ರಾಯಚೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಮುಸ್ಲಿಮರು ಜಿಲ್ಲೆಯಲ್ಲಿ ಶುಕ್ರವಾರ ಸೌಹಾರ್ದದ ಪ್ರತೀಕವಾಗಿ ಈದ್ ಮಿಲಾದ್ ಹಬ್ಬವಾಗಿ ಸಡಗರದಿಂದ ಆಚರಣೆ ಮಾಡಿದರು.
ಶುಕ್ರವಾರವೇ ಹಬ್ಬ ಬಂದಿರುವ ಕಾರಣ ಮುಸ್ಲಿಮರ ಮನೆ ಹಾಗೂ ಮಸೀದಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮಸೀದಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದರು. ಮುಸ್ಲಿಮರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೆಲ ಮಸೀದಿಗಳಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಯುವಕರು ಹಾಗೂ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಧಾರ್ಮಿಕ ಧ್ವಜಗಳನ್ನು ಹಿಡಿದು ನಗರದಲ್ಲಿ ಮೆರವಣಿಗೆ ಮಾಡಿದರು. ಮಕ್ಕಾ, ಮದೀನಾಗಳ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ನಗರದ ತೀನ್ ಕಂದಿಲ್ ಮಾರ್ಗದಿಂದ ಆರಂಭವಾದ ಮೆರವಣಿಗೆ ಜಾಕೀರ್ ಹುಸೇನ್ ವೃತ್ತ, ನಗರಸಭೆ ಹಾಗೂ ಅಂದ್ರೂನ್ ಕಿಲ್ಲಾ ಮಾರ್ಗವಾಗಿ ಜಿಲ್ಲಾ ನ್ಯಾಯಾಲಯ ಸಮೀಪದ ಈದ್ಗಾ ಮೈದಾನಕ್ಕ ಬಂದು ಸಮಾರೋಪಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮೌಲ್ವಿಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ನೀಡಿದರು.
ಮಹಾನಗರಪಾಲಿಕೆಯ ಉಪ ಮೇಯರ್ ಸಾಜೀದ್ ಸಮೀರ್, ವಕ್ಫ್ ಮಂಡಳಿಯ ಅಧ್ಯಕ್ಷ ಫರೀದ್ ಖಾನ್, ವಿವಿಧ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.