ADVERTISEMENT

ಕನ್ನಡದಲ್ಲಿ ಕಿರುಚಿತ್ರಗಳು ಹೆಚ್ಚಲಿ: ಡಾ.ಟಿ.ಸಿ. ಪೂರ್ಣಿಮಾ

ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 10:56 IST
Last Updated 8 ಏಪ್ರಿಲ್ 2022, 10:56 IST
ನಗರದ ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಸಿನಿರಮಾ’ ರಾಷ್ಟ್ರಮಟ್ಟದ ಕಿರುಚಿತ್ರಗಳ ಪ್ರದರ್ಶನಕ್ಕೆ ಡಾ.ಟಿ.ಸಿ. ಪೂರ್ಣಿಮಾ ಹಾಗೂ ಗಿರೀಶ್‌ ಕಾಸರವಳ್ಳಿ ಚಾಲನೆ ನೀಡಿದರು. ಡಾ.ಮೌಲ್ಯಾ ಬಾಲಾಡಿ, ಪವನ್‌ ಕೆ.ಜೆ, ನಾ.ದಾಮೋದರ ಶೆಟ್ಟಿ, ಡಾ.ಜಿ.ರವೀಂದ್ರನಾಥ್‌, ಮುಕ್ತಿದಾಮೃತ ಚೈತನ್ಯ ಇದ್ದರು
ನಗರದ ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಸಿನಿರಮಾ’ ರಾಷ್ಟ್ರಮಟ್ಟದ ಕಿರುಚಿತ್ರಗಳ ಪ್ರದರ್ಶನಕ್ಕೆ ಡಾ.ಟಿ.ಸಿ. ಪೂರ್ಣಿಮಾ ಹಾಗೂ ಗಿರೀಶ್‌ ಕಾಸರವಳ್ಳಿ ಚಾಲನೆ ನೀಡಿದರು. ಡಾ.ಮೌಲ್ಯಾ ಬಾಲಾಡಿ, ಪವನ್‌ ಕೆ.ಜೆ, ನಾ.ದಾಮೋದರ ಶೆಟ್ಟಿ, ಡಾ.ಜಿ.ರವೀಂದ್ರನಾಥ್‌, ಮುಕ್ತಿದಾಮೃತ ಚೈತನ್ಯ ಇದ್ದರು   

ಮೈಸೂರು: ‘ಕನ್ನಡ ಭಾಷೆಯಲ್ಲಿ ಕಿರುಚಿತ್ರಗಳ ನಿರ್ಮಾಣದ ಕೊರತೆ ಕಾಡುತ್ತಿದ್ದು, ಯುವ ತಂತ್ರಜ್ಞರು, ಚಿತ್ರ ನಿರ್ದೇಶಕರು ಗುಣಮಟ್ಟದ ಕಿರುಚಿತ್ರಗಳನ್ನು ನಿರ್ಮಿಸಬೇಕು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಸಲಹೆ ನೀಡಿದರು.

ನಗರದ ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ‘ಸಿನಿರಮಾ’ ರಾಷ್ಟ್ರಮಟ್ಟದ ಕಿರುಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ನೋಟು ಅಮಾನ್ಯೀಕರಣ, ಕೊರೊನಾದಿಂದ ಕಿರುಚಿತ್ರಗಳ ನಿರ್ಮಾಣ, ಬೆಳವಣಿಗೆಯ ವೇಗ ಹೆಚ್ಚಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 1,500 ಕಿರುಚಿತ್ರಗಳು ನಿರ್ಮಾಣಗೊಳ್ಳುತ್ತಿವೆ’ ಎಂದರು.

ADVERTISEMENT

‘ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳ ನಿರ್ಮಾಣ, ಚಲನಚಿತ್ರೋತ್ಸವಗಳ ಸಂಘಟನೆ ಮತ್ತು ಚಲನಚಿತ್ರಗಳ ಸಂರಕ್ಷಣೆ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಿದೆ. ಇದರಿಂದ ಕಿರುಚಿತ್ರಗಳ ನಿರ್ಮಾಣಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ’ ಎಂದು ತಿಳಿಸಿದರು.

‘21ನೇ ಶತಮಾನದ ಆರಂಭದಲ್ಲಿ ಮಹಾಕಾವ್ಯಗಳನ್ನು ಓದಲು ಸಮಯ, ತಾಳ್ಮೆ, ವ್ಯವಧಾನ ಕಡಿಮೆಯಾಗುತ್ತಿದ್ದು, ಮಹಾಕಾವ್ಯಗಳನ್ನು ಬರೆಯಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ, ಬಹುತೇಕರು ಕವಿತೆ ರಚನೆಗೆ ಮುಂದಾಗಿದ್ದರು. ಅದೇ ರೀತಿ, ಬೆಳ್ಳಿಪರದೆಯ ಸಿನಿಮಾಗಳ ನಡುವೆಯೂ ಕಿರುಚಿತ್ರಗಳು ತಮ್ಮ ವೇಗವನ್ನು ತೀವ್ರಗೊಳಿಸಿವೆ’ ಎಂದರು.

‘ಸಿನಿಮಾಗಳಲ್ಲಿ ಬರುವ ನಕಾರಾತ್ಮಕ ಅಂಶಗಳು ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ವಿಧ್ವಂಸಕ ಕೃತ್ಯ, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಆರೋಪಿಗಳು, ತಮಗೆ ಇಂತಹ ಸಿನಿಮಾ ಪ್ರೇರಣೆ ನೀಡಿತು ಎಂದು ಹೇಳಿಕೆ ಕೊಟ್ಟಿರುವ ಉದಾಹರಣೆಗಳಿವೆ. ಆದರೆ, ಕಿರುಚಿತ್ರಗಳು ಮಾನವೀಯ ಮೌಲ್ಯಗಳನ್ನು ಪಸರಿಸುತ್ತವೆ. ಕಿರುಚಿತ್ರ ಫಾಸ್ಟ್‌ಫುಡ್‌ ಇದ್ದಂತೆ. ಸಂದೇಶ ಹಾಗೂ ಮನರಂಜನೆಯನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು’ ಎಂದು ಹೇಳಿದರು.

ಸಾಹಿತಿ ನಾ.ದಾಮೋದರ ಶೆಟ್ಟಿ ಮಾತನಾಡಿ, ‘ಸಿನಿಮಾ ವ್ಯಾಕರಣ ಬದಲಾಗುತ್ತಿದೆ. ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ನಿರ್ದೇಶಕರು ಕೆಲಸವಿಲ್ಲದೆ ಮನೆಗಳಲ್ಲಿದ್ದಾರೆ. ಅವರು ಔಟ್‌ಡೇಟೆಡ್‌ ಆಗಿದ್ದು, ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಬೇಕು’ ಎಂದು ಸಲಹೆ ನೀಡಿದರು.

‘ಮೊಬೈಲ್‌ನಲ್ಲೂ ಚಿತ್ರೀಕರಿಸಿದ ಕಿರುಚಿತ್ರಗಳೂ ಇವೆ. ಆದರೆ, ಸಿನಿಮಾ ನಿರ್ಮಿಸಿದಂತೆಯೇ ಕಿರುಚಿತ್ರವನ್ನೂ ಶ್ರದ್ಧೆ ಹಾಗೂ ಪರಿಶ್ರಮದಿಂದ ರೂಪಿಸಬೇಕು. ವಸ್ತು ವಿಷಯ ಗಟ್ಟಿಯಾಗಿರಬೇಕು. ಚಿತ್ರಕಥೆ ಬಿಗಿ ಇರಬೇಕು. 3 ಗಂಟೆಯಲ್ಲಿ ಹೇಳುವ ಕಥೆಯನ್ನು 20 ನಿಮಿಷದಲ್ಲಿ ಹೇಳಿ ಮುಗಿಸಬೇಕು. ಹೀಗಾಗಿ, ಪೂರ್ವ ಸಿದ್ಧತೆ ಮಾಡಿಕೊಂಡೇ ಕಿರುಚಿತ್ರ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

ನಟ ಪವನ್‌ ಕೆ.ಜೆ ಮಾತನಾಡಿ, ‘ಕಾಲೇಜಿನಲ್ಲಿರುವ ಸೌಲಭ್ಯವನ್ನು ಬಳಸಿಕೊಂಡು ಒಳ್ಳೆಯ ಕಿರುಚಿತ್ರಗಳನ್ನು ನಿರ್ಮಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಅಮೃತ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್‌, ಅಮೃತ ವಿಶ್ವ ವಿದ್ಯಾಪೀಠಂನ ಕರೆಸ್ಪಾಂಡೆಂಟ್‌ ಮುಕ್ತಿದಾಮೃತ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯಾ ಬಾಲಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.