ADVERTISEMENT

ಸತತ ಸುರಿಯುತ್ತಿರುವ ಮಳೆ: ವಿಜಯನಗರ ಜಿಲ್ಲೆಯಲ್ಲಿ 900 ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 15:43 IST
Last Updated 8 ಸೆಪ್ಟೆಂಬರ್ 2022, 15:43 IST
ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ನಿಂಬಾಪುರ ಮಾಗಣಿಯಲ್ಲಿ ಬಾಳೆ ತೋಟದಲ್ಲಿ ಅಪಾರ ನೀರು ಸಂಗ್ರಹಗೊಂಡು, ಅಧಿಕ ತೇವಾಂಶದಿಂದ ಕೊಳೆರೋಗ ಕಾಣಿಸಿಕೊಂಡಿದ್ದು, ರೈತ ಅದನ್ನು ತೆರವುಗೊಳಿಸುತ್ತಿದ್ದಾರೆ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ನಿಂಬಾಪುರ ಮಾಗಣಿಯಲ್ಲಿ ಬಾಳೆ ತೋಟದಲ್ಲಿ ಅಪಾರ ನೀರು ಸಂಗ್ರಹಗೊಂಡು, ಅಧಿಕ ತೇವಾಂಶದಿಂದ ಕೊಳೆರೋಗ ಕಾಣಿಸಿಕೊಂಡಿದ್ದು, ರೈತ ಅದನ್ನು ತೆರವುಗೊಳಿಸುತ್ತಿದ್ದಾರೆ   

ಹೊಸಪೇಟೆ (ವಿಜಯನಗರ): ಜಿಲ್ಲೆಯಾದ್ಯಂತ ಸತತ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಕೃಷಿ, ತೋಟಗಾರಿಕೆ ಬೆಳೆ ನಷ್ಟವಾಗಿದೆ.

ಸೆ. 1ರಿಂದ 9ರ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ 900 ಹೆಕ್ಟೇರ್‌ ಪ್ರದೇಶ ಕೃಷಿ ಬೆಳೆ, 25 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾಳಾಗಿದೆ. ಜಿಲ್ಲೆಯ ಹಲವೆಡೆ ಬೆಳೆಗಳು ಜಲಾವೃತವಾಗಿದ್ದು, ನೀರು ಹರಿದು ಹೋದ ನಂತರ ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸುವರು. ಅದರ ನಂತರ ಹಾನಿ ಪ್ರದೇಶ ಇನ್ನಷ್ಟು ವಿಸ್ತಾರವಾಗಬಹುದು.

ಸತತ ಮಳೆಗೆ ಅಧಿಕ ತೇವಾಂಶದಿಂದ ಬಾಳೆ, ಈರುಳ್ಳಿಗೆ ಕೊಳೆರೋಗ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನ ಹಂಪಿ, ವೆಂಕಟಾಪುರ, ಕಮಲಾಪುರ, ನಿಂಬಾಪುರ ಮಾಗಣಿ, ಹಂಪಿ ಮಾಗಣಿ, ಬುಕ್ಕಸಾಗರ ಮಾಗಣಿಯಲ್ಲಿ ಏಲಕ್ಕಿ, ಸುಗಂಧಿ, ಸಕ್ಕರೆ ಬಾಳೆ ಗಿಡಗಳು ಸಂಪೂರ್ಣ ಕೊಳೆತು ಹೋಗಿದ್ದು, ಅದನ್ನು ತೆಗೆಯುವುದೇ ರೈತರಿಗೆ ದೊಡ್ಡ ತಲೆ ನೋವಾಗಿದೆ.

ಇನ್ನು, ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರಿನ ಕೆಲವು ಭಾಗಗಳಲ್ಲಿ ಈರುಳ್ಳಿ ಹಾಳಾಗಿದೆ. ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿಯೂ ಉತ್ತಮ ಮಳೆಯಾಗಿದೆ. ಗುರುವಾರ ದಿನವಿಡೀ ಮಳೆ ಇರಲಿಲ್ಲ. ಕಾರ್ಮೋಡ ಕವಿದಿತ್ತು. ಜಿಲ್ಲೆಯಲ್ಲಿ ಇನ್ನೂ ಕೆಲವು ದಿನಗಳ ವರೆಗೆ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲೆಯ ಬಹುತೇಕ ಚೆಕ್‌ ಡ್ಯಾಂ, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆರೆಗಳಿಗೆ ಕೋಡಿ ಬಿದ್ದಿರುವುದರಿಂದ ಅಪಾರ ಹಾನಿಯಾಗಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಇದೇ ರೀತಿ ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.