ADVERTISEMENT

ಕಾರವಾರ | ‘ಒತ್ತಡ’ ಸಹಿಸುವ ಹೆದ್ದಾರಿ ಸೇತುವೆ: ಮರುನಿರ್ಮಾಣಕ್ಕೆ ಸಿದ್ಧತೆ

ಕಾಳಿ, ಶರಾವತಿ ಸೇತುವೆ ಮೇಲೆ ದ್ವಿಮುಖ ಸಂಚಾರ ಅನಿವಾರ್ಯ

ಗಣಪತಿ ಹೆಗಡೆ
Published 6 ಅಕ್ಟೋಬರ್ 2025, 7:18 IST
Last Updated 6 ಅಕ್ಟೋಬರ್ 2025, 7:18 IST
<div class="paragraphs"><p>ಕಾರವಾರದ ಕಾಳಿ ನದಿಯ ಏಕೈಕ ಸೇತುವೆ ಮೇಲೆ ದ್ವಿಮುಖವಾಗಿ ವಾಹನಗಳು ಸಂಚರಿಸಿದವು&nbsp; </p></div>

ಕಾರವಾರದ ಕಾಳಿ ನದಿಯ ಏಕೈಕ ಸೇತುವೆ ಮೇಲೆ ದ್ವಿಮುಖವಾಗಿ ವಾಹನಗಳು ಸಂಚರಿಸಿದವು 

   

-ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್

ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಮುರಿದು ಬಿದ್ದ ಸೇತುವೆಯ ಮರುನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಇದೇ ಹೆದ್ದಾರಿಯಲ್ಲಿನ ಶಿಥಿಲ ಸೇತುವೆಗಳ ನಿರ್ಮಾಣ ಯಾವಾಗ ಆರಂಭಗೊಳ್ಳಬಹುದು ಎಂಬ ಪ್ರಶ್ನೆಯೂ ಜನರಲ್ಲಿದೆ.

ADVERTISEMENT

ಈ ಹೆದ್ದಾರಿಯಲ್ಲಿ ಹೊನ್ನಾವರದ ಬಳಿ ಶರಾವತಿ ನದಿಗೆ ನಿರ್ಮಿಸಿದ ಸುಮಾರು 900 ಮೀಟರ್ ಉದ್ದದ ಹಳೆಯ ಸೇತುವೆ, ಕುಮಟಾ ತಾಲ್ಲೂಕಿನ ಹೊನ್ಮಾಂವ್, ಮಾನೀರ ಸಮೀಪದ ಸೇತುವೆ, ಭಟ್ಕಳದ ವೆಂಕಟಾಪುರ ಸೇತುವೆಗಳು ಮರು ನಿರ್ಮಾಣಗೊಳ್ಳಬೇಕಿವೆ. ಸದ್ಯ, ಇಲ್ಲಿರುವ ಒಂದೇ ಸೇತುವೆಗಳ ಮೇಲೆ ವಾಹನಗಳು ದ್ವಿಮುಖ ಸಂಚಾರ ನಡೆಸುತ್ತಿವೆ. ಈ ಸೇತುವೆಗಳ ಮೇಲಿನ ಒತ್ತಡದ ಹೆಚ್ಚಿದೆ.

ಕಳೆದ ವರ್ಷ ಕಾಳಿ ನದಿಯ ಹಳೆಯ ಸೇತುವೆ ಕುಸಿದು ಬಿದ್ದಿತ್ತು. ಇದಕ್ಕೂ ಕೆಲ ತಿಂಗಳ ಮುಂಚೆ ಅಂಕೋಲಾದ ಹಟ್ಟಿಕೇರಿ ಸಮೀಪ ಪಾಂಡವರ ಹೊಳೆಯ ಸೇತುವೆ ಮುರಿದು ಬಿದ್ದಿತ್ತು. ಸದ್ಯ ಈ ಸೇತುವೆ ಮರುನಿರ್ಮಾಣಗೊಂಡಿದೆ. ಕಾಳಿ ನದಿಯ ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ಭರದಿಂದ ಸಾಗಿದೆ.

‘ಹೆದ್ದಾರಿಗೆ ಹೊಸ ಸೇತುವೆ ನಿರ್ಮಿಸಿದ ಬಳಿಕ ಹಳೆಯ ಸೇತುವೆಗಳ ಸ್ಥಿತಿಗತಿ ಅಧ್ಯಯನ ನಡೆಸಿ, ಅವು ಬಳಕೆಗೆ ಯೋಗ್ಯವಲ್ಲ ಎಂದಾಗಿದ್ದರೆ ಅವುಗಳನ್ನು ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ಪಡೆದ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗಳು ಈ ಕೆಲಸ ಮಾಡದೆ ನಿರ್ಲಕ್ಷ ತೋರಿದ್ದವು. ಅದರ ಪರಿಣಾಮದಿಂದಲೇ ಕಾಳಿ ನದಿಯ ಸೇತುವೆ, ಹಟ್ಟಿಕೇರಿ ಸೇತುವೆ ಕುಸಿದು ಬಿತ್ತು’ ಎನ್ನುತ್ತಾರೆ ಕರವೇ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ನರೇಂದ್ರ ತಳೇಕರ.

‘ಕುಸಿದು ಬಿದ್ದ ಕಾಳಿ ನದಿಯ ಸೇತುವೆ ಇದ್ದ ಜಾಗದಲ್ಲಿ ಹೊಸ ಸೇತುವೆ ನಿರ್ಮಿಸುವ ಕೆಲಸಕ್ಕೆ ಸಿದ್ಧತೆ ನಡೆದಿದೆ. ಸೇತುವೆ ನಿರ್ಮಾಣಕ್ಕೆ ಅನಗತ್ಯ ವಿಳಂಬ ಮಾಡಬಾರದು. ಸಾಧ್ಯವಾದಷ್ಟು ಬೇಗನೆ ಕಾಮಗಾರಿ ಆರಂಭಿಸಬೇಕು. ಸದ್ಯ ಒಂದೇ ಸೇತುವೆ ಮೇಲೆ ದ್ವಿಮುಖ ವಾಹನ ಸಂಚಾರ ನಡೆದಿದ್ದು, ಭಾರದ ಒತ್ತಡಕ್ಕೆ ಹೊಸ ಸೇತುವೆಗೂ ಧಕ್ಕೆ ಬರಬಹುದು’ ಎಂದು ಕೋಡಿಬಾಗದ ಸದಾನಂದ ಮಾಂಜ್ರೇಕರ ಆತಂಕ ವ್ಯಕ್ತಪಡಿಸಿದರು.

‘665 ಮೀಟರ್ ಉದ್ದದ ಕೇಬಲ್ ಆಧಾರವಾಗಿಸಿಕೊಂಡು ನಿಲ್ಲಬಹುದಾದ ಉಕ್ಕಿನ ಕಮಾನಿನ ಸೇತುವೆ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಸೇತುವೆಗೆ ಕಂಬ ನಿರ್ಮಾಣಕ್ಕೆ ಯೋಗ್ಯ ಸ್ಥಳ ಗುರುತಿಗೆ ಪೈಲಿಂಗ್ ಪ್ರಕ್ರಿಯೆ ಒಂದೆರಡು ದಿನದೊಳಗೆ ಆರಂಭಗೊಳ್ಳಲಿದೆ. ಮುಂದಿನ ಎರಡು ವರ್ಷದೊಳಗೆ ಸೇತುವೆ ಕೆಲಸ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದು, ₹120 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಿದ್ದೇವೆ’ ಎಂದು ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಮುಖ್ಯ ಯೋಜನಾ ವ್ಯವಸ್ಥಾಪಕ ಮೋಹನದಾಸ್ ತಿಳಿಸಿದರು.

‘ವೆಂಕಟಾಪುರದ ಹಳೆಯ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೊಸ ಸೇತುವೆಯ ಮೇಲೆ ದ್ವಿಮುಖ ವಾಹನ ಸಂಚಾರ ನಡೆಯುತ್ತಿದ್ದು, ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಹಳೆಯ ಸೇತುವೆ ದುರಸ್ತಿ ಮಾಡಲಾಗುತ್ತೆಯೋ ಅಥವಾ ಅದನ್ನು ಕೆಡವಿ ಹೊಸ ಸೇತುವೆ ನಿರ್ಮಿಸುತ್ತಾರೋ ಎಂಬ ಗೊಂದಲಕ್ಕೆ ಅಧಿಕಾರಿಗಳು ಉತ್ತರಿಸುತ್ತಿಲ್ಲ’ ಎಂದು ಭಟ್ಕಳದ ಶ್ರೀನಿವಾಸ ನಾಯ್ಕ ದೂರಿದರು.

ಸೇತುವೆಗೆ ಸಿಗದ ಅರಣ್ಯ ಅನುಮತಿ

‘ಕುಮಟಾ ತಾಲ್ಲೂಕಿನ ಮಾನೀರ ಹೊನ್ಮಾಂವ್ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದ್ದು ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದುಕೊಂಡಿದೆ. ಕುಮಟಾದಲ್ಲಿ ಬೈಪಾಸ್ ಪ್ರಸ್ತಾವ ಇದ್ದ ಕಾರಣಕ್ಕೆ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಜೊತೆ ಮಾಡಿಕೊಂಡ ಒಪ್ಪಂದದಲ್ಲಿ ಈ ಸೇತುವೆಯ ಪ್ರಸ್ತಾವ ಇರಲಿಲ್ಲ. ಸೇತುವೆ ನಿರ್ಮಿಸಬೇಕಿರುವ ಸ್ಥಳದಲ್ಲಿ ಕಾಂಡ್ಲಾ ವನಗಳಿದ್ದು ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ಇನ್ನೂ ಸಿಕ್ಕಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.

ಸೇತುವೆ ನಿರ್ಮಿಸಲು ಬಂದ ಐದನೇ ಕಂಪನಿ

41 ವರ್ಷದಷ್ಟು ಹಳೆಯ ಕಾಳಿ ನದಿಯ ಸೇತುವೆ ನೆಲಕ್ಕುರುಳಿ ಒಂದು ವರ್ಷ ಕಳೆದ ನಂತರ ಹೊಸ ಸೇತುವೆ ನಿರ್ಮಿಸಲು ಸಿದ್ಧತೆ ನಡೆದಿದೆ. ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಇದರ ಜವಾಬ್ದಾರಿ ಹೊತ್ತಿದ್ದರೂ ಅದು ಪೊದ್ದಾರ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ಉಪಗುತ್ತಿಗೆ ನೀಡಿದೆ. ಕಾಳಿ ನದಿಗೆ ಸೇತುವೆ ನಿರ್ಮಿಸುತ್ತಿರುವ ಐದನೇ ಕಂಪನಿ ಇದಾಗಿದೆ. ಈಚೆಗಷ್ಟೆ ಇದೇ ಕಂಪನಿ ಕೇರಳದಲ್ಲಿ 1 ಕಿ.ಮೀ ಉದ್ದದ ಉಕ್ಕಿನ ಕಮಾನಿನ ಸೇತುವೆ ನಿರ್ಮಿಸಿದೆ. 1983ರಲ್ಲಿ ಕಾಳಿ ನದಿಗೆ ಸೇತುವೆ ನಿರ್ಮಿಸುವ ಕೆಲಸವನ್ನು ಗ್ಯಾಮನ್ ಇಂಡಿಯಾ ಲಿಮಿಟೆಡ್ ಕಂಪನಿ ಪೂರ್ಣಗೊಳಿಸಿತ್ತು. ಕಂಪನಿಗೆ ಬರೋಬ್ಬರಿ 8 ವರ್ಷ ತಗುಲಿತ್ತು. 1965 ರಲ್ಲಿಯೇ ಕಾಳಿ ನದಿಗೆ ಸೇತುವೆ ಕಟ್ಟುವ ಕೆಲಸ ಆರಂಭಗೊಂಡಿತ್ತು. ಗ್ಯಾನನ್ ಡಂಕರ್ಲಿ ಆ್ಯಂಡ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿತ್ತು. ಅಡಿಪಾಯದ ಕೆಲಸವನ್ನು ಪ್ರಾರಂಭಿಸಿದಾಗ ಅದು ದಿವಾಳಿಯಾಯಿತು. ನಾಲ್ಕು ವರ್ಷದ ಬಳಿಕ ಉಡನಿ ಎಂಜಿನಿಯರಿಂಗ್ ಕಂಪನಿ ಟೆಂಡರ್ ಪಡೆದು ಕೆಲಸ ಆರಂಭಿಸುವ ವೇಳೆಗೆ ಅದರ ಪಾಲುದಾರ ಮಾಲೀಕರು ನಿಧನರಾದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನೀರ ಹೊನ್ಮಾವ್ ಕಾಳಿ ಸೇತುವೆ ಕಾಮಗಾರಿಗೆ ತ್ವರಿತ ಮಂಜೂರಾತಿ ಸಿಕ್ಕಿದೆ. ಉಳಿದ ಸೇತುವೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರ ಭೂಸ್ವಾಧೀನ ಸೇರಿದಂತೆ ಅಗತ್ಯ ಪ್ರಕ್ರಿಯೆಗೆ ಸಹಕಾರ ನೀಡಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಶರಾವತಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ₹120 ಕೋಟಿ ವೆಚ್ಚದ ಡಿಪಿಆರ್ ಸಲ್ಲಿಕೆಯಾಗಿದೆ
-ಕೆ.ಶಿವಕುಮಾರ್, ಎನ್‌ಎಚ್‌ಎಐ ಯೋಜನಾ ನಿರ್ದೇಶಕ
ಕಾಳಿನದಿಗೆ ಹೊಸ ಸೇತುವೆ ಸಾಧ್ಯವಾದಷ್ಟು ಬೇಗನೆ ನಿರ್ಮಾಣಗೊಳ್ಳಬೇಕು. ಒಂದೇ ಸೇತುವೆಯ ಮೇಲೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ.
-ರಾಜೇಂದ್ರ ಪೆಡ್ನೇಕರ್, ಕೋಡಿಬಾಗ ನಿವಾಸಿ
ಕಾಳಿ ನದಿಯ ಸೇತುವೆ ಕಾಮಗಾರಿಯ ಪೈಲಿಂಗ್ ಪ್ರಕ್ರಿಯೆಗೆ ಸಿದ್ಧತೆಗಳು ನಡೆದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.