ADVERTISEMENT

ಬಿಡದಿಯಲ್ಲಿ ದೇಶದ ಮೊದಲ ಎ.ಐ ನಗರ: ಡಿ.ಕೆ. ಶಿವಕುಮಾರ್

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆ; ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
<div class="paragraphs"><p>ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಬಿಡಿಎ ಯೋಜನೆ ಕುರಿತು ಮಾತನಾಡಿದರು. </p></div>

ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಬಿಡಿಎ ಯೋಜನೆ ಕುರಿತು ಮಾತನಾಡಿದರು.

   

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ನಿರ್ಮಾಣವಾಗಲಿರುವ ಬಿಡದಿ ಸಮಗ್ರ ಉಪನಗರ ಯೋಜನೆ ಅಡಿ 'ಕೆಲಸ,ವಾಸ,ಉಲ್ಲಾಸ' ಪರಿಕಲ್ಪನೆ ಅಡಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ನಗರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್‌ (ಜಿಬಿಐಟಿ) ಲಾಂಛನ ಹಾಗೂ ಮಾಹಿತಿ ಪುಸಕ್ತ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದರು.

ಯೋಜನೆಗಾಗಿ ಒಂಬತ್ತು ಗ್ರಾಮಗಳ 8,493 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಮಿ ಕೊಟ್ಟವರಿಗೆ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೆ ಪರಿಹಾರ ನೀಡಲಾಗುವುದು. ಒಪ್ಪಿಗೆ ಪತ್ರ ಕೊಟ್ಟವರಿಗೆ ಮೂರು ದಿನದಲ್ಲಿ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

‘ಪರಿಹಾರದ ಬದಲು ಯೋಜನೆಯ ಸಹಭಾಗಿತ್ವ ಪಡೆಯಲು ಮುಂದೆ ಬರುವ ರೈತರಿಗೆ, ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಪ್ರದೇಶದಲ್ಲಿ 45:55 ಅನುಪಾತದಲ್ಲಿ ನಿವೇಶನ ಒದಗಿಸಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಐತಿಹಾಸಿಕ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಯೋಜನೆಯ ಅಂತಿಮ ಅಧಿಸೂಚನೆ ದಿನಾಂಕದಿಂದ ಪರಿಹಾರ ನೀಡುವುವರೆಗೆ ಹಾಗೂ ಅಭಿವೃದ್ಧಿಪಡಿಸಿದ ಜಾಗವನ್ನು ಮಾಲೀಕರಿಗೆ ಹಸ್ತಾಂತರ ಮಾಡುವವರೆಗೆ ಜೀವನೋಪಾಯದ ಬೆಂಬಲಕ್ಕಾಗಿ ಪ್ರತ್ಯೇಕವಾಗಿ ವಾರ್ಷಿಕ ಪರಿಹಾರ ನೀಡಲಾಗುವುದು. ವರ್ಷಕ್ಕೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ (ಒಣಭೂಮಿ) ₹30 ಸಾವಿರ, ತರಿಗೆ ಜಮೀನಿಗೆ (ಮಳೆ ಅಥವಾ ನೀರಾವರಿಯಿಲ್ಲದೆ ವ್ಯವಸಾಯ ಮಾಡುವ ಭೂಮಿ) ₹40 ಸಾವಿರ, ಭಾಗಾಯ್ತು ಭೂಮಿಗೆ (ನೀರಾವರಿ ಅಥವಾ ಮಳೆಯಾಶ್ರಿತ ತೋಟ) ₹50 ಸಾವಿರ ಹಾಗೂ ಭೂರಹಿತ ಕುಟುಂಬಕ್ಕೆ ₹25 ಸಾವಿರ ನೀಡಲಾಗುವುದು ಎಂದು ಹೇಳಿದರು.

‘ಅಧಿಸೂಚನೆ ಬಳಿಕ 6,300 ಭೂ ಮಾಲೀಕರಿಗೆ ನೋಟಿಸ್ ನೀಡಿ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ಈ ಪೈಕಿ ಶೇ 18.12ರಷ್ಟು ಮಂದಿ ಮಾತ್ರ ಭೂಸ್ವಾಧೀನ ಕೈಬಿಡಿ ಎಂದಿದ್ದಾರೆ. ನಾನು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕಿದೆ. ಹಾಗಾಗಿ, ಅದು ಸಾಧ್ಯವಿಲ್ಲ ಎಂದು ಅವರನ್ನು ನಾನು ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದರು.

ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಆಯುಕ್ತ ರಾಜೇಂದ್ರ ಪಿ. ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ಇತರರು ಇದ್ದರು.

‘ಪರಿಹಾರ ಕೋರಿದ ಎಚ್‌ಡಿಕೆ ಪತ್ನಿ ಪುತ್ರ ’

‘ಯೋಜನಾ ಪ್ರದೇಶದ ವ್ಯಾಪ್ತಿಯ ಹೊಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ  ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ 28 ಎಕರೆ ಜಮೀನು ಹೊಂದಿದ್ದಾರೆ. ಯೋಜನೆ ಬೆಂಬಲಿಸಿರುವ ಅವರು ಸೂಕ್ತ ಪರಿಹಾರ ನೀಡುವಂತೆ ಅರ್ಜಿ ಕೊಟ್ಟಿದ್ದಾರೆ. ಪರಿಹಾರದ ಮೊದಲ ಚೆಕ್ ಅನ್ನು ಮೊದಲು ಅವರಿಗೇ ಕೊಡಿ’ ಎಂದು ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ವ್ಯವಹಾರ ಸ್ಥಳ; ‘ಶೂನ್ಯ ಸಂಚಾರ ದಟ್ಟಣೆ

‘ಉಪನಗರದ 2 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶವನ್ನು ಎಐ ಆಧಾರಿತ ಉದ್ದಿಮೆಯ ಜಾಗತಿಕ ಹೂಡಿಕೆದಾರರಿಗಾಗಿ ಮೀಸಲಿಡಲಾಗುವುದು. ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆಯ ಈ ನಗರವು ಭವಿಷ್ಯದಲ್ಲಿ ಬೆಂಗಳೂರಿನ ಕೇಂದ್ರ ವ್ಯವಹಾರ ಸ್ಥಳವಾಗಲಿದೆ. ಈ ನಗರವನ್ನು ಕೆಲಸ-ವಾಸ-ಉಲ್ಲಾಸ ಪರಿಕಲ್ಪನೆಯಡಿ ವಿನ್ಯಾಸಗೊಳಿಸಲಾಗಿದೆ. ಈ ನಗರ ನಿರ್ಮಾಣದಿಂದ ವ್ಯಾಪಾರ ಹಾಗೂ ಆರ್ಥಿಕತೆಗೆ ಉತ್ತೇಜನ ಸಿಗಲಿದೆ’ ಎಂದು ಹೇಳಿದರು.

‘ಎಚ್‌.ಡಿ. ದೇವೇಗೌಡರು ಹಾಗೂ ಇತರರ ಕಾಲದಲ್ಲಿ ಬಿಡದಿ ಕೈಗಾರಿಕಾ ಟೌನ್‌ಶಿಪ್ ಮಾಡಿದಾಗ ಇಲ್ಲಿನ ಭೂ ಸ್ವಾಧೀನಕ್ಕೆ ₹5 ಲಕ್ಷದಿಂದ ₹6 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ಇದು ₹10 ಲಕ್ಷಕ್ಕ ಏರಿತು. ನನ್ನ ಅವಧಿಯಲ್ಲಿ ಅದು ಕೋಟಿ ದಾಟಿದೆ. ಮುಂದೆ ಇನ್ನೂ ಹೆಚ್ಚುತ್ತಲೇ ಹೋಗಲಿದೆ’ ಎಂದು ತಿಳಿಸಿದರು.

‘ಉಪನಗರದಲ್ಲಿ ಶೂನ್ಯ ಸಂಚಾರ ದಟ್ಟಣೆಗೆ ಕ್ರಮ ಕೈಗೊಳ್ಳಲಾಗಿದೆ. ನಗರವು 300 ಮೀಟರ್ ಅಗಲದ ಬಿಸಿನೆಸ್ ಕಾರಿಡಾರ್ ಮೂಲಕ ಎಲ್ಲಾ ಮುಖ್ಯ ರಸ್ತೆಗಳಿಗೆ ಸಂಪರ್ಕ ಹೊಂದಲಿದೆ. 9 ಕಿ.ಮೀ. ದೂರದಲ್ಲಿರುವ ಎಸ್ ಟಿಆರ್‌ಆರ್ ರಸ್ತೆಗೆ, 11 ಕಿ.ಮೀ. ದೂರದದ ನೈಸ್ ರಸ್ತೆಗೆ, 5 ಕಿ.ಮೀ. ದೂರದ ಮೈಸೂರು-ಬೆಂಗಳೂರು ಹೆದ್ದಾರಿಗೆ ಹಾಗೂ 2.2 ಕಿ.ಮೀ. ದೂರದಲ್ಲಿರುವ ಬೆಂಗಳೂರು– ದಿಂಡಗಲ್ ಹೆದ್ದಾರಿಗೆ ಸಂಪರ್ಕ ಕಲ್ಪಿಸಸಲಾಗುವುದು. ಎಲ್ಲಾ ದಿಕ್ಕಿನಿಂದ 70 ಮೀಟರ್ ಅಗಲದ ಮುಖ್ಯರಸ್ತೆ, ವರ್ತುಲ ರಸ್ತೆ ಹಾಗೂ ಎಕ್ಸ್ ಪ್ರೆಸ್ ವೇ ಲಿಂಕ್‌ಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು. ಮುಂದಿನ ದಿನಗಳಲ್ಲಿ ಮೆಟ್ರೊ ಸಂಪರ್ಕವನ್ನು ವಿಸ್ತರಿಸುವ ಆಲೋಚನೆ ಇದೆ’ ಎಂದು ಶಿವಕುಮಾರ್ ಹೇಳಿದರು.

‘ಹಳ್ಳಿಗಳ ಅಭಿವೃದ್ಧಿ; ಸ್ಥಳೀಯರಿಗಾಗಿ ಉದ್ಯೋಗ ನೀತಿ’

‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ನಿರ್ಮಾಣವಾಗಲಿರುವ ಬಿಡದಿ ಸಮಗ್ರ ಉಪನಗರ ಯೋಜನಾ ಪ್ರದೇಶದ ಹಳ್ಳಿಗಳನ್ನು ಸ್ಥಳಾಂತರಿಸದೆ, ಹಾಗೆಯೇ ಉಳಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು, ಸ್ಥಳೀಯ ಪ್ರಥಮ ಉದ್ಯೋಗ ನೀತಿ ರೂಪಿಸಲಾಗುವುದು. ಕೃತಕ ಬುದ್ದಿಮತ್ತೆ, ಐ.ಟಿ–ಬಿ.ಟಿ, ಸ್ಟಾರ್ಟ್ ಅಪ್ ಹಾಗೂ ಸೇವಾ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಅಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

‘ಜಮೀನು ಕೊಟ್ಟವರಿಗೆ ಸೂಕ್ತ ಪರಿಹಾರದ ಜೊತೆಗೆ ಆದಾಯ ತೆರಿಗೆ ಹಾಗೂ ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುವುದು. ನಗರಕ್ಕೆ ಕಲ್ಪಿಸಲಾಗುವ ರಸ್ತೆ ಸಂಪರ್ಕಕ್ಕೆ ಜಮೀನು ಕಳೆದುಕೊಳ್ಳುವವರಿಗೂ ಸೂಕ್ತ ಪರಿಹಾರ ನೀಡಲಾಗುವುದು. ರೈತರು ದಾಖಲೆ ಸಮೇತ ಪರಿಹಾರಕ್ಕೆ ಅರ್ಜಿ ಹಾಕಿದರೆ, ಮೂರು ದಿನಗಳಿಂದಲೇ ಪರಿಹಾರ ನೀಡಲಾಗುವುದು’ಎಂದು ತಿಳಿಸಿದರು.

ಯೋಜನೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಹಾಗಿದ್ದರೆ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದವರೇ ರದ್ದುಪಡಿಸಬಹುದಿತ್ತು. ಹಾಗಾಗಿ ಯೋಜನೆಗೆ ಹೊಸ ರೂಪ ನೀಡಿ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಮುಂದಾಗಿರುವೆ
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.