
ರಾಮನಗರ: ಕಾಡಂಚಿನ ರೈತರ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯ ಒದಗಿಸುವ ವಿಶೇಷ ಪ್ರಯತ್ನಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಅದಕ್ಕಾಗಿ ಇಲ್ಲಿನ ಪರಿಸರ ಸೂಕ್ಷ್ಮ ವಲಯದ ಗ್ರಾಮಗಳ ಕೃಷಿ ಉತ್ಪನ್ನಗಳನ್ನು ‘ಆನೆಕಾಡು’ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಯೋಜನೆ ರೂಪಿಸಿದ್ದಾರೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ಕಚೇರಿಯಲ್ಲಿ ಜ.6ರಂದು ‘ಆನೆಕಾಡು’ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ಸಿಗಲಿದೆ. ಪರಿಸರ ಸೂಕ್ಷ್ಮ ವಲಯದ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯ ಒದಗಿಸುವ ಈ ಪ್ರಯತ್ನ ದೇಶದಲ್ಲಿ ಮೊದಲು ಎನ್ನಲಾಗಿದೆ.
ಕಾಡಂಚಿನ ರೈತರನ್ನು ಒಳಗೊಂಡ ಆನೆಕಾಡು ಫಾರ್ಮರ್ಸ್ ಗ್ರೂಪ್ (ಎಎಫ್‌ಜಿ) ರಚಿಸಿ ಗ್ರಾಹಕರು ಮತ್ತು ಎಎಫ್‌ಜಿ ನಡುವೆ ನೇರ ಸಂಪರ್ಕ ಬೆಸೆಯಲಾಗುತ್ತಿದೆ. ಸ್ವಚ್ಛ ಪರಿಸರದಲ್ಲಿ ಬೆಳೆಯುವ ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ ಉತ್ತಮ ಬೆಲೆ ಒದಗಿಸಲು ಹೆಜ್ಜೆ ಇಡಲಾಗಿದೆ.
ಜೊತೆಗೂಡಿದ ಕಂಪನಿ: ಆನೆಕಾಡು ಉತ್ಪನ್ನಗಳನ್ನು ಆರಂಭದಲ್ಲಿ ಕನಕಪುರ ಆರ್ಗ್ಯಾನಿಕ್ ಪ್ರೊಡ್ಯೂಸ್ ಕಂಪನಿ ಮೂಲಕ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಹೆಚ್ಚಿನ ದರ ನೀಡಿ ಕಂಪನಿಯು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲಿದೆ.
‘ಬೆಂಗಳೂರು ಸೇರಿ ವಿವಿಧೆಡೆ ನಡೆಯುವ ರೈತರ ಸಂತೆಗಳಲ್ಲೂ ಈ ಉತ್ಪನ್ನಗಳನ್ನು ಮಾರಲಾಗುವುದು. ಜಂಗಲ್ ರೆಸಾರ್ಟ್‌ಗಳು ಹಾಗೂ ಅರಣ್ಯ ಪ್ರದೇಶದಲ್ಲಿರುವ ಪ್ರವಾಸಿ ತಾಣಗಳಲ್ಲೂ ‘ಆನೆಕಾಡು’ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ಆರಂಭಿಸುವ ಕುರಿತು ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಕನಕಪುರ ಆರ್ಗ್ಯಾನಿಕ್ ಪೊಡ್ಯೂಸರ್ ಕಂಪನಿಯ ಸುಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆನೆಕಾಡು’ ಯೋಜನೆಯಿಂದ ಅರಣ್ಯದ ಅಂಚಿನ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯದ ಜೊತೆಗೆ, ಉತ್ಪನ್ನಗಳಿಗೆ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಲಾಭ ಸಿಗಲಿದೆ ಎನ್ನುತ್ತಾರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ಅಂಥೋನಿ ರೇಗೊ.
ಅರಣ್ಯದ ಅಂಚಿನ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯದ ಜೊತೆಗೆ ಉತ್ತಮ ಬೆಲೆ ಸಿಕ್ಕರೆ ರೈತರ ಬದುಕು ಹಸನಾಗಲಿದೆ.–ಮರಿಗೌಡ, ಅಧ್ಯಕ್ಷ ಆನೆಕಾಡು ಫಾರ್ಮರ್ಸ್ ಗ್ರೂಪ್
ಸದ್ಯ ಅಲಸಂದೆ ರಾಗಿ ಅವರೆಕಾಳು ಹುರುಳಿಕಾಳು ಎಳ್ಳು ಜೇನು ಬೆಟ್ಟದ ನಲ್ಲಿಕಾಯಿ ಉತ್ಪನ್ನಗಳನ್ನು ‘ಆನೆಕಾಡು’ ಬ್ರ್ಯಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.– ಸುಜಯ್ ಕನಕಪುರ ಆರ್ಗ್ಯಾನಿಕ್ ಪೊಡ್ಯೂಸರ್ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.