ADVERTISEMENT

ತುಮಕೂರು: ಮತ್ತೆ ಚಿಗುರಿದ ತೆಂಗು ಪಾರ್ಕ್ ಆಸೆ

ಬಜೆಟ್‌ನಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕರಿಂದ ಮನವಿ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಫೆಬ್ರುವರಿ 2021, 4:54 IST
Last Updated 20 ಫೆಬ್ರುವರಿ 2021, 4:54 IST
ತೆಂಗಿನ ಮರ
ತೆಂಗಿನ ಮರ   

ತುಮಕೂರು: ಜಿಲ್ಲೆಯ ತೆಂಗು ಬೆಳೆ ಅಭಿವೃದ್ಧಿಗೆ ಮಹತ್ವದ ಯೋಜನೆ ಆಗಿರುವ ‘ತೆಂಗುಪಾರ್ಕ್’ ನಿರ್ಮಾಣದ ಆಸೆ ಮತ್ತೆ ಚಿಗುರಿದೆ.

ತೆಂಗಿಗೆ ಸಂಬಂಧಿಸಿದ ಉತ್ಪಾದನೆಗಳ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ತೆಂಗು ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಈ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

2012-13ರಲ್ಲಿ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ತೆಂಗು ಪಾರ್ಕ್ ಯೋಜನೆ ಜಿಲ್ಲೆಯಲ್ಲಿ ಮೊಳಕೆಯೊಡೆದಿತ್ತು. ನಂತರದ ದಿನಗಳಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆ ಮೂಲಕ ತಿಪಟೂರು, ಶಿರಾ ತಾಲ್ಲೂಕಿನ ಮಾನಂಗಿ ಹಾಗೂ ತುರುವೇಕೆರೆ ತಾಲ್ಲೂಕಿನ ಚಿಕ್ಕಪುರದಲ್ಲಿ ತೆಂಗು ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಸಹ ಬಿಡುಗಡೆ ಮಾಡಿತು.

ADVERTISEMENT

ಮೊದಲ ಹಂತದಲ್ಲಿ ಮಾನಂಗಿ ಬಳಿ ಕಟ್ಟಡಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ₹ 1.75 ಕೋಟಿ ನೀಡಲಾಗಿತ್ತು. ಈ ನಡುವೆ 2018ರ ಮಾರ್ಚ್‌ನಲ್ಲಿ ₹ 1.75 ಕೋಟಿಯನ್ನು ಹಾಗೂ ಅದರ ಬಡ್ಡಿಯನ್ನು ಮರಳಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದು ಸೂಚಿಸಿದರು. ಅದರಂತೆ ಹಣ ಸರ್ಕಾರಕ್ಕೆ ಮರಳಿತು.

ಜಿಲ್ಲೆಯ ಮೊದಲ ತೆಂಗುಪಾರ್ಕ್ ಆರಂಭವಾಗುತ್ತದೆ, ಬೆಳೆಗಾರರ ಆರ್ಥಿಕ ಬದುಕಿನಲ್ಲಿ ಒಂದಿಷ್ಟುಸುಧಾರಣೆಯಾಗುತ್ತದೆ ಎನ್ನುವ ಆಶಾವಾದ ಕಮರಿತು. ತಿಪಟೂರು ಹಾಗೂ ತುರುವೇಕೆರೆಯಲ್ಲಿ ಗುರುತಿಸಿದ್ದ ಜಾಗಗಳು ನಾನಾ ಕಾರಣಗಳಿಂದ ಕೈ ಬಿಟ್ಟು ಹೋಗಿದ್ದವು. ಹೀಗೆ ತೆಂಗು ಪಾರ್ಕ್‌ ನಿರ್ಮಾಣವು ಜಿಲ್ಲೆಯಲ್ಲಿ ಜಾರಿಯಾಗಲೇ ಇಲ್ಲ.

ಜಿಲ್ಲೆಯ ಪ್ರಮುಖ ಬೆಳೆ ತೆಂಗು. ತೆಂಗಿನ ಮೌಲ್ಯವರ್ಧನೆಯ ಹಿನ್ನಲೆಯಲ್ಲಿ ಪಾರ್ಕ್‌ ನಿರ್ಮಾಣ ಮಾಡಬೇಕು ಎಂದು ಜಿಲ್ಲೆಯ ರೈತ ಮುಖಂಡರು, ಬೆಳೆಗಾರರು ಹಾಗೂ ತೆಂಗು ಬೆಳೆಗಾರರ ಒಕ್ಕೂಟಗಳು ಈ ಹಿಂದಿನಿಂದಲೂ ಆಗ್ರಹಿಸುತ್ತಿವೆ. ಪಾರ್ಕ್ ನಿರ್ಮಾಣದಿಂದ ನೆರೆ ಹೊರೆಯ ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರಿಗೂ ಅನುಕೂಲವಾಗಲಿದೆ.

ಈಗ ಜಿಲ್ಲೆಯವರೇ ಆದ ಬಿ.ಕೆ.ಮಂಜುನಾಥ್, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಕಾಯಿ ಮತ್ತು ಕೊಬ್ಬರಿ ಸೀಮೆ ಖ್ಯಾತಿಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುಮಕೂರು, ತುರುವೇಕೆರೆಯಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆಂಗು ಪಾರ್ಕ್ ನಿರ್ಮಾಣಕ್ಕೆ ಮತ್ತೆ ಹಸಿರು ನಿಶಾನೆ ತೋರಿ ಹಣ ಬಿಡುಗಡೆ ಮಾಡುವರು ಎನ್ನುವ ಆಶಾವಾದ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.