ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, ಈ ಬಾರಿಯ ಚೌತಿಗೆ ಗಣೇಶನನ್ನು ಸ್ವಾಗತಿಸುವ ಯುವ ಸಮೂಹದ ಉತ್ಸಾಹವನ್ನು ಕೊಂಚ ತಗ್ಗಿಸಿತು.
ಗೌರಮ್ಮನ ಹಿಂದೆಯೇ ಪುತ್ರ ಗಣೇಶ ಬಂದರೂ ಮಳೆಯ ಆಟಾಟೋಪಕ್ಕೆ ಸಿಲುಕಿದನು. ಸಾರ್ವಜನಿಕ ದರ್ಶನಕ್ಕೆ ಟ್ರ್ಯಾಕ್ಟರ್ ಸೇರಿದಂತೆ ತೆರೆದ ವಾಹನಗಳಲ್ಲಿ ಕೊಂಡೊಯ್ದ ಗಣೇಶನನ್ನು ಛತ್ರಿ, ಪ್ಲಾಸ್ಟಿಕ್ ಶೀಟ್, ಪಾಟಿನ ರಕ್ಷಣೆಯಲ್ಲಿ ಸ್ವಾಗತಿಸಬೇಕಾಯಿತು. ಡಿಜೆ ಸದ್ದಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿರುವುದರಿಂದ ಡೊಳ್ಳು, ನಾದ ಸ್ವರದ ಸದ್ದು ಗಣೇಶನಾಗಮನಕ್ಕೆ ಮೆರುಗು ನೀಡಿದವು. ‘ಗಣಪತಿ ಬಪ್ಪಾ ಮೋರೆಯಾ’, ‘ಶ್ರೀ ವಿಘ್ನೇಶ್ವರ ಮಹರಾಜ್ ಕೀ ಜೈ’ ಎಂಬ ಘೋಷಣೆಗಳು ಕೇಳಿಬಂದವು.
ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗಳನ್ನು ಬುಧವಾರ ರಾತ್ರಿಯೇ ಹೆಚ್ಚಿನವರು ಮಹಾನಗರ ಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ವ್ಯವಸ್ಥೆ ಮಾಡಿದ್ದ ಕಡೆ ವಿಸರ್ಜನೆ ಮಾಡಿದರು. ಅದಕ್ಕೂ ಮುನ್ನ ವಿಘ್ನ ವಿನಾಶಕನಿಗೆ ಭಕ್ತಿ–ಭಾವದಿಂದ ನಮಿಸಿ ವಿಶೇಷ ಪೂಜೆ ನೆರವೇರಿಸಿದರು. ಗಣಪನಿಗೆ ಮೋದಕ, ಉಂಡೆ–ಹೋಳಿಗೆಯ ನೈವೇದ್ಯ ಮಾಡಿ, ಕುಟುಂಬದ ಸದಸ್ಯರು ಕೂಡಿ ವಿಶೇಷ ಭೋಜನ ಸವಿದರು.
ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಮಿತಿಗಳು ಈ ಬಾರಿ ಗಣಪನ ಆರಾಧನೆಗೆ ವೈವಿಧ್ಯಮಯ ವ್ಯವಸ್ಥೆಗಳನ್ನು ಮಾಡಿದ್ದು, ಮಳೆಯ ನಡುವೆಯೇ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿದ್ದರು. ಗ್ರಾಮೀಣ ಭಾಗದಲ್ಲಿ ಗಣಪನ ಹೊತ್ತು ತಂದ ಟ್ರ್ಯಾಕ್ಟರ್‌ಗಳಿಗೆ ಮೆರವಣಿಗೆ ಸ್ವಾಗತ ದೊರೆಯಿತು. ಮೊದಲ ದಿನದಿಂದಲೇ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯ ಸಡಗರ ಗಣಪತಿ ಪೆಂಡಾಲ್‌ಗಳ ಬಳಿ ಕಂಡುಬಂದಿತು.
ಕೊನೆಗೂ ಕಪ್ ನಮ್ದೇ..!
ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಸಂಗೊಳ್ಳಿ ಯುವಕರ ಸಂಘದಿಂದ ಪ್ರತಿಷ್ಠಾಪಿಸಿರುವ ಐಪಿಎಲ್ ಕಪ್‌ನ ಮಾದರಿ ಎತ್ತಿ ಹಿಡಿದ ಗಣಪನ ಮೂರ್ತಿ ಕ್ರಿಕೆಟ್ ಪ್ರಿಯರ ಗಮನ ಸೆಳೆಯುತ್ತಿದೆ. ಆರ್‌ಸಿಬಿ ತಂಡದ ಪ್ರತಿನಿಧಿಯಂತೆ ಕ್ರಿಕೆಟ್ ಆಟಗಾರನ ಧಿರಿಸಿನಲ್ಲಿ ಗಣಪನನ್ನು ಅಲಂಕರಿಸಿದ್ದು ತಂಡದಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಕ್ರಿಸ್‌ಗೇಲ್ ಎ.ಬಿ.ಡಿವಿಲಿಯರ್ಸ್ ಅವರ ಭಾವಚಿತ್ರಗಳನ್ನು ಅಳವಡಿಸಿ ಗಮನ ಸೆಳೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.