
ಶಾಸಕ ಜಿ.ಟಿ.ದೇವೇಗೌಡ ಅವರು ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರು: ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಪರಿಶೀಲನೆ ನಡೆಸಿದರು.
ಮರಣಶಯ್ಯೆಯತ್ತ 'ಲಿಂಗಾಂಬುಧಿ' ಶೀರ್ಷಿಕೆಯಲ್ಲಿ 'ಪ್ರಜಾವಾಣಿ' ವರದಿ ಪ್ರಕಟಿಸಿತ್ತು. ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ ಕೂಡಲೇ ಒಡೆದಿರುವ ಒಳಚರಂಡಿ ಪೈಪ್ ದುರಸ್ತಿಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯ ಕೆರೆ ಸೇರದಂತೆ ಜಾಲರಿ ಅಳವಡಿಕೆಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, 'ಕೆರೆಗೆ ಚರಂಡಿ ನೀರು ಸೇರದಂತೆ ಮಾಡಲಾಗುವುದು. ಕೆರೆಯ ಬಫರ್ ವಲಯಕ್ಕೆ ಹೊಂದಿಕೊಂಡಂತೆ ಇರುವ ಎಲ್ಲ ಬಡಾವಣೆಗಳಲ್ಲೂ ಸ್ವಚ್ಛತೆ ಕೈಗೊಳ್ಳಲಾಗುವುದು. ಎಲ್ಲ ಉದ್ಯಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು' ಎಂದು ಉತ್ತರಿಸಿದರು.
ಮೂಗು ಮುಚ್ಚಿಕೊಂಡರು: ದಟ್ಟಗಳ್ಳಿ, ಕನಕದಾಸ ನಗರ ಬಡಾವಣೆಗಳ ಒಳಚರಂಡಿ ನೀರು ರಾಜಕಾಲುವೆಯಲ್ಲಿ ನಿಂತಿದ್ದರಿಂದ ಬರುತ್ತಿದ್ದ ದುರ್ವಾಸನೆಗೆ ಶಾಸಕ ಜಿ.ಟಿ.ದೇವೇಗೌಡ ಮೂಗು ಮುಚ್ಚಿಕೊಂಡರು. ನಿಂತಿದ್ದ ಪ್ಲಾಸ್ಟಿಕ್ ಬಾಟಲಿಗಳ ರಾಶಿ ನೋಡಿ 'ಏನ್ರೀ ಇದೆಲ್ಲ. ಇಲ್ಲೇ ಎರಡು ಶಾಲೆಗಳು ಇವೆಯಲ್ಲ. ಮಕ್ಕಳ ಸ್ಥಿತಿ ಏನಾಗಬೇಕು. ನಿವಾಸಿಗಳು ಈ ದುರ್ವಾಸನೆ ಸಹಿಸಬೇಕೆ' ಎಂದು ಅಧಿಕಾರಿಗಳನ್ನು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.