ಚನ್ನಪಟ್ಟಣ: ಶಿವರಾತ್ರಿಯಂದು ಶಿವ ಭಕ್ತರು ಇಡೀ ದಿನ ಉಪವಾಸ ಮಾಡಿ ರಾತ್ರಿ ಹಣ್ಣು, ಹಂಪಲು ಸೇವಿಸಿದರೆ, ತಾಲ್ಲೂಕಿನ ಮಂಗಾಡಹಳ್ಳಿಯ ಗ್ರಾಮಸ್ಥರು ಶಿವರಾತ್ರಿಯಂದು ಶಿವನಿಗೆ ಕುರಿ, ಕೋಳಿ, ಮೇಕೆ ಬಲಿ ಕೊಟ್ಟು ಮಾಂಸದೂಟ ಸವಿಯುತ್ತಾರೆ.
ಮಂಗಾಡಹಳ್ಳಿ ಗ್ರಾಮದ ಚನ್ನಪ್ಪಾಜಿಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿಯಂದು ಕುರಿ, ಮೇಕೆ, ಕೋಳಿಗಳನ್ನು ಬಲಿ ನೀಡುತ್ತಾರೆ. ಅಲ್ಲಿಯೇ ಮಾಂಸದ ಅಡುಗೆ ತಯಾರಿಸಿ ಎಲ್ಲಾ ಭಕ್ತರಿಗೂ ಉಣ ಬಡಿಸುತ್ತಾರೆ. ಪ್ರತಿವರ್ಷವೂ ತಪ್ಪದೆ ಈ ವಾಡಿಕೆ ನಡೆದುಕೊಂಡು ಬರುತ್ತಿದೆ.
ಶಿವರಾತ್ರಿಯಂದು ಚನ್ನಪ್ಪಾಜಿಗೆ ಬಲಿ ನೀಡಿ ಮಾಂಸಾಹಾರ ಸೇವನೆ ಮಾಡುವುದು ಸಂಪ್ರದಾಯ ಎನ್ನುತ್ತಾರೆ ಗ್ರಾಮಸ್ಥರು. ಈ ಪದ್ಧತಿ ಯಾವಾಗ ಮತ್ತು ಯಾರಿಂದ ಆರಂಭವಾಯಿತು ಎನ್ನುವುದು ಜನರಿಗೆ ಗೊತ್ತಿಲ್ಲ.
ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಶಿವರಾತ್ರಿಯಂದು ಚನ್ನಪ್ಪಾಜಿ ಸ್ವಾಮಿಗೆ ಮಾಂಸದ ಅಡುಗೆ ಪ್ರಿಯ. ಯಾವ ವರ್ಷವೂ ಈ ಪದ್ಧತಿ ನಿಲ್ಲಿಸಿದ ಉದಾಹರಣೆ ಇಲ್ಲ. ಒಂದು ವೇಳೆ ನಿಲ್ಲಿಸಿದರೆ ಯಾವುದಾದರೂ ತೊಂದರೆ ಎದುರಾಗಬಹುದು ಎಂಬುದು ಚನ್ನಪ್ಪಸ್ವಾಮಿ ಒಕ್ಕಲಿನವರ ನಂಬಿಕೆಯಾಗಿದೆ ಎನ್ನುತ್ತಾರೆ ಭಕ್ತರು.
ಮೊದಮೊದಲು ಚಿಕ್ಕದಾಗಿ ನಡೆಯುತ್ತಿದ್ದ ಈ ಸೇವೆ ಈಗ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಮಂಗಾಡಹಳ್ಳಿ, ವಿರುಪಾಕ್ಷಿಪುರ, ಬಲ್ಲಾಪಟ್ಟಣ, ಕೋಡಂಬಹಳ್ಳಿ, ಸೋಗಾಲ, ಅಕ್ಕೂರು, ಸಾದಾರಹಳ್ಳಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಹಾಗೂ ಚನ್ನಾಪ್ಪಾಜಿ ಒಕ್ಕಲಿನವರು ಇಲ್ಲಿಗೆ ಬಂದು ಸೇವೆ ತೀರಿಸುತ್ತಾರೆ.
ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಶಿವರಾತ್ರಿಯಂದು ಕುರಿ, ಕೋಳಿ ಬಲಿ ಕೊಟ್ಟು ಸಾಮೂಹಿಕವಾಗಿ ಹರಕೆ ತೀರಿಸುತ್ತಾರೆ. ನಂತರ ದೇವಸ್ಥಾನದ ಆವರಣದಲ್ಲೆ ಮಾಂಸದ ಅಡುಗೆ ಮಾಡಿ ಬರುವ ಭಕ್ತರಿಗೆಲ್ಲ ಉಣ ಬಡಿಸುತ್ತಾರೆ. ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡುತ್ತಾರೆ. ರಾತ್ರಿಯವರೆಗೂ ಉಣ ಬಡಿಸುತ್ತಾರೆ ಎಂದು ಕೆ.ಎಸ್.ನಾಗರಾಜು, ಮಂಗಾಡಹಳ್ಳಿ ಮಹೇಶ್, ಪುಟ್ಟಸ್ವಾಮಿ ತಿಳಿಸಿದರು.
ಮಹಾಶಿವರಾತ್ರಿಯ ದಿನ ಮಾಂಸದೂಟ ಸವಿದ ನೂರಾರು ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.