ಶಿವಮೊಗ್ಗ: ರಾಜ್ಯದಲ್ಲೇ ಅತಿಹೆಚ್ಚು ಮಳೆ ಸುರಿಯುತ್ತಿದ್ದುದರಿಂದ ಕರ್ನಾಟಕದ ಚಿರಾಪುಂಜಿ ಎಂದು ಹೆಸರಾಗಿದ್ದ ಆಗುಂಬೆಯಲ್ಲೇ ಅತಿಹೆಚ್ಚು ಬಿಸಿಲು ಕಂಡುಬರುತ್ತಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದಕ್ಷಿಣ ಒಳನಾಡಿನ ಮಲೆನಾಡು ಒಳಗೊಂಡಂತೆ 13 ಜಿಲ್ಲೆಗಳ ಪೈಕಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಗುರುವಾರ (ಮಾರ್ಚ್ 13) ಅತಿಹೆಚ್ಚು 36.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಹವಾಮಾನ ವೈಪರೀತ್ಯದ ಪರಿಣಾಮವನ್ನು ತೋರಿಸುತ್ತಿದೆ.
ಈ ಪಟ್ಟಿಯಲ್ಲಿ ದಾವಣಗೆರೆ (36 ಡಿಗ್ರಿ ಸೆಲ್ಸಿಯಸ್) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಶಿವಮೊಗ್ಗದಲ್ಲಿ 35.6 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ವಿಶೇಷವೆಂದರೆ ಬಯಲು ಸೀಮೆಯ ಚಿತ್ರದುರ್ಗ (35.1 ಡಿಗ್ರಿ) ಹಾಗೂ ಕೋಲಾರ ಜಿಲ್ಲೆಯ ಚಿಂತಾಮಣಿಗಿಂತ (33.1 ಡಿಗ್ರಿ) ಶಿವಮೊಗ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿದೆ!
‘ಅಭಿವೃದ್ಧಿ’ಯಿಂದಾಗಿ ಹಸಿರುಡುಗೆ ಕಳೆದುಕೊಳ್ಳುತ್ತಿರುವ ಮಲೆನಾಡಿನಲ್ಲಿ ತಂಪನೆಯ ವಾತಾವರಣ ಕಾಣೆಯಾಗಿದೆ. ವೈಶಾಖದ ದಿನಗಳು ಪ್ರಖರವಾಗುತ್ತಿವೆ. ತುಂಗೆ–ಭದ್ರೆ, ಶರಾವತಿ, ಕುಮದ್ವತಿ ನದಿಗಳ ವೈಯ್ಯಾರದಿಂದ ತಂಪಿನ ಒಸಗೆ ಆಗಿದ್ದ ಸಹ್ಯಾದ್ರಿಯ ತಪ್ಪಲು ಈಗ ಬಿಸಿ ಬಾಣಲೆಯಾಗಿ ಮಾರ್ಪಟ್ಟಿದೆ.
ಕಳೆದ ವರ್ಷ 42 ಡಿಗ್ರಿ ಉಷ್ಣಾಂಶ ದಾಖಲು: 2019ರಿಂದ ಈಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್–ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ಬೇಗೆ ತೀವ್ರಗೊಂಡಿದೆ. 2022ರ ಏಪ್ರಿಲ್ 15ರಂದು ಜಿಲ್ಲೆಯಲ್ಲಿ ಉಷ್ಣಾಂಶ 42 ಡಿಗ್ರಿ ತಲುಪಿತ್ತು. 2024ರ ಮಾರ್ಚ್ 28ರಂದು 41 ಡಿಗ್ರಿ, ಏಪ್ರಿಲ್ 8ರಂದು 42 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಎಂಬುದನ್ನು ಭಾರತೀಯ ಹವಾಮಾನ ಇಲಾಖೆಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.
‘ಬಯಲು ಸೀಮೆಗಿಂತ ಬಿಸಿಲು ಇಲ್ಲಿ ಹೆಚ್ಚಾಗಿದೆ. ಇದು ಮಲೆನಾಡಿನ ಜನರಿಗೆ ಎಚ್ಚರಿಕೆ ಗಂಟೆ. ಜಿಲ್ಲೆಯಲ್ಲಿ ಈಗ ನಿಜವಾದ ಕಾಡು ಉಳಿದಿಲ್ಲ. ಈಗ ನೀಲಗಿರಿ, ಅಕೇಶಿಯಾ, ರಬ್ಬರ್, ಅಡಿಕೆ ಮಾತ್ರ ಕಾಣಸಿಗುತ್ತಿದೆ’ ಎಂದು ಪರಿಸರ ಹೋರಾಟಗಾರ ಪ್ರೊ.ಬಿ.ಎಂ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.
ಬಿಸಿಲು ಮಾತ್ರವಲ್ಲ ಡಿಟಿಆರ್ ವ್ಯತ್ಯಾಸ ಹೆಚ್ಚಳ..
‘ಬರೀ ಬಿಸಿಲು ಮಾತ್ರವಲ್ಲ. ದೈನಂದಿನ ಉಷ್ಣಾಂಶ ಮಟ್ಟದಲ್ಲಿನ (Daily Temperature Range) ವ್ಯತ್ಯಾಸ ಕೂಡ ಬಹಳ ಹೆಚ್ಚುತ್ತಿದೆ. ಮೊದಲೆಲ್ಲ ದಿನದಲ್ಲಿ ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶದ ನಡುವಿನ ವ್ಯತ್ಯಾಸ 2ರಿಂದ 3 ಡಿಗ್ರಿ ಇರುತ್ತಿತ್ತು. ಅದೀಗ 5ರಿಂದ 6 ಡಿಗ್ರಿ ಇರುತ್ತದೆ. ಕೆಲವೊಮ್ಮೆ 10 ಡಿಗ್ರಿಗೆ ಹೆಚ್ಚುತ್ತಿದೆ’ ಎಂದು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗ್ರಾಮೀಣ ಕೃಷಿ ಹಾಗೂ ಹವಾಮಾನ ಸೇವಾ ವಿಭಾಗದ ಪ್ರಧಾನ ನೋಡಲ್ ಅಧಿಕಾರಿ ಡಾ.ಎಸ್. ಶ್ರೀಧರ್ ಹೇಳುತ್ತಾರೆ. ‘ನಸುಕಿನಲ್ಲಿ ಹೆಚ್ಚು ಚಳಿ ಇದ್ದರೆ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಭಾರಿ ಬಿಸಿಲು ಕಾಣುತ್ತಿದ್ದೇವೆ. ಇದರಿಂದ ವಾತಾವರಣದಲ್ಲಿ ಆರ್ದ್ರತೆ ಬಹಳಷ್ಟು ಕಡಿಮೆ ಆಗುತ್ತಿದೆ. ಇದು ಮನುಷ್ಯ ಹಾಗೂ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ವಾತಾವರಣಕ್ಕೆ ಆಗುವ ಆವಿಯ ಪ್ರಮಾಣ ಹೆಚ್ಚಿ ನೀರಿನ ಅಭಾವ ಆಗುತ್ತಿದೆ. ಪ್ರಕೃತಿ ಜೊತೆ ಹೊಂದಿಕೊಂಡು ಹೋಗುವ ಬದಲು ಅದರ ಮೇಲೆ ಆಕ್ರಮಣ ಮಾಡಿದ್ದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಹವಾಮಾನ ಬದಲಾಗುತ್ತಿದೆ. ಮಲೆನಾಡಿನಲ್ಲಿ ಮಳೆಯೂ ಕಡಿಮೆ ಆಗಬಹುದು’ ಎಂದು ಅವರು ಹೇಳುತ್ತಾರೆ.
ಹೆದ್ದಾರಿ ವಿಸ್ತರಣೆ ನೆಪದಲ್ಲಿ ತೀರ್ಥಹಳ್ಳಿಯಲ್ಲಿ 1200 ಮರಗಳನ್ನು ಕಡಿಯುತ್ತಿದ್ದೇವೆ. ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಲ್ಲಿ ಸಿಂಗಳೀಕ ಅಭಯಾರಣ್ಯ ಹಾಳು ಮಾಡಲು ಹೊರಟಿದ್ದೇವೆ. ಸಹಜ ಹಸಿರು ಕಾಣೆಯಾಗಿ ಎಲ್ಲವೂ ಕೈ ಮೀರುತ್ತಿದೆ.-ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಿಸರ ಹೋರಾಟಗಾರ
ಮರ–ಗಿಡಗಳ ಸಂಖ್ಯೆ ಕಡಿಮೆ ಆಗಿದೆ. ವಾತಾವರಣದಲ್ಲಿ ಇಂಗಾಲದ ಡೈ–ಆಕ್ಸೈಡ್ ಪ್ರಮಾಣ ಹೆಚ್ಚಿ ಉಷ್ಣಾಂಶ ಏರಿಕೆಯಾಗುತ್ತಿದೆ. ಬಿಸಿಲಾಘಾತದಿಂದ ಮುಂಜಾಗರೂಕತೆ ವಹಿಸುವಂತೆ ಸಾರ್ವಜನಿಕರಿಗೂ ಮಾಹಿತಿ ನೀಡುತ್ತಿದ್ದೇವೆ.-ಸಿ.ಎಸ್.ಪಾಟೀಲ, ನಿರ್ದೇಶಕರು ಭಾರತೀಯ ಹವಾಮಾನ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.