ADVERTISEMENT

' ಪ್ರಜಾವಾಣಿ' ವತಿಯಿಂದ ' ಮಕ್ಕಳಿಗಾಗಿ ಅಂಬೇಡ್ಕರ್' ಒಂದು ದಿನದ ಕಮ್ಮಟ ಆಯೋಜನೆ

ಎ ಫಾರ್ ಅಂಬೇಡ್ಕರ್ ಎನ್ನಿ: ರಾಮಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 8:05 IST
Last Updated 25 ಮೇ 2025, 8:05 IST
   

ಮೈಸೂರು: ' ಇನ್ನು ಮುಂದೆ ಮಕ್ಕಳಿಗೆ ಎ ಫಾರ್ ಆ್ಯಪಲ್ ಅಲ್ಲ, ಎ ಫಾರ್ ಅಂಬೇಡ್ಕರ್ ಎನ್ನುವುದನ್ನು ಕಲಿಸಬೇಕು' ಎಂದು ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಸಲಹೆ ನೀಡಿದರು.

' ಪ್ರಜಾವಾಣಿ' ಮತ್ತು ಡೆಕ್ಕನ್ ಹೆರಾಲ್ಡ್ ಸಮೂಹವು ಮಹಾಬೆಳಕು ಸಂಸ್ಥೆ ಸಹಯೋಗದಲ್ಲಿ ಭಾನುವಾರ ಇಲ್ಲಿನ ಎಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ 8ರಿಂದ 12ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಿರುವ ' ಮಕ್ಕಳಿಗಾಗಿ ಅಂಬೇಡ್ಕರ್' ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಎಳವೆಯಲ್ಲೇ ಎ ಫಾರ್ ಅಂಬೇಡ್ಕರ್ ಎನ್ನುವುದನ್ನು ಹೇಳಿಕೊಡಬೇಕು. ಆಗ ನಾವು ಊಹಿಸಲಾರದಷ್ಟು ರುಚಿಯ ಹಣ್ಣನ್ನು ಮಕ್ಕಳಿಗೆ ಉಣಬಡಿಸಿದಂತೆ ಆಗುತ್ತದೆ ಎಂದರು.

ADVERTISEMENT

ದೇಶದ ಸಂಸತ್ತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಮೊದಲಿಗೆ ಕಂಡಿದ್ದು 1991ರಲ್ಲಿ ಎಂಬುದು ವಿಷಾದದ ಸಂಗತಿ. ಆದರೆ ನಂತರದ ದಶಕಗಳಲ್ಲಿ ಅವರ ಬದುಕು- ಬರಹ ನಮ್ಮೆಲ್ಲರನ್ನೂ ತಲುಪುತ್ತಿರುವುದು ರೋಮಾಂಚಕಾರಿ ಸಂಗತಿ. ಅಂಬೇಡ್ಕರ್ ಜಯಂತಿಯನ್ನು ವಿಶ್ವಸಂಸ್ಥೆಯು ಜ್ಞಾನದ ದಿನವನ್ನಾಗಿ ಘೋಷಿಸಿದೆ. ಹಲವು ದೇಶಗಳ ವಿಮೋಚನಾ ಚಳವಳಿಗಳಿಗೆ ಅವರು ಪ್ರೇರಣೆ ಆಗಿದ್ದಾರೆ ಎಂದು ಮಕ್ಕಳಿಗೆ ವಿವರಿಸಿದರು.

ಹೇಗೆ ಅಧ್ಯಯನ ಮಾಡಬೇಕು ಎನ್ನುವುದಕ್ಕೆ ಅಂಬೇಡ್ಕರ್ ಮಾದರಿ. ಮಕ್ಕಳು ನಿತ್ಯ ಒಂದು ಪುಟವಾದರೂ ಅವರ ಬದುಕು- ಬರಹಗಳ ಕುರಿತು ಓದಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯದಾದ್ಯಂತ ವಿಸ್ತರಣೆ:

' ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ ' ಮೈಸೂರಿನಲ್ಲಿ ಆರಂಭವಾಗಿರುವ ಮಕ್ಕಳಿಗಾಗಿ ಅಂಬೇಡ್ಕರ್ ಕಾರ್ಯಕ್ರಮವನ್ನು ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಜ್ಯದಾದ್ಯಂತ ಆಯೋಜಿಸಲಾಗುವುದು. ಇದಕ್ಕೆ ಸಮಾಜ ಕಲ್ಯಾಣ ಸಚಿವರೂ ಒಪ್ಪಿದ್ದಾರೆ. ಜೂನ್ ನಿಂದಲೇ ಶಾಲೆ- ಕಾಲೇಜುಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ' ಎಂದರು.

' ದೇಶದಲ್ಲಿ ಎಲ್ಲ ಜಾತಿ- ಧರ್ಮದವರೂ ಓದಬೇಕಾದ ಗ್ರಂಥ ಸಂವಿಧಾನ ಮತ್ತು ಅದನ್ನು ಕೊಟ್ಟವರು ಅಂಬೇಡ್ಕರ್. ಅಂಬೇಡ್ಕರ್ ಪತ್ರಕರ್ತ ಸಹ ಆಗಿದ್ದರು. ಅವರ ಆಶಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯ' ಎಂದರು.

' ಎ ಫಾರ್ ಅಂಬೇಡ್ಕರ್ ಜೊತೆಗೆ ಬಿ ಫಾರ್ ಬಾಬಾ ಸಾಹೇಬ್, ಸಿ ಫಾರ್ ಕಾನ್ ಸ್ಟಿಟ್ಯೂಷನ್ ಎಂದೂ ಕಲಿಸಿ' ಎಂದು ಆಶಿಸಿದರು.

ಮಹಾಬೆಳಕು ಸಂಸ್ಥೆಯ ಕಾತ್ಯಾಯಿನಿ ಯಶೋಮಿತ್ರ, ಪರಿವರ್ತನಾ ಫೌಂಡೇಶನ್ ನ ಕೃಷ್ಣಮೂರ್ತಿ ಚಮರಂ, ಆರ್. ಮಂಗಳಾ, ಸಿ.ಎಸ್. ಪೂರ್ಣಿಮಾ, ಶ್ರುತಿ ತಿಪಟೂರು, ರಾಘವೇಂದ್ರ ಅಪುರಾ, ಎಲ್. ಶಿವಲಿಂಗಪ್ಪ, ಭೂ ವಿಜ್ಞಾನಿ ಎಂ. ವೆಂಕಟಸ್ವಾಮಿ, ಹೋರಾಟಗಾರ ಅಹಿಂದ ಜವರಪ್ಪ, 'ಪ್ರಜಾವಾಣಿ' ಮೈಸೂರು ಬ್ಯುರೊ ಮುಖ್ಯಸ್ಥ ಕೆ. ನರಸಿಂಹಮೂರ್ತಿ, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್. ಪ್ರಕಾಶ್ ಪಾಲ್ಗೊಂಡರು.

ವೈವಿಧ್ಯಮಯ ಚಟುವಟಿಕೆ:

ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವೈವಿಧ್ಯಮಯ ಚಟುವಟಿಕೆಗಳು ನಡೆದಿವೆ. ಅಂಬೇಡ್ಕರ್ ಬದುಕಿನ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ಕಿರು ಉಪನ್ಯಾಸ, ಚಿತ್ರಕಲೆ ಸ್ಪರ್ಧೆ, ಗುಂಪು ಚಟುವಟಿಕೆಗಳು ಇವೆ. ಆಗಾಗ್ಗೆ ಅಂಬೇಡ್ಕರ್ ಕುರಿತ ಹಾಡುಗಳ ಗಾಯನವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.