ADVERTISEMENT

ತುಮಕೂರು | 3 ತಿಂಗಳಲ್ಲಿ 45 ವರದಕ್ಷಿಣೆ ಕಿರುಕುಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:13 IST
Last Updated 23 ಆಗಸ್ಟ್ 2025, 6:13 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯಲ್ಲಿ ವರ‌ದಕ್ಷಿಣೆ ಕಿರುಕುಳ ಪ್ರಕರಣ ಹೆಚ್ಚುತ್ತಿದ್ದು, ಇದೇ ತಿಂಗಳ ಹತ್ತು ದಿನಗಳ ಅಂತರದಲ್ಲಿ ಇಬ್ಬರು ಗೃಹಿಣಿಯರು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಕಿ–ಅಂಶದ ಪ್ರಕಾರ ಈ ವರ್ಷದ ಏ. 1ರಿಂದ ಜೂನ್‌ 30ರ ವರೆಗೆ ಒಟ್ಟು 45 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದರಲ್ಲಿ ಎಂಟು ಪ್ರಕರಣ ವಿಲೇವಾರಿಯಾಗಿದ್ದು, 37 ಬಾಕಿ ಉಳಿದಿವೆ. 2025ರ ಜನವರಿಯಿಂದ ಮಾರ್ಚ್‌ ಅಂತ್ಯಕ್ಕೆ 14 ಪ್ರಕರಣಗಳು ವರದಿಯಾಗಿದ್ದವು. ನಂತರದ ಮೂರೇ ತಿಂಗಳಲ್ಲಿ ಮೂರು ಪಟ್ಟು ಜಾಸ್ತಿಯಾಗಿವೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ರೈಮಾಸಿಕ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಈ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಜ. 1ರಿಂದ ಜೂನ್‌ 30ರ ವರೆಗೆ 54 ಬಾಲ್ಯ ವಿವಾಹ ತಡೆಯಲಾಗಿದೆ. ಬಾಲ್ಯ ವಿವಾಹದ ಬಗ್ಗೆ ಇಲಾಖೆಗೆ ಒಟ್ಟು 64 ದೂರುಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 7 ಪ್ರಕರಣದಲ್ಲಿ ವಿವಾಹ ಜರುಗಿದೆ. ಇದರ ನಂತರ ಅಧಿಕಾರಿಗಳು ಸಂಬಂಧಪಟ್ಟ ಠಾಣೆಗಳಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

126 ದೌರ್ಜನ್ಯ ಪ್ರಕರಣ: ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿವೆ. ಈ ವರ್ಷದ ಪ್ರಾರಂಭದ ಮೂರು ತಿಂಗಳಲ್ಲಿ 57 ಮಂದಿ ದೂರು ಸಲ್ಲಿಸಿದ್ದರು. ನಂತರದ ಮೂರು ತಿಂಗಳಲ್ಲಿ 66 ಮಹಿಳೆಯರು ಇಲಾಖೆಯ ಮೊರೆ ಹೋಗಿದ್ದಾರೆ. ಆರು ತಿಂಗಳಲ್ಲಿ ಒಟ್ಟು 123 ಪ್ರಕರಣಗಳು ದಾಖಲಾಗಿವೆ.

‘71 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಆಪ್ತ ಸಮಾಲೋಚನೆ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ’ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದ್ದಾರೆ.

24 ಗಂಟೆ ಸಹಾಯವಾಣಿ ಮಹಿಳಾ ದೌರ್ಜನ್ಯದ ಸಮಯದಲ್ಲಿ ನೆರವಾಗುವ ಸಲುವಾಗಿ ಆರಂಭಿಸಿರುವ ಸಹಾಯವಾಣಿ ಸಂಖ್ಯೆ 181 ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪ್ರದೇಶದಲ್ಲಿ ಮಹಿಳೆಯರ ಸಮಸ್ಯೆಗಳು ಹೆಚ್ಚಾಗಿವೆ. ದೂರು ಸ್ವೀಕೃತವಾದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಬೇಕು. ಸಹಾಯವಾಣಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸ್ವೀಕಾರ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ದಾಖಲಾದ ಮಹಿಳೆಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿದ್ದರಾಮಣ್ಣ ಇಲಾಖೆಯ ದಿನೇಶ್ ಕೆ.ಎಚ್‌.ಅಂಬಿಕಾ ಪವಿತ್ರಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.