ಹೊಸಪೇಟೆಯಲ್ಲಿ ಯೋಗ ದಿನಾಚರಣೆ
ಹೊಸಪೇಟೆ (ವಿಜಯನಗರ): ನಮ್ಮ ಜೀವನ ಕ್ರಮದಲ್ಲೇ ಯೋಗದ ಸಾಕಷ್ಟು ಅಂಶವಿದೆ, ಅದನ್ನು ಮರೆತ ಕಾರಣಕ್ಕೇ ನಾವಿಂದು ಯೋಗಭ್ಯಾಸವನ್ನು ಅಗತ್ಯವಾಗಿ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜಿಲ್ಲಾಡಳಿತ, ಆಯುಷ್ ಇಲಾಖೆ ಸಹಿತ ವಿವಿಧ ಇಲಾಖೆಗಳು, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ಕಾಯಕದಲ್ಲಿ ನಮ್ಮ ದೇಹ, ಮನಸ್ಸುಗಳಿಗೆ ಸ್ವಾಸ್ಥ್ಯ ನೀಡುವಂತಹ ಹಲವು ಪ್ರಯೋಜನಗಳಿದ್ದವು, ಆದರೆ ನಾವಿಂದು ಅದರಿಂದ ವಿಮುಖರಾಗಿದ್ದೇವೆ. ಅಡುಗೆ ಮನೆಯಲ್ಲೇ ಸಾಕಷ್ಟು ದೈಹಿಕ ಶ್ರಮದ ಕೆಲಸಗಳಿದ್ದವು, ಅದೂ ಇಂದು ಇಲ್ಲವಾಗಿದೆ. ಹೀಗಾಗಿ ಯೋಗ ಎಂಬ ಆರೋಗ್ಯದ ಮಹಾನ್ ಶಕ್ತಿಯನ್ನು ನಾವು ಅಗತ್ಯವಾಗಿ ಅಭ್ಯಾಸ ಮಾಡಬೇಕಾಗಿದೆ. ಜೀವನ ಶೈಲಿಯಲ್ಲಿ ಯೋಗ ಎಂಬುದು ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.
ಉದ್ಯಾನ ಅಭಿವೃದ್ಧಿ: ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಮಾತನಾಡಿ, ನಗರದಲ್ಲಿ ಹಲವು ಉದ್ಯಾನಗಳಲ್ಲಿ ಯೋಗ ಶಿಬಿರಗಳನ್ನು ನಡೆಸಲು ಪ್ರಸ್ತಾವ ಇದ್ದು, ಈ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ನಗರಸಭೆ ಉತ್ಸುಕವಾಗಿದೆ, ಜಿಲ್ಲಾಡಳಿತ ಇದಕ್ಕೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆಗಳಲ್ಲಿ ಯೋಗ ಸಹ ಒಂದು. ಇತರ ದೇಶಗಳು ನಮಗೆ ಯೋಗ ಕಲಿಸಿಕೊಡುವ ಬದಲು ನಾವೇ ಇತರರಿಗೆ ಯೋಗ ಕಲಿಸಿಕೊಡಬೇಕಿದ್ದು, ಆ ಅವಕಾಶ ಇದೀಗ ಲಭಿಸಿದೆ, ಇದನ್ನು ನಾವು ಇನ್ನಷ್ಟು ಚೆನ್ನಾಗಿ ಬಳಸಿಕೊಂಡು ಇಡೀ ಸಮಾಜ ಕಾಯಿಲೆಮುಕ್ತವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಮುನಿವಾಸುದೇವ ರಡ್ಡಿ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಗುರುಬಸವರಾಜ್, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕರಿ ಡಾ. ಕೊಟ್ರಮ್ಮ, ಬಿಇಒ ಶೇಖರಪ್ಪ ಹೊರಪೇಟೆ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಅಕ್ಕ, ಆಯುಷ್‌ನ ಎ.ವಿ.ಭಟ್, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಇತರರು ಇದ್ದರು.
ಸಾಮೂಹಿಕ ಯೋಗ: ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್ ಕುಮಾರ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧವಾದಂತಹ ಶಿಷ್ಟಾಚಾರದ ಯೋಗ ಶಿಬಿರ ನಡೆಸಿಕೊಟ್ಟರು. 800ಕ್ಕೂ ಅಧಿಕ ಮಂದಿ ಸಾಮೂಹಿಕ ಯೋಗ ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದರು.
ಪತಂಜಲಿ ಯೋಗ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರಾಷ್ಟ್ರೀಯ ಸೇವಾಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ , ಟಿ.ಎಂ.ಎ.ಇ. ಆಯುರ್ವೇದ ಕಾಲೇಜ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜೆಸಿಐ ಹೊಸಪೇಟೆ, ರೋಟರಿ ಕ್ಲಬ್, ಆರ್ಟ್ ಆಫ್ ಲಿವಿಂಗ್ ಸಹಿತ ಹಲವು ಸಂಘ ಸಂಸ್ಥೆಗಳು ಸಹಕರಿಸಿದವು.
50ಕ್ಕೂ ಅಧಿಕ ಶಾಲೆಗಳಲ್ಲಿ ಯೋಗ
ಪತಂಜಲಿ ಯೋಗ ಸಮಿತಿಯ ವತಿಯಿಂದ ತರಬೇತಿ ಪಡೆದ ನುರಿತ ಯೋಗ ಶಿಕ್ಷಕರು ಹೊಸಪೇಟೆ ತಾಲ್ಲೂಕಿನ ವಿವಿಧೆಡೆಯಲ್ಲಿ ಇರುವ 50ಕ್ಕೂ ಅಧಿಕ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ತೆರಳಿ ಬೆಳಿಗ್ಗೆ 8ರಿಂದ 10ರ ನಡುವೆ ಸಾಮೂಹಿಕ ಯೋಗ ಶಿಬಿರ ನಡೆಸಿಕೊಟ್ಟರು. ಈ ಮೂಲಕ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಯೋಗಾಭ್ಯಾಸದ ಪರಿಚಯ ಮಾಡಿಸಿಕೊಟ್ಟಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.