ADVERTISEMENT

ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:32 IST
Last Updated 20 ಡಿಸೆಂಬರ್ 2025, 7:32 IST
   

ಹೊಸಪೇಟೆ (ವಿಜಯನಗರ): ನಗರದ ಅಮರಾವತಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ಶನಿವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿದ್ಯಾರ್ಥಿಗಳು ‘ಕೃತಕ ಬುದ್ಧಿಮತ್ತೆ’ ಕುರಿತು ಪಾಠ ಮಾಡಿದರು. ಪ್ರತಿ ಮಾತನ್ನೂ ಕುತೂಹಲದಿಂದ ಕೇಳಿದ ಸಚಿವೆ, ಭವಿಷ್ಯದ ಭಾರತದ ತಂತ್ರಜ್ಞರ ಬೆನ್ನು ತಟ್ಟಿ ಹುರಿದುಂಬಿಸಿದರು.

ಹೈದರಾಬಾದ್ ಮೂಲದ ಸಿಯೆಂಟ್ ಕಂಪನಿ ಒಂದು ಪ್ರಾಯೋಗಿಕ ಮಾದರಿಯಾಗಿ ಹೊಸಪೇಟೆ ತಾಲ್ಲೂಕಿನ ಐದು ಸರ್ಕಾರಿ ಶಾಲೆಗಳಲ್ಲಿ ‘ವಿಜಯಪಥ’ ಹೆಸರಿನ ಕೃತಕ ಬುದ್ಧಿಮತ್ತೆ (ಎಐ) ಪ್ರಯೋಗಾಲಯ ಆರಂಭಿಸಿದ್ದು, ಅದರ ಉದ್ಘಾಟನೆಗೆ ಬಂದ ಸಚಿವೆ ನಿರ್ಮಲಾಗೆ ವಿದ್ಯಾರ್ಥಿಗಳು ಎಐ ಕುರಿತಂತೆ ಮಾಹಿತಿ ನೀಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಆರ್.ಮೋಹನ್ ರೆಡ್ಡಿ, ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇತರು ಜತೆಗಿದ್ದರು.

ಅಮರಾವತಿ ಪದವಿಪೂರ್ವ ಕಾಲೇಜ್‌ನಲ್ಲಿ ಎರಡು ಕೊಠಡಿಗಳಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಇಲ್ಲಿನ 1,200 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಸಂಸ್ಥೆಯ ವತಿಯಿಂದ ಈಗಾಗಲೇ ಶಿಕ್ಷಕರಿಗೆ, ಕೆಲವು ಆಯ್ದ ವಿದ್ಯಾರ್ಥಿನಿಗಳಿಗೆ ತರಬೇತಿ ನೀಡಲಾಗಿದೆ. ಚಿತ್ತವಾಡ್ಗಿ, ಟಿ.ಬಿ.ಡ್ಯಾಂ, ಕಾರಿಗನೂರುಗಳಲ್ಲಿನ ಸರ್ಕಾರಿ ಪ್ರೌಢಶಾಲೆ ಹಾಗೂ ಜಂಬುನಾಥ ಹಳ್ಳಿಯಲ್ಲಿನ ಆದರ್ಶ ವಿದ್ಯಾಲಯಗಳಲ್ಲಿ ಇತರ ಪ್ರಯೋಗಾಲಯ ಸ್ಥಾಪಿಸಲಾಗಿದೆ.

ADVERTISEMENT

2 ಸಾವಿರ ವಿದ್ಯಾರ್ಥಿಗಳಿಗೆ ಕಲಿಸುವ ಗುರಿ: ಹೊಸಪೇಟೆ ತಾಲ್ಲೂಕಿನಲ್ಲಿ 6ರಿಂದ 10ನೇ ತರಗತಿವರೆಗಿನ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿ ಅವರಿಗೆ ಆರಂಭಿಕ ಹಂತದ ಶಿಕ್ಷಣ ನೀಡುವ ಗುರಿಯನ್ನು ಸಿಯೆಂಟ್ ಸಂಸ್ಥೆ ಹೊಂದಿದೆ. ಕೃತಕ ಬುದ್ಧಿಮತ್ತೆ, ಸ್ಟೆಮ್, ರೊಬೊಟಿಕ್ಸ್, ಕೋಡಿಂಗ್ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು, ಇದು ಸಂಸ್ಥೆಯ ಸಿಯೆಂಟ್ ಫೌಂಡೇಶನ್ ವತಿಯಿಂದ ನಡೆಯುತ್ತಿದೆ, ಇದು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ಭಾಗವೂ ಹೌದು’ ಎಂದು ಬಿ.ವಿ.ಆರ್.ಮೋಹನ್ ರೆಡ್ಡಿ ಮಾಧ್ಯಮದವರಿಗೆ ತಿಳಿಸಿದರು.

‘100ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಎಐ ಲೋಕಕ್ಕೆ ಕರೆದೊಯ್ಯಲಾಗುತ್ತದೆ. ಹೀಗಾಗಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಐದು ಸುಸಜ್ಜಿತ ಪ್ರಯೋಗಾಲಯಗಳನ್ನು, ಅವುಗಳಿಗೆ ಕಂಪ್ಯೂಟರ್‌, ಇತರ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಆರಂಭದಲ್ಲಿ 100 ಶಿಕ್ಷಕರನ್ನು ಬಳಿಕ ಮತ್ತೆ 100 ಶಿಕ್ಷಕರನ್ನು ತರಬೇತಿಗೊಳಿಸುವ ವಿಚಾರ ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸನ್ನದ್ಧತೆಯನ್ನು ಬಲಪಡಿಸುವ ಮತ್ತು ಹಿಂದುಳಿದ ಸಮುದಾಯಗಳಲ್ಲಿ ತಂತ್ರಜ್ಞಾನದ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ’ ಎಂದು ಅವರು ಹೇಳಿದರು.

ಬಜೆಟ್‌: ಸಚಿವರಿಂದ ಚಿಂತನ ಮಂಥನ ಸಭೆ

ಪ್ರತಿ ವರ್ಷ ಕೇಂದ್ರ ಬಜೆಟ್ ತಯಾರಿಸುವ ಮೊದಲು ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಕೆಲವು ಆಯ್ದ ಸ್ಥಳಗಳಲ್ಲಿ ಚಿಂತನ ಮಂಥನ ಸಭೆ ನಡೆಸುವುದು ವಾಡಿಕೆ, ಅದರಂತೆ ನಿರ್ಮಲಾ ಸೀತಾರಾಮನ್ ಅವರು ಹಂಪಿ ಸಮೀಪದ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್‌ ರೆಸಾರ್ಟ್‌ನಲ್ಲಿ 17ಕ್ಕೂ ಅಧಿಕ ಹಿರಿಯ ಐಎಎಸ್ ಅಧಿಕಾರಿಗಳು, ಆರ್ಥಿಕ ತಜ್ಞರ ಜತೆಗೆ ಚಿಂತನ ಮಂಥನ ಸಭೆ ಆರಂಭಿಸಿದರು. ಈ ಸಭೆ ಸಂಜೆಯತನವೂ ನಡೆಯಲಿದ್ದು, ಭಾನುವಾರವೂ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.