ರಾಮನಗರ: ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಷೋ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೊಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಹಾಕಿದ್ದ ಬೀಗಮುದ್ರೆಯನ್ನು ರಾತ್ರೋರಾತ್ರಿ ತೆರವುಗೊಳಿಸಿ, ಷೋ ನಡೆಯಲು ಅನುವು ಮಾಡಿಕೊಟ್ಟಿರುವುದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಜಾಲಿವುಡ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕೆಲ ಮುಖಂಡರು ಘೋಷಣೆ ಕೂಗುತ್ತಾ ಏಕಾಏಕಿ ಜಾಲಿವುಡ್ ಒಳಕ್ಕೆ ಪ್ರವೇಶಿಸಿದರು. ಕೆಲ ಮಹಿಳೆಯರು ಗೇಟ್ ಹತ್ತಿದರು. ಆಗ ಪೊಲೀಸರು ಮುಖಂಡರು ಹಾಗೂ ಮಹಿಳೆಯರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ನಿಯಮ ಲೆಕ್ಕಕ್ಕಿಲ್ಲ:
ವಿವಿಧ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬೀಗಮುದ್ರೆ ಹಾಕುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಆದೇಶದ ಮೇರೆಗೆ, ಜಾಲಿವುಡ್ ಪಾರ್ಕ್‌ಗೆ ಬೀಗಮುದ್ರೆ ಹಾಕಿಸಿದ್ದ ಜಿಲ್ಲಾಧಿಕಾರಿ, ಇದೀಗ ಉಪ ಮುಖ್ಯಮಂತ್ರಿ ಮಾತಿಗೆ ಮಣಿದು ರಾತ್ರೋರಾತ್ರಿ ಬೀಗ ತೆಗೆಯುವ ಮೂಲಕ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ರಜಾ ದಿನವನ್ನೂ ಲೆಕ್ಕಿಸದೆ ಜಾಲಿವುಡ್‌ಗೆ ಬೀಗ ಜಡಿದು ಬಿಗ್ ಬಾಸ್ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸಿದ್ದ ಜಿಲ್ಲಾಧಿಕಾರಿ, ಡಿಸಿಎಂ ಸೂಚನೆ ನೀಡಿದರೆಂದು ರಾತ್ರಿ 2.30ರ ಸುಮಾರಿಗೆ ಪೊಲೀಸರೊಂದಿಗೆ ಬಂದು ಸ್ಟುಡಿಯೊ ಬೀಗ ತೆರವುಗೊಳಿಸುವಂತಹ ತುರ್ತು ಪರಿಸ್ಥಿತಿ ಏನಿತ್ತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಮಂಡಳಿಯು ಈಗಾಗಲೇ 150 ಕಾರ್ಖಾನೆಗಳನ್ನು ನಿಯಮ ಉಲ್ಲಂಘನೆಗಾಗಿ ಬೀಗ ಹಾಕಲಾಗಿದೆ. ಅವುಗಳ ಬೀಗ ಸಹ ತೆಗೆದು ಕಾರ್ಯಾಚರಣೆ ಅವಕಾಶ ನೀಡಬೇಕು. ಬಿಗ್ ಬಾಸ್ ಶೂಟಿಂಗ್ ಕೇವಲ ಮೂರು ತಿಂಗಳು ನಡೆಯಲಿದೆ. ಆದರೆ, ಮುಚ್ಚಿರುವ ಕಾರ್ಖಾನೆಗಳು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದವು. ಜಾಲಿವುಡ್‌ಗೆ ಒಂದು ನ್ಯಾಯ, ಕಾರ್ಖಾನೆಗಳಿಗೆ ಮತ್ತೊಂದು ನ್ಯಾಯವಾದರೆ ಹೇಗೆ ಎಂದು ಆಕ್ರೋಶ ಹೊರಹಾಕಿದರು.
ಕಸ್ತೂರಿ ಕನ್ನಡಪರ ಸಂಘಟನೆಯ ನೀಲೇಶ್ ಗೌಡ, ಮುಖಂಡ ನರಸಿಂಹಮೂರ್ತಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಜಾಲಿವುಡ್ ಪಾರ್ಕ್ ತಮಿಳುನಾಡು ಮೂಲದ ವೇಲ್ಸ್ ಸ್ಟುಡಿಯೊಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಒಡೆತನಕ್ಕೆ ಸೇರಿದೆ. ಮಂಡಳಿಯು ಪಾರ್ಕ್‌ಗೆ ಬೀಗ ಹಾಕುತ್ತಿದ್ದಂತೆ, ಪಾರ್ಕ್‌ನವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೊರೆ ಹೋಗಿದ್ದಾರೆ. ಸ್ಟಾಲಿನ್ ಕರೆ ಮಾಡಿದ ತಕ್ಷಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೀಗ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನಿಡಿದ್ದಾರೆ ಎಂದು ಕನ್ನಡಪರ ಹೋರಾಟಗಾರ ನರಸಿಂಹಮೂರ್ತಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.