
ಪೂರ್ಣಯ್ಯ ನಾಲೆ ಸದ್ಯದ ಪರಿಸ್ಥಿತಿ
ಮೈಸೂರು ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಕೆ ಮಾಡುವ ಪಾರಂಪರಿಕ ‘ಪೂರ್ಣಯ್ಯ ನಾಲೆ’ಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವು (ಎಂಡಿಎ) ಅಕ್ರಮವಾಗಿ ರಸ್ತೆ, ನಿವೇಶನಗಳಾಗಿ ದಶಕಗಳಿಂದ ಪರಿವರ್ತಿಸಿದೆ. ಶತಮಾನದ ಇತಿಹಾಸವಿರುವ ನಾಲೆಯನ್ನು ಉಳಿಸುವುದು ತುರ್ತಾಗಿದೆ.
***
ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ನೀರು ಪೂರೈಕೆ ಮಾಡುವ ಪಾರಂಪರಿಕ ‘ಪೂರ್ಣಯ್ಯ ನಾಲೆ’ಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವು (ಎಂಡಿಎ) ಅಕ್ರಮವಾಗಿ ರಸ್ತೆ, ನಿವೇಶನಗಳಾಗಿ ದಶಕಗಳಿಂದ ಪರಿವರ್ತಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್‌ಗಳೂ ನಾಲೆಯನ್ನು ರಸ್ತೆ, ಒಳಚರಂಡಿಗಳಾಗಿ ಮಾಡಿಕೊಳ್ಳುತ್ತಿದ್ದಾರೆ.
ಗಂಗೋತ್ರಿ ಬಡಾವಣೆ, ತೊಣಚಿಕೊಪ್ಪಲು, ವಿಜಯನಗರ 3ನೇ ಹಾಗೂ 4ನೇ ಹಂತ, ರೈಲ್ವೆ, ಎಸ್‌ಬಿಎಂ ಬಡಾವಣೆ, ರೂಪಾ ನಗರದವರೆಗೂ 21 ಕಿ.ಮೀ ಉದ್ದದ ನಾಲಾ ಜಾಗ ಬಹುತೇಕ ರಸ್ತೆ ಆಗಿಸಲಾಗಿದೆ. ‘ದಿಶಾಂಕ್’ ಆ್ಯಪ್‌ನಲ್ಲಿ ನಾಲೆ ತೋರುತ್ತಿದ್ದರೆ ವಾಸ್ತವದಲ್ಲಿ ಅಲ್ಲಿರುವುದು ರಸ್ತೆ. ವಾರದ ಹಿಂದಷ್ಟೇ ನಾಲೆ ಆರಂಭವಾಗುವ ಹುಯಿಲಾಳು, ಮಾದಗಳ್ಳಿ ಕೆರೆ ಬಳಿ ನಾಲೆಯನ್ನು ಕಿರಿದಾಗಿಸಿ ರಸ್ತೆ ಮಾಡಿದ್ದಾರೆ.
ರೈಲ್ವೆ ಬಡಾವಣೆಯಲ್ಲಿ ಎಂಡಿಎ ಎಂಜಿನಿಯರುಗಳು ರಸ್ತೆಗೆ ನಾಲೆಯನ್ನೇ ಮುಚ್ಚಿದ್ದಾರೆ. ನಾಲೆಯ ಬದುಗಳಲ್ಲಿ ಸುರಿದಿದ್ದ ಕಟ್ಟಡ ತ್ಯಾಜ್ಯವನ್ನು ತುಂಬಿದ್ದಾರೆ. 50ರಿಂದ 100 ಮೀಟರ್ ಅಗಲದ ನಾಲೆಯ ಕುರುಹು ಕೂಡ ಇಲ್ಲದಂತೆ ಮಾಡುವುದು ಮುಂದುವರಿದಿದೆ. ಖಾಸಗಿ ಡೆವಲಪರ್‌ಗಳೂ ಮಾಡಿದ ಒತ್ತುವರಿಗೆ ಅನುಮೋದನೆ ನೀಡುವುದು ದಶಕಗಳಿಂದ ನಡೆದಿದೆ.
ನಾಲೆ ಮೇಲೆಯೇ ವಸತಿ ವಿನ್ಯಾಸ: ಬೋಗಾದಿ ಬಳಿ 2003ರಲ್ಲಿ ಎಸ್‌ಬಿಎಂ ನೌಕರರ ಗೃಹ ನಿರ್ಮಾಣ ಸಂಘಕ್ಕೆ ಎಂಡಿಎ, ನಾಲೆ ಮೇಲೆಯೇ ವಸತಿ ವಿನ್ಯಾಸ ನಕ್ಷೆಯನ್ನು ಅನುಮೋದಿಸಿ ಕೊಟ್ಟಿದೆ. ಅದಕ್ಕಾಗಿ ಯೋಜನಾ ನಕ್ಷೆಯನ್ನು ಮೂರು ಬಾರಿ ಬದಲಿಸಿದೆ. ನಾಲೆಯ ಬಫರ್ ವಲಯಗಳನ್ನು ಉದ್ಯಾನ ಮಾಡಲಾಗಿದ್ದು, ನಿವೇಶನಗಳಾಗಿಸಿ ಮಾರಾಟ ಮಾಡಲಾಗಿದೆ.
‘ಸರ್ವೆ ನಂ.327ರಲ್ಲಿ ನಾಲೆಯ ಬಫರ್ ವಲಯ ನಿವೇಶನವಾಗಿದೆ. 328ರಲ್ಲಿ ನಾಲೆ ಮೇಲೆಯೇ ಮನೆಗಳನ್ನು ನಿರ್ಮಿಸಲು ಪರವಾನಗಿ ನೀಡಿದ್ದಾರೆ. ಇದೇ ಸರ್ವೆ ನಂಬರ್‌ನಲ್ಲಿ ಬಂಡಿ ದಾರಿಯಿದ್ದೂ, ಅಲ್ಲಿಯೂ ಮನೆಗಳೆದ್ದಿವೆ. ಇವು ಅಕ್ರಮವೆಂದು ಒಂದು ದಿನ ಬಂದು ಅಧಿಕಾರಿಗಳು ತೆರವು ಮಾಡಿದರೆ, ನಿವಾಸಿಗಳ ಪಾಡೇನು’ ಎನ್ನುತ್ತಾರೆ ಎಸ್‌ಬಿಎಂ ಬಡಾವಣೆ ನಿವಾಸಿ ಅನಿಲ್ ಕುಮಾರ್.
‘135.8 ಎಕರೆಯ ಎಸ್‌ಬಿಎಂ ಬಡಾವಣೆಯ 1994ರಲ್ಲಿನ ಅನುಮೋದಿತ ಯೋಜನಾ ನಕ್ಷೆಯಲ್ಲಿ 1,300 ನಿವೇಶನಗಳಿದ್ದರೆ, 1998ರ ತಿದ್ದುಪಡಿ ನಕ್ಷೆಯಲ್ಲಿ 1,378, 2003ರ ಪರಿಷ್ಕೃತ ನಕ್ಷೆಯಲ್ಲಿ 1,500 ನಿವೇಶನಗಳಿಗೆ ಏರಿಕೆಯಾಗಿದೆ. ಆದರೆ, 135.8 ಎಕರೆ ಜಾಗವು ಹಿಗ್ಗಿಲ್ಲ. ಬದಲಾಗಿ ಪೂರ್ಣಯ್ಯ ನಾಲೆ, ಬಂಡಿ ದಾರಿ, ಬಿ ಕರಾಬು ಭೂಮಿಗಳನ್ನು ಒತ್ತುವರಿ ಮಾಡಲಾಗಿದೆ’ ಎಂದು ಎಸ್‌ಬಿಎಂ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಂಘದ ಅಧ್ಯಕ್ಷ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಡವರು, ವಸತಿ ರಹಿತರಿಗೆ ನೀಡಬೇಕಾದ 16 ಎಕರೆ ಸರ್ಕಾರಿ ಗೋಮಾಳವನ್ನು ಎಸ್‌ಬಿಎಂ ಗೃಹನಿರ್ಮಾಣ ಸಹಕಾರಿ ಸಂಘಕ್ಕೆ ನೀಡಲಾಗಿದೆ. ಅವರು ಅದನ್ನು ಸಿ.ಎ ನಿವೇಶನಗಳಾಗಿ ಪರಿವರ್ತಿಸಿ, ಪ್ರಾಧಿಕಾರಕ್ಕೆ ಕೋಟ್ಯಂತರ ಹಣ ನಷ್ಟ ಮಾಡಿದ್ದಾರೆ. 2003ರ ನಕ್ಷೆಯಲ್ಲಿ ಸರ್ವೆ ನಂ. 280ರಲ್ಲಿನ 6 ಎಕರೆ ಗೋಮಾಳದಲ್ಲಿ 2 ಎಕರೆ ಸರ್ಕಾರಿ ಗೋಮಾಳ ಹಾಗೂ ಸರ್ವೆ ನಂ 329ರ 4 ಎಕರೆ ಖಾಸಗಿ ಸ್ವತ್ತನ್ನೂ ಸೇರಿಸಿ ಉದ್ಯಾನವನ್ನು ನಿವೇಶನ ಮಾಡಲಾಗಿದೆ’ ಎಂದು ನಕ್ಷೆ ಸಮೇತ ಅನಿಲ್ ಕುಮಾರ್ ತೋರಿದರು.
‘ಕೋಟಿಗಟ್ಟಲೆ ಬೆಲೆ ಬಾಳುವ ಸರ್ಕಾರದ ಭೂಮಿ, ಹಿರಿಯರು ಕಟ್ಟಿದ ಪೂರ್ಣಯ್ಯ ನಾಲೆ, ಹಳ್ಳಗಳು ಭೂಗಳ್ಳರ ಪಾಲಾಗುತ್ತಿರುವುದು ಆಳುವವರಿಗೆ ಕಾಣುತ್ತಿಲ್ಲವೇ? ಈ ಬಗ್ಗೆ ದಾಖಲೆ ಸಹಿತ ದೂರು ನೀಡಿದರೂ ಕ್ರಮ ವಹಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಗಳ್ಳಿ ಕೆರೆ ಬಳಿಯ ಪೂರ್ಣಯ್ಯ ನಾಲೆಯನ್ನು ಕಾಂಕ್ರೀಟ್ ರಸ್ತೆ ಮಾಡಲಾಗಿದೆ
ನಾಲೆ ಜಾಗದಲ್ಲಿ ಸಿ.ಎ ನಿವೇಶನ
ಆರ್.ಶ್ರೀಧರ್ ಬಡಾವಣೆಯಲ್ಲಿ ನಾಲೆಯ ಮೇಲೆಯೇ ಎಂಡಿಎ ಸಿ.ಎ ನಿವೇಶನ ಮಾಡಿದೆ. ‘ದಿಶಾಂಕ್’ ಆ್ಯಪ್‌ನಲ್ಲಿ ನಿವೇಶನದ ಜಾಗ ನಾಲೆ ಹಾಗೂ ಬಫರ್ ವಲಯವೆಂದೂ ನೀಲಿ ಬಣ್ಣದಲ್ಲಿ ನಮೂದಾಗಿದೆ. ಆದರೆ, ಮುಡಾ ‘ಸಿ.ಎ 2’ ನಿವೇಶನವೆಂದು ಬರೆದಿರುವುದು ಇಲ್ಲಿ ಕಾಣಸಿಗುತ್ತದೆ.
ನಿವೇಶನ ಮಾಡಿರುವುದಕ್ಕೆ ಮುಡಾ ವೆಬ್‌ಸೈಟ್‌ನಲ್ಲಿ 2023ರ ಫೆ.17ರಂದು ಕರೆಯಲಾದ ‘ಸಿ.ಎ–2023’ ಅಧಿಸೂಚನೆಯೂ ಆಧಾರವಾಗಿದೆ. ಬಡಾವಣೆಯ ಸರ್ವೆ ನಂ 326, 327ರಲ್ಲಿನ ಸಿಎ–2ಎ, ಬಿ, ಸಿಗಳು ಕ್ರಮವಾಗಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಹಾಪ್‌ಕಾಮ್ಸ್, ಮೀನು ಮಾರಾಟ ಮಳಿಗೆಗಳಿಗೆ ಮೀಸಲಾಗಿವೆ. ಆದರೆ, ಇವುಗಳು ನಾಲೆ ಹಾಗೂ ಬಫರ್ ವಲಯದಲ್ಲಿದ್ದು, ಇವುಗಳನ್ನೇ ಹರಾಜಿಗಿಟ್ಟು, ಮುಡಾ ಹಣ ಗಳಿಸಲು ಮುಂದಾಗಿದೆ ಎನ್ನುತ್ತಾರೆ ನಿವಾಸಿಗಳು.
ಟಿಕೆ ಬಡಾವಣೆಯಲ್ಲಿ ಪೂರ್ಣಯ್ಯ ನಾಲೆಯೇ ರಸ್ತೆಯಾಗಿದೆ
ನಾಲೆಗಿದೆ ಶತಮಾನದ ಇತಿಹಾಸ
ಕ್ರಿ.ಶ.1878–79ರ ಸುಮಾರು ನಿರ್ಮಾಣಗೊಂಡಿರುವ ಪಾರಂಪರಿಕ ಪೂರ್ಣಯ್ಯ ನಾಲೆಯು ಒಂದೂವರೆ ಶತಮಾನದಷ್ಟು ಇತಿಹಾಸವಿದೆ. 21 ಕಿ.ಮೀ ಉದ್ದವಿರುವ ನಾಲೆಯ ಒತ್ತುವರಿ ಕಳೆದ ಮೂರು ದಶಕದಿಂದ ಎಗ್ಗಿಲ್ಲದೆ ನಡೆದಿದೆ.
‘ಬೋಗಾದಿ ರಸ್ತೆಯ ಹುಯಿಲಾಳು ಕೆರೆಯಿಂದ ಕುಕ್ಕರಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ನಾಲೆಯು ನಗರದ ಜೀವನಾಡಿ. ಕಾವೇರಿ ನದಿ ನೀರು ಅಭಾವವಾದರೂ ಪೂರ್ಣಯ್ಯ ನಾಲೆಯಿಂದಾಗುವ ಅಂತರ್ಜಲ ಮರುಪೂರಣವು ಭವಿಷ್ಯದಲ್ಲಿ ನೀರಿನ ಅಭಾವ ತಪ್ಪಿಸಲಿದೆ’ ಎನ್ನುತ್ತಾರೆ ಪರಿಸರ ತಜ್ಞ ಯು.ಎನ್.ರವಿಕುಮಾರ್.
‘ಇಲವಾಲ ಬೆಟ್ಟಶ್ರೇಣಿ (ರಿಡ್ಜ್) ಅನುಸರಿಸಿ ನಾಲೆ ನಿರ್ಮಿಸಲಾಗಿತ್ತು. ಈ ಎತ್ತರದ ಜಾಗ ಹುಲ್ಲುಗಾವಲಿನ ಪ್ರದೇಶವಾಗಿತ್ತು. ಇಲ್ಲಿಯೇ ಅಳಿವಿನಂಚಿನ ಹೆಬ್ಬಕ (ಗ್ರೇಟ್ ಇಂಡಿಯನ್ ಬಸ್ಟರ್ಡ್) ದಶಕಗಳ ಹಿಂದೆ ಕಾಣಿಸಿಕೊಂಡಿತ್ತು. ಇಲ್ಲಿನ ಹುಲ್ಲುಗಾವಲು, ಜಮೀನುಗಳು ಬಡಾವಣೆಗಳಾಗಿವೆ. ನಾಲೆಯಲ್ಲಿ ಮಳೆಗಾಲದಲ್ಲಿ ಆಳೆತ್ತರದ ನೀರು ಹರಿಯುತ್ತಿತ್ತು. ಈಗ ಅಲ್ಲಲ್ಲಿ ಒಡೆದಿದೆ. ಕಟ್ಟಡ ತ್ಯಾಜ್ಯದಿಂದ ಮುಚ್ಚುತ್ತಿದ್ದು, ಬೋಗಾದಿ ಹಾಗೂ ಕುದುರೆಮಾಳ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಆಗುತ್ತಿದೆ’ ಎಂದರು.
ಪರಿಸರ ಪ್ರಿಯರ ಹೋರಾಟ
ನಗರದ ‘ಜಲನಿಧಿ’ ಕುಕ್ಕರಹಳ್ಳಿ ಕೆರೆ ಹಾಗೂ ಅದಕ್ಕೆ ನೀರು ಪೂರೈಕೆ ಮಾಡುವ ‘ಪೂರ್ಣಯ್ಯ ನಾಲೆ’ ಉಳಿವಿಗೆ ಯುವ ಜನರು ಹಾಗೂ ಹಿರಿಯ ನಾಗರಿಕರು ‘ನಾಲಾ ನಡಿಗೆ’ ಮೂಲಕ ‘ಗಾಂಧಿಗಿರಿ’ ಅನುಸರಿಸಿದ್ದಾರೆ. ವಾರಕ್ಕೊಮ್ಮೆ ಸೇರುವ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.