ADVERTISEMENT

ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಬೆಲೆ ಭಾರೀ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಮೇ 2019, 6:32 IST
Last Updated 21 ಮೇ 2019, 6:32 IST
   

ತೋವಿನಕೆರೆ (ತುಮಕೂರು): ಸತತ ಏಳು ವರ್ಷಗಳ ಕಾಲ ಉತ್ತಮ ಬೆಲೆಗೆ ಮಾರಾಟವಾಗಿದ್ದ ಹುಣಸೆಹಣ್ಣು ಈ ಬಾರಿ ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿದ್ದು, ಬೆಳೆಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

ಹುಣಸೆಹಣ್ಣು ಮಾರುಕಟ್ಟೆ ಆರಂಭವಾಗುವುದು ಜನವರಿಯಲ್ಲಿ. ಆರಂಭದಲ್ಲಿ ಉತ್ತಮ ದರ್ಜೆ ಹುಣಸೆಹಣ್ಣು ಕ್ವಿಂಟಲ್ ಗೆ ₹15 ಸಾವಿರದಿಂದರಿಂದ ₹21 ಸಾವಿರ ರೂಗಳ ಮಾರಾಟವಾಗಿತ್ತು. ನಂತರದ ವಾರದಲ್ಲಿ ಅದೇ ಹುಣಸೆಹಣ್ಣು ಕ್ವಿಂಟಲ್ ಗೆ ₹8500 ರಿಂದ ₹13500ಕ್ಕೆ ಮಾರಾಟವಾಗಿತ್ತು. ಜನವರಿಯಿಂದ ಇಲ್ಲಿ ವರೆಗೆ ಕ್ವಿಂಟಾಲ್‌ ಬೆಲೆಯಲ್ಲಿ ₹9 ಸಾವಿರದಷ್ಟು ಕುಸಿತ ಕಂಡಿದೆ. ಬೆಳೆಗಾರರು ಸಿಕ್ಕ ಬೆಲೆಗೆ ಮಾರಾಟ ಮಾಡುವಂಥ ಪರಿಸ್ಥಿತಿಗೆ ಬಂದಿದ್ದಾರೆ. ಈ ಮೂಲಕ ಕಳೆದ 7 ವರ್ಷಗಳಿಂದ ಉತ್ತಮ ಬೆಳೆಗೆ ಹುಣಸೆಹಣ್ಣು ಮಾರಾಟ ಮಾಡಿದ್ದ ಬೆಳೆಗಾರರು ಈಗ ಚಿಂತಾಕ್ರಾಂತರಾಗಿದ್ದಾರೆ.

ತಮಕೂರು ಜಿಲ್ಲೆಯ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹುಣಸೆಹಣ್ಣಿನ ಇಳುವರಿ ಲಭ್ಯವಾಗುತ್ತದೆ. ಪ್ರತಿ ವರ್ಷ ₹100 ಕೋಟಿಗೂ ಹೆಚ್ಚು ವಹಿವಾಟನ್ನು ಈ ಪ್ರಾಂತ್ಯವೇ ನಡೆಸುತ್ತದೆ. ಈ ವರ್ಷ ಬೆಲೆ ಕುಸಿದಿಂದ ಇಲ್ಲಿನ ಬೆಳೆಗಾರರು ಮತ್ತು ದಲ್ಲಾಳಿಗಳು ತತ್ತರಿಸಿದ್ದಾರೆ.

ADVERTISEMENT

ಹುಣಸೆಹಣ್ಣು ಇಳುವರಿ ಪಡೆಯುವುದೂ ದೊಡ್ಡ ಪ್ರಕ್ರಿಯೆ

ಸ್ಥಳೀಯ ಹುಣಸೆಬೆಳೆಗಾರರು ಇಳುವರಿಯನ್ನು ತುಮಕೂರು, ಆಂಧ್ರದ ಹಿಂದೂಪುರದ ಕೃಷಿ ಉತ್ಪನ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರ ಮಾರುಕಟ್ಟೆಯಿರುತ್ತದೆ.

ಹುಣಸೆಹಣ್ಣಿನ ಇಳುವರಿ ಪಡೆಯುವ ಪ್ರಕ್ರಿಯೆಯೇನೂ ಸಣ್ಣದಲ್ಲ. ಅದರ ಹಿಂದೆಯೂ ದೊಡ್ಡ ಕತೆಯೇ ಇದೆ.

ತೋವಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿವಿಡಿ ಪಾಳ್ಯ, ಸಿ.ಎಸ್.ಪಾಳ್ಯ, ದೇವರಹಳ್ಳಿ, ವೆಂಕಟರಮಣ್ಣನಹಳ್ಳಿ, ಚಿಕ್ಕಣ್ಣನಹಳ್ಳಿಗಳ ಜನರು ತಾವು ಬೆಳೆದ ಸುತ್ತಮುತ್ತಲಿನ ಹಳ್ಳಿಗಳ ಹಾಗೂ ಜಿಲ್ಲೆಯ ಬೇರೆ ಊರುಗಳಿಂದ ಹುಣಸೆಹಣ್ಣನ್ನು ತಂದು ಶುಚಿಗೊಳಿಸಿ ಮಾರಾಟ ಮಾಡುವ ವೃತ್ತಿಯನ್ನು ಹಲವು ದಶಕಗಳ ಕಾಲ ಮಾಡಿಕೊಂಡು ಬಂದಿದ್ದಾರೆ.

ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ರೈತರು ನೂರಾರು ಹುಣಸೆ ಮರಗಳನ್ನು ಬೆಳೆದಿದ್ದಾರೆ. ಕೆಲವರು ಸಸಿಗಳನ್ನು ಹಾಕಿದ ನಾಲ್ಕು ವರ್ಷ ಮಾತ್ರ ಬೇಸಿಗೆಯಲ್ಲಿ ನೀರು ಕೊಟ್ಟು, ನಂತರ ಮಳೆ ಅಶ್ರಯದಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ತೋವಿನಕೆರೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹತ್ತು ಸಾವಿರ ಮರಗಳಿದ್ದು, ಮೂರು ವರ್ಷಗಳಿಂದ ಸಾವಿರಾರು ಹುಣಸೆ ಸಸಿಗಳನ್ನು ನಾಟಿ ಮಾಡಿದ್ದಾರೆ.

ಜನವರಿಯಿಂದ ಅಗಸ್ಟ್‌ವರೆಗೆ ಏಳು ತಿಂಗಳ ಕಾಲ ಇಲ್ಲಿನ ಮಹಿಳೆಯರಿಗೆ ಹುಣಸೆಹಣ್ಣು ಶುಚಿ ಮಾಡುವ ಕೆಲಸವಿರುತ್ತದೆ. ಪ್ರತಿ ಕೆ.ಜಿ ಹುಣಸೆ ಹಣ್ಣನ್ನು ಸಿದ್ಧ ಮಾಡಿಕೊಡಲು 20 ರೂ.ಗಳನ್ನು ಪಡೆಯುತ್ತಾರೆ. ಪ್ರತಿದಿನ ಒಬ್ಬ ಮಹಿಳೆ 10 ಕೇಜಿ ಹುಣಸೆ ಹಣ್ಣನ್ನು ಸಿದ್ಧಪಡಿಸುತ್ತಾರೆ.

ಡಿಸೆಂಬರ್, ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳವರೆಗೂ ಮರ ಹತ್ತಿ ಹುಣಸೆ ಬಡಿಯುವರೆಗೆ ಅತಿ ಹೆಚ್ಚು ಬೇಡಿಕೆ ಇರುತ್ತದೆ. ದಿನಕ್ಕೆ ಊಟ, ತಿಂಡಿ ಇತರೆ ಖರ್ಚುಗಳಿಗೆ ಹಣ ನೀಡಿದರೂ ಹುಣಸೆ ಬಡಿಯುವವರು ಸಿಗುವುದಿಲ್ಲ.

ಮರದ ಕೆಳಗೆ ಬಿದ್ದ ಹಣ್ಣನ್ನು ಅಯ್ದುಕೊಳ್ಳುವುದು, ಮನೆಗೆ ತರುವುದು, ಮೇಲಿನ ಸಿಪ್ಪೆಯನ್ನು ಬಿಸಿಲಿಗೆ ಹಾಕಿ ಬಡಿಯುವುದು, ಹಣ್ಣನ್ನು ಕುಟ್ಟಿ ಶುಚಿಗೊಳಿಸಿ, ಜೋಡಿಸ ಬೇಕಾಗುತ್ತದೆ. ಈ ರೀತಿ ಹಣ್ಣನ್ನು ಸಿದ್ಧ ಮಾಡುವ ಸಮಯದಲ್ಲಿ ಕೃಷಿ ಕೂಲಿಕಾರರಿಗೆ ಕೈತುಂಬಾ ಕೆಲಸವಿರುತ್ತದೆ.

ಬೆಳೆಗಾರರಿಗೆ ಹುಣಸೆ ಹಣ್ಣನ್ನು ಸಿದ್ಧ ಮಾಡಲು ನಾಲ್ಕು ಸಾವಿರ ಖರ್ಚು ಬರುತ್ತದೆ. ದಲ್ಲಾಳಿಗಳು ಮರದಲ್ಲಿನ ಇಳುವರಿ ನೋಡಿಕೊಂಡು ಹುಣಸೆ ಹಣ್ಣಿನ ಬೆಳೆಯನ್ನು ಕ್ವಿಂಟಲ್‌ಗೆ ಐದು ಸಾವಿರದವರೆಗೂ ಖರೀದಿ ಮಾಡುತ್ತಾರೆ.ಆದರೆ, ಸದ್ಯ ಹಾಕಿದ ಬಂಡವಾಳಕ್ಕಿಂತಲೂ ಕಡಿಮೆ ಹಣಕ್ಕೆ ಹುಣಸೆಹಣ್ಣು ಮಾರುವ ಪರಿಸ್ಥಿತಿ ಎದುರಾಗಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.