ADVERTISEMENT

ತಿಪಟೂರು | ಟ್ರಾಫಿಕ್‌ ಸಿಗ್ನಲ್‌ ದೋಷ: ಸವಾರರಿಗೆ ಕಿರಿಕಿರಿ

ಪ್ರಮುಖ ವೃತ್ತಗಳಲ್ಲಿ ಸಿಬ್ಬಂದಿ ನಿಯೋಜನೆಗೆ ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:53 IST
Last Updated 3 ಸೆಪ್ಟೆಂಬರ್ 2025, 4:53 IST
<div class="paragraphs"><p>ಏಕಕಾಲದಲ್ಲಿ ಎಲ್ಲ ಸಂಚಾರಿ ದೀಪಗಳು ಗೋಚರಿಸುತ್ತಿರವುದು</p></div>

ಏಕಕಾಲದಲ್ಲಿ ಎಲ್ಲ ಸಂಚಾರಿ ದೀಪಗಳು ಗೋಚರಿಸುತ್ತಿರವುದು

   

ತಿಪಟೂರು: ನಗರದ ಅಂಬೇಡ್ಕರ್ ವೃತ್ತದ ಬಳಿ ಅಳವಡಿಸಲಾಗಿರುವ ಸಂಚಾರ ದೀಪಗಳು ಕಳೆದ ಕೆಲ ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸದೆ ಪ್ರತಿದಿನ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳಿಗೆ ಗೊಂದಲ ಸೃಷ್ಟಿಸುವ ಜತೆಗೆ ಅವ್ಯವಸ್ಥೆ ಮತ್ತು ಅಪಘಾತದ ಭೀತಿಗೆ ಕಾರಣವಾಗಿದೆ.

ನಗರದ ಮಾರನಗೆರೆಯಿಂದ ಹಾಲ್ಕುರಿಕೆ ರಸ್ತೆ, ನಗರದಿಂದ ಒಳಗೆ ಹಾಗೂ ಹೊರಗೆ ಹೋಗುವ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಸಂಚಾರ ದೀಪದ ವ್ಯವಸ್ಥೆಯೇ ಇಲ್ಲವಾಗಿದೆ. 

ADVERTISEMENT

‌ಕೆಲವೊಮ್ಮೆ ಕೆಂಪು ದೀಪ ಬಹಳ ಹೊತ್ತು ಹೊಳೆಯುತ್ತಿದ್ದು, ವಾಹನಗಳು ಅನಗತ್ಯವಾಗಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮತ್ತೊಮ್ಮೆ ಯಾವುದೇ ಸೂಚನೆ ನೀಡದೆ ಹಸಿರು ದೀಪ ಹೊಳೆಯುವುದರಿಂದ ಅಡ್ಡ ರಸ್ತೆಯಿಂದ ಬರುತ್ತಿರುವ ವಾಹನ ಸವಾರರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ಅಪಘಾತ ಸಂಭವಿಸುತ್ತಿದ್ದು ಸವಾರರು ಒಬ್ಬರನ್ನು ಒಬ್ಬರು ನಿಂದಿಸಿಕೊಂಡು ಸಂಚಾರ ಮಾಡಬೇಕಾಗಿದೆ.

ಯಾವುದೇ ವೃತ್ತದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡಲು ಹಾಗೂ ಸರಿಯಾದ ಸಂಚಾರ ದೀಪಗಳ ವ್ಯವಸ್ಥೆ ಸರಿಪಡಿಸಲು ಯಾವ ಪೊಲೀಸ್ ಸಿಬ್ಬಂದಿ‌ ನಿಯೋಜನೆ ಮಾಡದೆ ಇರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಸಾರ್ವಜನಿಕರು ಹಲವು ಬಾರಿ ನಗರಸಭೆಗೆ ದೂರು ಸಲ್ಲಿಸಿದರೂ ನಗರಸಭೆ ಅಧಿಕಾರಿಗಳು ‘ಈ ಕಾರ್ಯ ಪೊಲೀಸ್ ಇಲಾಖೆ ಹೊಣೆ ಎಂದು ಹೇಳಿಕೊಂಡರೆ, ಪೊಲೀಸ್ ಇಲಾಖೆ ಇದು ನಗರಸಭೆ ತಾಂತ್ರಿಕ ವಿಭಾಗದ ಕೆಲಸ ಎಂದು ಹೊಣೆ ತಪ್ಪಿಸಿಕೊಂಡಿದ್ದಾರೆ. ಈ ರೀತಿಯಾಗಿ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕಿಕೊಳ್ಳುವ ಆಟದಲ್ಲಿ ಸಮಸ್ಯೆ ಬಗೆಹರಿಯದೆ ಜನರಿಗೆ ತೊಂದರೆ ಮಾತ್ರ ಹೆಚ್ಚಾಗಿದೆ’.

ಸಂಚಾರ ದೀಪಗಳ ಅವ್ಯವಸ್ಥೆಯಿಂದ ಎಲ್ಲ ಕಡೆಗಳಿಂದ ಏಕಾಏಕಿ ವಾಹನಗಳ ಸಂಚಾರ

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ಮಕ್ಕಳು, ಉದ್ಯೋಗಿಗಳು ಹಾಗೂ ವೃದ್ಧರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಅವ್ಯವಸ್ಥೆ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ‘ಸಂಚಾರ ದೀಪ ಅಳವಡಿಸಿದಾಗ ಸಂಚಾರಕ್ಕೆ ಸ್ವಲ್ಪ ನಿಯಂತ್ರಣ ಸಿಗುತ್ತದೆ ಎಂದು ಭಾವಿಸಿದ್ದೇವೆ. ಆದರೆ, ಈಗಿನ ಪರಿಸ್ಥಿತಿ ಹಳೆಯದಕ್ಕಿಂತಲೂ ಗೊಂದಲ ಹೆಚ್ಚಿಸುವಂತಾಗಿದೆ’ ಎಂದು ಸ್ಥಳೀಯರು ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಜನರ ಸುರಕ್ಷತೆ ಹಾಗೂ ಸಂಚಾರದ ಶಿಸ್ತು ಕಾಯ್ದುಕೊಳ್ಳಲು ಸಂಚಾರ ದೀಪ ತುರ್ತಾಗಿ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಯಾವುದೇ ಸಮಯದಲ್ಲಿದಾರೂ ತುಂಬಾ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ತಿಪಟೂರಿನ ಅಭಿವೃದ್ಧಿ ದೃಷ್ಟಿಯಲ್ಲಿ ಅಸಮರ್ಪಕ ಎನಿಸುತ್ತದೆ
ರವಿಕುಮಾರ್, ವಾಹನ ಸವಾರ
ಸಿಗ್ನಲ್ ಹಾಕಿದಾಗ ಶಿಸ್ತಿನಿಂದ ಸಂಚರಿಸಬಹುದು. ಈಗಿನ ಪರಿಸ್ಥಿತಿಯಲ್ಲಿ ದೀಪವೇ ಬೇಕಾದಂತೆ ಆನ್–ಆಫ್ ಆಗುತ್ತಿದೆ. ಇದು ನಿಯಂತ್ರಣಕ್ಕಿಂತಲೂ ಗೊಂದಲ ಹೆಚ್ಚಿಸುತ್ತಿದೆ
ಷಣ್ಮುಖ, ಪಾದಚಾರಿ
ರಸ್ತೆ ದಾಟುವುದೇ ಬಹಳ ಕಷ್ಟ. ಸಿಗ್ನಲ್ ನೋಡಿಕೊಂಡು ದಾಟಲು ಯತ್ನಿಸಿದರೆ ಏಕಾಏಕಿ ಬಣ್ಣ ಬದಲಾಗುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ಅಪಾಯಕಾರಿಯಾಗಿದೆ
ಅರ್ಜುನ್, ಸ್ಥಳೀಯ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.