ADVERTISEMENT

ಪೇಜಾವರ ಶ್ರೀ ಆರೋಗ್ಯ ವಿಚಾರಿಸಿದ ಉಮಾಭಾರತಿ

ಕೆಎಂಸಿ ಆಸ್ಪತ್ರೆಯಲ್ಲಿ 4 ದಿನಗಳಿಂದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:36 IST
Last Updated 23 ಡಿಸೆಂಬರ್ 2019, 15:36 IST
ಕೇಂದ್ರ ಸಚಿವೆ ಉಮಾ ಭಾರತಿ ಸೋಮವಾರ ಕೆಎಂಸಿ ಆಸ್ಪತ್ರೆಗೆ ಭೇಟಿನೀಡಿ ಪೇಜಾವರ ಶ್ರೀಗಳ ಆರೋಗ್ಯದ ಮಾಹಿತಿ ಪಡೆದರು.
ಕೇಂದ್ರ ಸಚಿವೆ ಉಮಾ ಭಾರತಿ ಸೋಮವಾರ ಕೆಎಂಸಿ ಆಸ್ಪತ್ರೆಗೆ ಭೇಟಿನೀಡಿ ಪೇಜಾವರ ಶ್ರೀಗಳ ಆರೋಗ್ಯದ ಮಾಹಿತಿ ಪಡೆದರು.   

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ನಾಲ್ಕು ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮಣಿಪಾಲದ ತಜ್ಞ ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದು, ನಿರೀಕ್ಷಿತ ಫಲ ಸಿಕ್ಕಿಲ್ಲ. ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೊಂದೆಡೆ ಪೇಜಾವರ ಶ್ರೀಗಳ ಅನುಯಾಯಿ ಹಾಗೂ ಕೇಂದ್ರ ಸಚಿವೆಯೂ ಆಗಿರುವ ಉಮಾ ಭಾರತಿ ಸೋಮವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ADVERTISEMENT

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸ್ವಾಮೀಜಿ ಅವರು ಗುಣಮುಖರಾಗಬೇಕು ಎಂದು ವೈದ್ಯರ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ಈಗ ದೆಹಲಿಯ ಏಮ್ಸ್‌ನ ತಜ್ಞ ವೈದ್ಯರ ನೆರವೂ ಸಿಗುತ್ತಿದೆ. ಶ್ರೀಗಳು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು.

ಗೋಲ್ವಾಲ್ಕರ್ ವಿಶ್ವ ಹಿಂದೂ ಪರಿಷತ್‌ ಸ್ಥಾಪನೆ ಮಾಡಿದಾಗ ಪೇಜಾವರ ಶ್ರೀಗಳು ಸಂಘಟನೆಯ ನೇತೃತ್ವ ವಹಿಸಿದ್ದರು. ಸಮಾಜ ಸುಧಾರಕರಕಾಗಿರುವ ಶ್ರೀಗಳಿಗೆ ವಿಶ್ವದಾದ್ಯಂತ ಭಕ್ತರು ಅಭಿಮಾನಿಗಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ರಾಷ್ಟ್ರದ ಗಮನ ಸೆಳೆದಿದ್ದಾರೆ. ಇಂತಹ ಸಂತರ ಅವಶ್ಯಕತೆ ಸಮಾಜಕ್ಕೆ ಅಗತ್ಯವಿದೆ ಎಂದರು.

ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಆಸ್ಪತ್ರೆಗೆ ಭೇಟಿನೀಡಿದ ಬಳಿಕ ಮಾತನಾಡಿ, ಶ್ರೀಗಳಿಗೆ ಎಕ್ಸ್‌ರೇ ಹಾಗೂಸ್ಕ್ಯಾನಿಂಗ್ ಮಾಡಲಾಗಿದ್ದು, ರಾತ್ರಿ ಎಂಆರ್‌ಐ ಸ್ಕ್ಯಾನ್ ಮಾಡಲಿದ್ದಾರೆ. ವರದಿ ಬಂದ ಬಳಿಕ ವೈದ್ಯರು ಚರ್ಚಿಸಿ ಮುಂದೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಶ್ರೀಗಳು ಚಿಕಿತ್ಸೆಗೆ ಸ್ವಲ್ಪ ಸ್ಪಂದಿಸುತ್ತಿದ್ದಾರೆ.ಶೀಘ್ರ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ವೈದ್ಯರು ತಿಳಿಸಿದರು.

ಸೋಮವಾರವೂ ಗಣ್ಯರು, ಮಠಾಧೀಶರು ಆಸ್ಪತ್ರೆಗೆ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಉಡುಪಿಯ ಬಿಷಪ್‌ ಜೆರಾಲ್ಡ್‌ ಐಸಾಕ್ ಲೊಬೊ, ಕಾಂಗ್ರೆಸ್‌ ಮುಖಂಡರಾದ ಎಂ.ಬಿ.ಪಾಟೀಲ್‌, ಜಮೀರ್ ಅಹಮ್ಮದ್‌, ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ, ವಿದ್ಯಾಭೂಷಣರು ಭೇಟಿನೀಡಿದ್ದರು.

ನಾಡಿನ ಹಲವೆಡೆ ಭಾನುವಾರವೂ ಶ್ರೀಗಳ ಚೇತರಿಕೆಗೆ ಪೂಜೆ, ಪ್ರಾರ್ಥನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.