಾ ಸಂಭ್ರಮದಲ್ಲಿದ್ದ ಮೈಸೂರನ್ನು ದಸರಾ ವಸ್ತುಪ್ರದರ್ಶನ ಮೈದಾನದ ಬಳಿ ನಡೆದ ಎರಡು ಪ್ರಕರಣಗಳು ಬೆಚ್ಚಿ ಬೀಳಿಸಿದವು. ಅ.7ರಂದು ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ದೊಡ್ಡಕೆರೆ ಮೈದಾನದ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬೆಳಿಗ್ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಆಟೊರಿಕ್ಷಾದಲ್ಲಿ ಬಂದ ಕೀರ್ತಿ ಕುಮಾರ್, ಹಾಲಪ್ಪ, ನಂದನ್, ನಿರೂಪ್ ವೆಂಕಟೇಶ್ ಕಣ್ಣಿಗೆ ಕಾರದ ಪುಡಿ ಎರಚಿ ಕಾರಿನಿಂದ ಎಳೆದು ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಕರಣ ಆತಂಕ ಮೂಡಿಸಿತು. ದಸರಾದಲ್ಲಿ ಬಲೂನ್ ಮಾರಾಟಕ್ಕೆ ಕುಟುಂಬದೊಂದಿಗೆ ಬಂದಿದ್ದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಭೀತಿ ಹುಟ್ಟಿಸಿತು. ಪ್ರಕರಣದಲ್ಲಿ ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್‌ನನ್ನು ಬಂಧಿಸಲಾಯಿತು. ತಡರಾತ್ರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದರು.
ಜುಲೈ 26ರಂದು ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ನಡೆಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ನಗರ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದರು. ಈ ಘಟನೆಯು ಅಂತರರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು. ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಸೇವನೆ, ಮಾರಾಟ ಮಾಡುವವರನ್ನು ಬಂಧಿಸಿತು.
ನಗರದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಹತೋಟಿಗೆ ತರಲು ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು
ಲೋಕಾಯುಕ್ತ ಬಲೆಗೆ ಬಿದ್ದರು...
ಜಯನಗರ ರೈಲ್ವೆ ಗೇಟ್ ಬಳಿಯಿರುವ ಪಾಲಿಕೆ ವಲಯ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಶೈಲೇಶ್, ವಲಯ ಕಚೇರಿ ನಾಲ್ಕರ ನಂದೀಶ್ ಮತ್ತು ರಜಾಕ್, ಸೆಸ್ಕ್ ಜಾಗೃತ ದಳದ ಎಇಇ ದೀಪಕ್ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡರು.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಪಾಲಿಕೆಯ ವಲಯ ಕಚೇರಿ ಐದರ ಸಹಾಯಕ ಆಯುಕ್ತ ವೆಂಕಟರಾಮ್ ಮತ್ತು ಕೌಶಲಾಭಿವೃದ್ದಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮಂಜುನಾಥ್ ಸ್ವಾಮಿ, ಹೂಟಗಳ್ಳಿ ನಗರಸಭೆಯ ರಾಜಸ್ವ ನಿರೀಕ್ಷಕ (ಆರ್‌ಐ) ಸಿ.ರಾಮಸ್ವಾಮಿ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದರು.
ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಡಾದ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಮೈಸೂರು ಲೋಕಾಯುಕ್ತ ಪೊಲೀಸರು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನಾಲ್ಕು ವರ್ಷದ ಹಿಂದೆ, ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ಪತ್ತೆಯಾಗಿದ್ದ ಶವವನ್ನು, ಕುಶಾಲನಗರದ ಮಹಿಳೆ ಮಲ್ಲಿಗೆಯವರದ್ದು ಎಂದು ಬಿಂಬಿಸಿ ‘ಮಲ್ಲಿಗೆಯನ್ನು ಆಕೆಯ ಗಂಡ ಸುರೇಶ್ ಕೊಲೆ ಮಾಡಿದ್ದಾನೆ’ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಜಾಮೀನಿನ ಮೂಲಕ ಬಿಡುಗಡೆ.
ಏ.1ರಂದು ಮಲ್ಲಿಗೆಯು ತನ್ನ ಪ್ರಿಯತಮ ಗಣೇಶ್ ಜೊತೆ ಪತ್ತೆಯಾದ ಬಳಿಕ ಪ್ರಕರಣಕ್ಕೆ ತಿರುವು. ವಿಚಾರಣೆ ನಡೆಸಿದ ನ್ಯಾಯಾಲಯವು ಪೊಲೀಸರ ಕರ್ತವ್ಯ ಲೋಪ ಎತ್ತಿಹಿಡಿಯಿತು. ಸುರೇಶ್ ಅವರನ್ನು ಸೆಷನ್ಸ್ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿ, ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ ಸಿಪಿಐ ಬಿ.ಜಿ.ಪ್ರಕಾಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು. ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.