ರಾಮನಗರ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯನ್ನು ಕುಟುಂಬದ ವಿರೋಧ ಲೆಕ್ಕಿಸದೆ ಅಂತರ್ಜಾತಿ ವಿವಾಹವಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ, ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ ಕೈ ಕೊಟ್ಟು ತಲೆ ಮರೆಸಿಕೊಂಡಿದ್ದಾನೆ.
ಅತ್ತ ಪತಿ ಮನೆಯವರು ಸೇರಿಸದೆ ಇತ್ತ ತವರು ಮನೆಯಲ್ಲೂ ಆಶ್ರಯ ಸಿಗದೆ ಅತಂತ್ರ ಸ್ಥಿತಿ ತಲುಪಿರುವ ಯುವತಿ, ತಾಲ್ಲೂಕಿನ ಬಿಳಗುಂಬದಲ್ಲಿರುವ ಪತಿ ಮನೆ ಎದುರು ನ್ಯಾಯಕ್ಕಾಗಿ ಎದುರು ಬುಧವಾರ ಧರಣಿ ನಡೆಸಿದ್ದಾಳೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುತ್ತಿದ್ದ ತಾಲ್ಲೂಕಿನ ಬನ್ನಿಕುಪ್ಪೆಯ ಎಸ್‌ಸಿ ಸಮುದಾಯದ ರಕ್ಷಿತಾ ಮತ್ತು ರೀಲ್ಸ್‌ಗಳನ್ನು ಮೆಚ್ಚಿ ಸಂದೇಶ ಕಳಿಸುತ್ತಿದ್ದ ಬಿಳಗುಂಬದ ಒಕ್ಕಲಿಗ ಸಮುದಾಯದ ಪ್ರತಾಪ್ ನಡುವಣ ಸ್ನೇಹ ಪ್ರೀತಿಗೆ ತಿರುಗಿತ್ತು. ಅಂತರ್ಜಾತಿ ಕಾರಣಕ್ಕೆ ಮದುವೆಗೆ ಇಬ್ಬರ ಮನೆಯವರೂ ವಿರೋಧಿಸಿದ್ದರು. ವಿರೋಧ ಲೆಕ್ಕಿಸದೆ ವರ್ಷದ ಹಿಂದೆ ಇಬ್ಬರೂ ತಿರುಪತಿಯಲ್ಲಿ ಮದುವೆಯಾಗಿದ್ದರು.
ಜಾತಿ ಕಾರಣ: ‘ಮದುವೆಯಾದ ಬಳಿಕ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಾವಿಬ್ಬರು ಬಾಡಿಗೆ ಮನೆಯಲ್ಲಿ ನೆಲೆಸಿದ್ದೆವು. ಆರಂಭದಲ್ಲಿ ಚನ್ನಾಗಿದ್ದ ಪ್ರತಾಪ್, ನಂತರ ಅವರ ಕುಟುಂಬದವರ ಮಾತು ಕೇಳಿ ಜಾತಿ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದರಿಂದ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದು ಧರಣಿ ನಿರತ ರಕ್ಷಿತಾ ಸುದ್ದಿಗಾರರ ಬಳಿ ಅಳಲು ತೋಡಿಕೊಂಡರು.
‘ಗರ್ಭವತಿಯಾಗಿದ್ದ ನನಗೆ ಎರಡು ಸಲ ಶಸ್ತ್ರಚಿಕಿತ್ಸೆ ಮಾಡಿರುವ ಪ್ರತಾಪ್, ಮನೆಯವರ ಮಾತು ಕೇಳಿ ನನಗೆ ಮೋಸ ಮಾಡಿದ್ದಾನೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ನಾಪತ್ತೆಯಾಗಿರುವ ಅವರನ್ನು ಹುಡುಕಿ, ನನ್ನೊಂದಿಗೆ ಸಂಸಾರ ಮಾಡುವಂತೆ ಬುದ್ಧಿ ಹೇಳಿ ಎಂದು ಕಳೆದ ತಿಂಗಳು ಚಾಮರಾಜಪೇಟೆ ಮತ್ತು ಬಿಡದಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
‘ಅಂತರ್ಜಾತಿ ಮದುವೆ ಕಾರಣಕ್ಕೆ ಅತ್ತ ತವರು ಮನೆಯವರು, ಇತ್ತ ಗಂಡನ ಮನೆಯವರು ಸಹ ನನ್ನನ್ನು ಮನೆಗೆ ಸೇರಿಸುತ್ತಿಲ್ಲ. ಯಾರ ಆಶ್ರಯವೂ ಇಲ್ಲದ ನಾನೀಗ ಬೀದಿಗೆ ಬಿದ್ದಿದ್ದೇನೆ. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಬೇಕು. ಅದಕ್ಕಾಗಿ, ಬಿಳಗುಂಬದಲ್ಲಿರುವ ಪ್ರತಾಪ್ ಅವರ ಮನೆ ಮುಂದೆ ಧರಣಿ ನಡೆಸಿರುವೆ. ನಮ್ಮ ಮದುವೆ ವಿಷಯ ಅವರ ಮನೆಯವರಿಗೆ ತಿಳಿದಿದ್ದರೂ ಏನು ಗೊತ್ತಿಲ್ಲದ್ದವರಂತೆ ವರ್ತಿಸುತ್ತಿದ್ದಾರೆ’ ಎಂದ ಹೇಳಿದರು.
ಯುವತಿ ಧರಣಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರತಾಪ್ ತಾಯಿ ಶಾಂತಮ್ಮ, ‘ನನ್ನ ಮಗ ಮದುವೆಯಾಗಿರುವುದು ಹಾಗೂ ಇವರ ಸಂಬಂಧದ ಬಗ್ಗೆ ನಮಗೆ ಮಾಹಿತಿ ಇಲ್ಲ. ಏನೇ ಇದ್ದರೂ ಅವರೇ ಬಗೆಹರಿಸಿಕೊಳ್ಳಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.