ADVERTISEMENT

ಅಣಶಿ: 12 ಕಿ.ಮೀ ದೂರದಲ್ಲಿ ನೆಟ್‌ವರ್ಕ್!

ಗ್ರಾ.ಪಂ ವ್ಯಾಪ್ತಿಯ ಸಾವಂತ್ ಮಾತ್ಕರ್ಣಿ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ

ಜ್ಞಾನೇಶ್ವರ ಜಿ.ದೇಸಾಯಿ
Published 26 ಏಪ್ರಿಲ್ 2022, 19:30 IST
Last Updated 26 ಏಪ್ರಿಲ್ 2022, 19:30 IST
ಜೊಯಿಡಾ ತಾಲ್ಲೂಕಿನ ಸಾವಂತ್ ಮಾತ್ಕರ್ಣಿ ಭಾಗದ ಕಟ್ಟೆ– ಕಾಡಪೋಡ ಗ್ರಾಮಕ್ಕೆ ಹೆಸ್ಕಾಂ ಅಳವಡಿಸಿದ್ದ ಭೂಗತ ಕೇಬಲ್ ಮೇಲಿನ ಮಣ್ಣು, ಮಳೆ ನೀರಿಗೆ ಕೊಚ್ಚಿ ಹೋದ ದೃಶ್ಯ
ಜೊಯಿಡಾ ತಾಲ್ಲೂಕಿನ ಸಾವಂತ್ ಮಾತ್ಕರ್ಣಿ ಭಾಗದ ಕಟ್ಟೆ– ಕಾಡಪೋಡ ಗ್ರಾಮಕ್ಕೆ ಹೆಸ್ಕಾಂ ಅಳವಡಿಸಿದ್ದ ಭೂಗತ ಕೇಬಲ್ ಮೇಲಿನ ಮಣ್ಣು, ಮಳೆ ನೀರಿಗೆ ಕೊಚ್ಚಿ ಹೋದ ದೃಶ್ಯ   

ಜೊಯಿಡಾ: ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತ್ ಮಾತ್ಕರ್ಣಿ ಭಾಗದ ಜನಬಹುತೇಕ ಎಲ್ಲ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ, ಮೊಬೈಲ್ ಫೋನ್ ನೆಟ್‌ವರ್ಕ್ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ದಿನನಿತ್ಯದ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಾವಂತ್ ಮಾತ್ಕರ್ಣಿ ಭಾಗದ ಕಟ್ಟೆ, ಕಾಡಪೋಡ, ನಾರಗಾಳಿ, ತಿಗುರಗಾಳಿ, ಮಾದುಮಳೆ, ಮೈಂಗಿಣಿ ಹಾಗೂ ಸಾವಂತ್ ಮಾತ್ಕರ್ಣಿ ಹಳ್ಳಿಗಳು ಸಂಪೂರ್ಣವಾಗಿ ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಗ್ರಾಮಗಳಲ್ಲಿ 175ಕ್ಕಿಂತ ಜಾಸ್ತಿ ಜನಸಂಖ್ಯೆಯಿದೆ. ಇಲ್ಲಿ ಒಂದು ಪ್ರಾಥಮಿಕ ಶಾಲೆಯೂ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕಾಗಿ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಅಣಶಿಗೆ ಹೋಗಬೇಕು. ಬಸ್ ವ್ಯವಸ್ಥೆ ಇಲ್ಲದ ಕಾರಣ ಕಾಡು ದಾರಿಯಲ್ಲಿ ವನ್ಯಜೀವಿಗಳ ಭಯದಲ್ಲಿ ನಡೆದುಕೊಂಡು ಸಾಗಬೇಕು.

ಆಸ್ಪತ್ರೆಗೆ ತಾಲ್ಲೂಕು ಕೇಂದ್ರ ಜೊಯಿಡಾ ಅಥವಾ ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಲು ಕೂಡ ಅಣಶಿಗೆ ನಡೆದುಕೊಂಡೇ ಬರಬೇಕಿದೆ. ಈ ಭಾಗದಲ್ಲಿ ಯಾವುದೇ ಮೊಬೈಲ್ ಫೋನ್ ನೆಟ್‌ವರ್ಕ್ ಸಿಗುವುದಿಲ್ಲ. ಅದಕ್ಕೂ ಜನ ಅಣಶಿಗೇ ಬರಬೇಕು. ಒಂದುವೇಳೆ, ವಿದ್ಯುತ್ ಇಲ್ಲದಿದ್ದರೆ ಅಲ್ಲೂ ನೆಟ್‌ವರ್ಕ್ ಇರುವುದಿಲ್ಲ!

ADVERTISEMENT

‘ಹೆಸ್ಕಾಂ ನಮ್ಮ ಭಾಗಕ್ಕೆ ಹಾಕಿದ ವಿದ್ಯುತ್ ಕೇಬಲ್ ಗಟಾರದಿಂದ ಹೊರಗೆ ಬಂದಿದೆ. ರಸ್ತೆಯ ಪಕ್ಕದಲ್ಲಿ ಅದರಿಂದ ಕಾಲುವೆ ನಿರ್ಮಾಣವಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ದನ ಕರುಗಳು ಅಥವಾ ವಾಹನ ಸವಾರರೇ ಅದಕ್ಕೆ ಬಿದ್ದು ಜೀವಕ್ಕೆ ಹಾನಿಯಾದರೆ ಯಾರು ಹೊಣೆ’ ಎಂದು ಕಾಡಪೋಡದ ಯುವಕ ಅನಿಲ್ ವೇಳಿಪ ಪ್ರಶ್ನಿಸುತ್ತಾರೆ.

ಸೀಮೆಎಣ್ಣೆ ಕೊಡ್ತಿಲ್ಲ, ಕರೆಂಟೂ ಇಲ್ಲ!:

‘ಪಂಡಿತ ದೀನದಯಾಳ ಉಪಾಧ್ಯಾಯ ಯೋಜನೆಯಡಿ ಈ ಭಾಗಕ್ಕೆ ಭೂಗತ ಕೇಬಲ್ ಮೂಲಕ 2017ರಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದನ್ನು ಹೆಸ್ಕಾಂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದ ಇಲ್ಲಿ ವರ್ಷದ ಬಹುತೇಕ ದಿನ ವಿದ್ಯುತ್ ಇರುವುದೇ ಇಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಅವ್ಯವಸ್ಥೆಯನ್ನು ಸರಿಪಡಿಸಲೂ ಮುಂದಾಗುತ್ತಿಲ್ಲ’ ಎಂದು ಇಲ್ಲಿನ ಪಾಂಡುರಂಗ ಸಾವಂತ್, ಪಾಂಡುರಂಗ ಮಿರಾಶಿ, ಕೃಷ್ಣ ವೇಳಿಪ ಹಾಗೂ ಅನಿಲ್ ವೇಳಿಪ ಬೇಸರ ವ್ಯಕ್ತಪಡಿಸುತ್ತಾರೆ.

‘ಹಲವು ದಿನಗಳಿಂದ ವಿದ್ಯುತ್ ಹಗಲಿನಲ್ಲಿ ಬಂದರೆ ಸಂಜೆ ಏಳು ಗಂಟೆ ಆಗುತ್ತಿದ್ದಂತೆ ಕಡಿತವಾಗುತ್ತದೆ. ಸರ್ಕಾರವು ಹಲವು ತಿಂಗಳಿಂದ ಪಡಿತರದಲ್ಲಿ ಸೀಮೆಎಣ್ಣೆ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಹಳ್ಳಿಗರನ್ನು ಮತ್ತೆ ಸಂಕಷ್ಟಕ್ಕೆ ದೂಡಿದ್ದು, ಕತ್ತಲೆಯಲ್ಲಿ ಬದುಕು ಕಳೆಯುವಂತಾಗಿದೆ. ವಿದ್ಯುತ್ ಸಂಪರ್ಕ ಇದ್ದರೂ ಬೆಳಕು ನಮ್ಮ ಪಾಲಿಗೆ ಇಲ್ಲದಂತಾಗಿದೆ’ ಎಂದು ಸ್ಥಳೀಯರಾದ ವಿಷ್ಣು ದೇವಳಿ, ರಾಮ ಗಾವಡಾ, ಗುರುನಾಥ ವೇಳಿಪ ಅಳಲು ತೋಡಿಕೊಳ್ಳುತ್ತಾರೆ.

‘ಜನರಿಂದ ವಿದ್ಯುತ್ ಸಮಸ್ಯೆ ಕುರಿತು ಮನವಿ ಬಂದಾಗ ಸೂಕ್ತವಾಗಿ ಸ್ಪಂದಿಸಲಾಗಿದೆ. ಮಣ್ಣು ಕೊಚ್ಚಿ ಹೋಗಿ ಕೇಬಲ್ ಮೇಲೆ ಬಂದು ಕಾಲುವೆಯಂತೆ ನಿರ್ಮಾಣವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಜೊಯಿಡಾ ಹೆಸ್ಕಾಂ ಶಾಖಾಧಿಕಾರಿ ಕಾವೇರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.