ಕವಿತಾಳ: ವಿಷಪೂರಿತ ಪಲ್ಯ ಸೇವಿಸಿ ಮೃತಪಟ್ಟ ಮೂವರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಂತರ ಪಾರ್ಥಿವ ಶರೀರಗಳನ್ನು ಮಂಗಳವಾರ ಕಡ್ಡೋಣಿ ತಿಮ್ಮಾಪುರದ ಅವರ ಮನೆಗೆ ತರುತ್ತಲೆ ಬಂಧುಗಳು ಮತ್ತು ಗ್ರಾಮಸ್ಥರ ದುಃಖದ ಕಟ್ಟೆಯೊಡಿಯಿತು.
ರಮೇಶ ನಾಯಕ ಅವರ ಮಕ್ಕಳಾದ ನಾಗರತ್ನ ಮತ್ತು ದೀಪಾ ಮೃತದೇಹ ನೋಡಿದ ಗ್ರಾಮದ ಮಹಿಳೆಯರು ಕಂದಮ್ಮಗಳ ಸಾವಿಗೆ ಕಂಬನಿ ಮಿಡಿದರು. ಮೃತ ರಮೇಶ ಅವರ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಾ ಅವರಿಗೆ ತನ್ನ ಪತಿ ಹಾಗೂ ಮಕ್ಕಳನ್ನು ಕೊನೆಯ ಸಲ ನೋಡಲು ಆ ದೇವರು ಅವಕಾಶ ನೀಡಲಿಲ್ಲ ಎಂದು ಮಹಿಳೆಯರು ಮಮ್ಮಲ ಮರುಗಿದರು.
ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ವೈಯಕ್ತಿಕವಾಗಿ ₹5 ಸಾವಿರ ನಗದು ನೀಡಿ ಬಂಧುಗಳಿಗೆ ಸಾಂತ್ವನ ಹೇಳಿದರು.
ಮುಖಂಡರಾದ ರಾಜಶೇಖರ ತೊಪ್ಪಲದೊಡ್ಡಿ, ಖಾಜಾಪಾಶಾ ಬ್ಯಾಗವಾಟ್, ಹನುಮಂತ ಬುಳ್ಳಾಪುರ, ಮಕ್ದುಂ ಅಲೀ, ಶಿವರಾಜ, ನಿಂಗಪ್ಪ, ರಮೇಶ ಮತ್ತು ಕಾಂಗ್ರೆಸ್ ಮುಖಂಡ ಶರಣು ಸಾಹುಕಾರ ಮತ್ತಿತರರು ಉಪಸ್ಥಿತರಿದ್ದರು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು, ಸಾರ್ವಜನಿಕರು, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.