ನಿಖಿಲ್ ಕುಮಾರಸ್ವಾಮಿ
– ಫೇಸ್‌ಬುಕ್ ಚಿತ್ರ
ಬಿಡದಿ (ರಾಮನಗರ): ‘ಸಂದಿಗ್ಧ ರಾಜಕೀಯ ಪರಿಸ್ಥಿತಿಯಲ್ಲಿ ಕಾರ್ಯ
ಕರ್ತರ ಒತ್ತಡ ಹಾಗೂ ಜೆಡಿಎಸ್–ಬಿಜೆಪಿ ನಾಯಕರ ಮಾತಿಗೆ ತಲೆಬಾಗಿ ಚುನಾವಣೆಗೆ ಸ್ಪರ್ಧಿಸಿದೆ. ಕ್ಷೇತ್ರದ ಫಲಿತಾಂಶವು ನಮಗೆ ಆಘಾತ ತಂದಿದೆ. ಅಭ್ಯರ್ಥಿ ಆಯ್ಕೆ ವಿಳಂಬವಾಗದಿದ್ದಿದ್ದರೆ ನಾವು ಗೆಲ್ಲುತ್ತಿದ್ದೆವು. ಹಿಂದಿನಿಂದಲೂ ಜೊತೆಗಿದ್ದ ಅಲ್ಪಸಂಖ್ಯಾತರು ನಮ್ಮ ಕೈ ಹಿಡಿಯಲಿಲ್ಲ’ ಎಂದು ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ಲೇಷಿಸಿದರು.
ಉಪ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಜೆಡಿಎಸ್ ಕ್ಷೇತ್ರ. ಯಾವುದೇ ಕಾರಣಕ್ಕೂ ಬೇರೆಯವರಿಗೆ ಬಿಡಬಾರದು ಎಂಬ ಸ್ವಾರ್ಥದಿಂದ ನಾವು ಚುನಾವಣೆ ಎದುರಿಸಿದ್ದರೆ ನಾನು ಖಂಡಿತಾ ಗೆಲ್ಲುತ್ತಿದ್ದೆ. ಚುನಾವಣೆಗೆ ಕನಿಷ್ಠ ನಾಲ್ಕು ತಿಂಗಳು ಸಮಯ ಸಿಗುತ್ತಿತ್ತು’ ಎಂದರು.
‘ನಾವು ಬಿಜೆಪಿ ಜೊತೆ ಮೈತ್ರಿ ಮಾಡಿ ಕೊಂಡಿರುವುದರಿಂದ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳದೆ ಮೈತ್ರಿ ನಾಯಕರ ಅಭಿಪ್ರಾಯ ಮತ್ತು ಭಾವನೆಗೆ ಗೌರವ ಕೊಟ್ಟೆವು. ಅದೇ ಕಾರಣಕ್ಕೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ಪ್ರಕ್ರಿಯೆ ನಾಮಪತ್ರ ಸಲ್ಲಿಸುವ ಹಿಂದಿನ ದಿನದ
ವರೆಗೆ ನಡೆಯಿತು’ ಎಂದು ಹೇಳಿದರು.
‘ಎರಡೂ ಪಕ್ಷಗಳ ಕಾರ್ಯಕರ್ತರು ಯೋಧರಂತೆ ಕೆಲಸ ಮಾಡಿದರು. ಸೋಲು ಮತ್ತು ಗೆಲುವಿಗೆ ತನ್ನದೇ ಆದ ಕಾರಣಗಳಿರುತ್ತವೆ. ಬಹುಶಃ ಒಂದು ಸಮುದಾಯದ (ಮುಸ್ಲಿಂ) ಮತಗಳು ಕಾಂಗ್ರೆಸ್ ಪರ ಕ್ರೋಡೀಕರಣಗೊಂಡವು. ನಮ್ಮ ಪಕ್ಷ ಅವರ ಪರವಾಗಿ ಹಲವು ವರ್ಷಗಳಿಂದ ನಿಂತರೂ ಮೀಸಲಾತಿ ಸೇರಿದಂತೆ ಎಷ್ಟೇ ಕೊಡುಗೆಗಳನ್ನು ನೀಡಿದರೂ ಅವರು ನಮ್ಮ ಕೈ ಹಿಡಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಭಿವೃದ್ಧಿ ಪ್ರಚಾರದ ಕೊರತೆ’: ‘ಕುಮಾರಣ್ಣನ ಅವಧಿಯಲ್ಲಿ ಕ್ಷೇತ್ರಕ್ಕೆ ಸುಮಾರು ₹1,500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಅದನ್ನು ಸರಿಯಾಗಿ ಜನರಿಗೆ ಹೇಳುವಲ್ಲಿ ನಾವು ಸೋತಿದ್ದೇವೆ. ನಮ್ಮ ಅಭಿವೃದ್ಧಿ ಕೆಲಸಗಳ ಕುರಿತು ಪ್ರಚಾರದ ಕೊರತೆ ಇದೆ. ಅದು ನಮ್ಮಲ್ಲಿರುವ ದೊಡ್ಡ ಲೋಪ ಎಂಬುದು ಅರಿವಾಗಿದೆ’ ಎಂದರು.
‘ಕೆಲವರು ನೂರು ರೂಪಾಯಿ ಕೆಲಸ ಮಾಡಿದರೆ ಸಾವಿರ ರೂಪಾಯಿಯ ಪ್ರಚಾರ ಪಡೆಯುತ್ತಾರೆ. ನಾವು ಸಾವಿರದ ಕೆಲಸ ಮಾಡಿದರೂ ಪ್ರಚಾರ ಪಡೆಯಲಿಲ್ಲ. ನಮ್ಮಲ್ಲಿರುವ ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಪ್ರತಿಕ್ರಿಯಿಸಿದರು.
ನಮಗೆ ಸ್ವಾರ್ಥವಿದ್ದಿದ್ದರೆ ಗೆಲ್ಲುತ್ತಿದ್ದೆವು
‘ಇದು ಜೆಡಿಎಸ್ ಕ್ಷೇತ್ರ. ಯಾವುದೇ ಕಾರಣಕ್ಕೂ ಬಿಟ್ಟು ಕೊಡದೆ ನಾವೇ ಇಲ್ಲಿ ನಿಲ್ಲಬೇಕು ಎಂಬ ಸ್ವಾರ್ಥದಿಂದ ನಾವು ಚುನಾವಣೆ ಎದುರಿಸಿದ್ದರೆ ನಾನು ಖಂಡಿತಾ ಗೆಲ್ಲುತ್ತಿದ್ದೆ. ಯಾಕೆಂದರೆ, ಚುನಾವಣೆಗೆ ನಮಗೆ ಕನಿಷ್ಠ ನಾಲ್ಕು ತಿಂಗಳು ಸಮಯ ಸಿಗುತ್ತಿತ್ತು. ಆದರೆ, ನಾವು ಬಿಜೆಪಿ ಜೊತೆ ಮೈತ್ರಿಯಾಗಿದ್ದರಿಂದ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳದೆ ಮೈತ್ರಿ ಪಕ್ಷದ ನಾಯಕರ ಅಭಿಪ್ರಾಯ ಮತ್ತು ಭಾವನೆಗೂ ಗೌರವ ಕೊಡಬೇಕಿತ್ತು. ಅದೇ ಕಾರಣಕ್ಕೆ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿತು’ ಎಂದು ನಿಖಿಲ್ ಹೇಳಿದರು.
‘ಬಲಿಪಶು ಕಳಂಕದಿಂದ ಮುಕ್ತನಾಗಿದ್ದೇನೆ’
‘ಪಕ್ಷದಿಂದ ನಾನೇ ಹೊರತು, ನನ್ನಿಂದ ಪಕ್ಷವಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸ್ಪರ್ಧಿಸಬೇಕಾಯಿತು. ಕಾರ್ಯಕರ್ತರ ಒತ್ತಡ ಮತ್ತು ಹಿರಿಯ ನಾಯಕರ ಸಲಹೆ ಗೌರವಿಸದೆ ನಾನು ಸ್ಪರ್ಧೆಗೆ ನಿರಾಕರಿಸಿದ್ದರೆ, ಗೆಲುವಿಗೆ ಪೂರಕವಾದ ಸ್ಥಿತಿ ಇಲ್ಲವೆಂದು ನಮ್ಮ ಕುಟುಂಬದವರು ಕಾರ್ಯಕರ್ತರನ್ನು ಬಲಿಪಶು ಮಾಡುತ್ತಿದ್ದಾರೆ ಎಂಬ ಕಳಂಕ ಬರುತ್ತಿತ್ತು. ಸೋಲಿನ ಸ್ಥಿತಿ ಇದ್ದರೂ ಸ್ಪರ್ಧಿಸಿದ ನಾನು, ಬೇರೆಯವರನ್ನು ಬಲಿಪಶುಮಾಡುವ ಕಳಂಕದಿಂದ ಮುಕ್ತನಾಗಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಸುಳ್ಳಾದ ಭವಿಷ್ಯ, ಜ್ಯೋತಿಷ
ಚನ್ನಪಟ್ಟಣ: ನಿಖಿಲ್ ಕುಮಾರಸ್ವಾಮಿ ಅವರು ಉಪಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ ಎಂದು ದೇವಸ್ಥಾನವೊಂದರ ಬಸವ (ಎತ್ತು) ಭವಿಷ್ಯ ನುಡಿದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಆ ಭವಿಷ್ಯ ಸುಳ್ಳಾದಂತಾಗಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಭಾವಚಿತ್ರ ಇಟ್ಟು ಬಸವನನ್ನು ಪೂಜೆ ಮಾಡಿ ಕಳಿಸಿದ್ದ ಸಂದರ್ಭದಲ್ಲಿ ಬಸವ, ನಿಖಿಲ್ ಭಾವಚಿತ್ರದ ಬಳಿ ಬಂದು ನಿಂತಿತ್ತು. ಆಗ ನಿಖಿಲ್ ಗೆಲ್ಲುತ್ತಾರೆ ಎಂದು ಎಲ್ಲರೂ ನಂಬಿದ್ದರು. ಅದು ನಿಖಿಲ್ ಸೋಲಿನೊಂದಿಗೆ ಸುಳ್ಳಾಗಿದೆ.
ಇದರ ಜೊತೆಗೆ ನಗರದ ಕೋಟೆ ಮಾರಮ್ಮನ ದೇವಸ್ಥಾನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸುತ್ತಿದ್ದ ವೇಳೆ ಬಲಗಡೆಯಿಂದ ಹೂ ಬಿದ್ದಿತ್ತು. ಇದಲ್ಲದೆ ಗಿಳಿಶಾಸ್ತ್ರ, ಕವಡೆ ಶಾಸ್ತ್ರ ಸೇರಿ ಕೆಲವು ಶಾಸ್ತ್ರಗಳಲ್ಲಿಯೂ ನಿಖಿಲ್ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಈ ಎಲ್ಲ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಸೋತೆ ಎಂದು ಜಿಲ್ಲೆ ಬಿಡುವ ಬಗ್ಗೆ ನಾನೆಂದೂ ಯೋಚಿಸಿಲ್ಲ. ನನಗೆ ಶಾಸಕ ಎಂಬ ಪಟ್ಟ ಇಲ್ಲವಷ್ಟೇ. ಕಾರ್ಯಕರ್ತರ ಹೃದಯದಲ್ಲಿರುವ ನಾನು, ಎಲ್ಲೂ ಹೋಗದೆ ಅವರ ಋಣ ತೀರಿಸುವೆನಿಖಿಲ್ ಕುಮಾರಸ್ವಾಮಿ ಪರಾಜಿತ ಜೆಡಿಎಸ್ ಅಭ್ಯರ್ಥಿ, ಚನ್ನಪಟ್ಟಣ
ಸುಳ್ಳಾದ ಭವಿಷ್ಯ, ಜ್ಯೋತಿಷ
ಚನ್ನಪಟ್ಟಣ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಉಪಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ ಎಂದು ದೇವಸ್ಥಾನವೊಂದರ ಬಸವ (ಎತ್ತು) ಭವಿಷ್ಯ ನುಡಿದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಆ ಭವಿಷ್ಯ ಸುಳ್ಳಾದಂತಾಗಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಭಾವಚಿತ್ರ ಇಟ್ಟು ಬಸವನನ್ನು ಪೂಜೆ ಮಾಡಿ ಕಳಿಸಿದ್ದ ಸಂದರ್ಭದಲ್ಲಿ ಬಸವ, ನಿಖಿಲ್ ಭಾವಚಿತ್ರದ ಬಳಿ ಬಂದು ನಿಂತಿತ್ತು. ಆಗ ನಿಖಿಲ್ ಗೆಲ್ಲುತ್ತಾರೆ ಎಂದು ಎಲ್ಲರೂ ನಂಬಿದ್ದರು. ಅದು ನಿಖಿಲ್ ಸೋಲಿನೊಂದಿಗೆ ಸುಳ್ಳಾಗಿದೆ.
ಇದರ ಜೊತೆಗೆ ನಗರದ ಕೋಟೆ ಮಾರಮ್ಮನ ದೇವಸ್ಥಾನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸುತ್ತಿದ್ದ ವೇಳೆ ಬಲಗಡೆಯಿಂದ ಹೂ ಬಿದ್ದಿತ್ತು. ಇದಲ್ಲದೆ ಗಿಳಿಶಾಸ್ತ್ರ, ಕವಡೆ ಶಾಸ್ತ್ರ ಸೇರಿ ಕೆಲವು ಶಾಸ್ತ್ರಗಳಲ್ಲಿಯೂ ನಿಖಿಲ್ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಈ ಎಲ್ಲ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.