ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್ ಶೇಕ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 7:44 IST
Last Updated 20 ನವೆಂಬರ್ 2022, 7:44 IST
ಕಾಂಗ್ರೆಸ್ ಜನಸಂಪರ್ಕ ಕಚೇರಿ ಉದ್ಘಾಟಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್ ಶೇಕ್ ಮಾತನಾಡಿದರು.
ಕಾಂಗ್ರೆಸ್ ಜನಸಂಪರ್ಕ ಕಚೇರಿ ಉದ್ಘಾಟಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್ ಶೇಕ್ ಮಾತನಾಡಿದರು.    

ಹೊಸಪೇಟೆ (ವಿಜಯನಗರ): 'ರಾಜ್ಯದಾದ್ಯಂತ ಕಾಂಗ್ರೆಸ್ ಪರ ಅಲೆ ಇದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ಅನೇಕರು ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುತ್ತಿರುವುದೇ ಸಾಕ್ಷಿ' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿರಾಜ್ ಶೇಕ್ ಹೇಳಿದರು.

ತಾಲ್ಲೂಕಿನ ಕೊಂಡನಾಯಕನಹಳ್ಳಿಯಲ್ಲಿ ಭಾನುವಾರ ಕಾಂಗ್ರೆಸ್ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಟಿಕೆಟ್ ಕೋರಿ ಕಾಂಗ್ರೆಸ್ ಗೆ ಅರ್ಜಿ ಸಲ್ಲಿಸಿದವರಿಂದ ₹18 ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ. ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ. ಚುನಾವಣೆಗೆ ಕೆಲವೇ ತಿಂಗಳು ಉಳಿದಿವೆ. ಮತದಾರರ ಪಟ್ಟಿಯಿಂದ ಬಿಜೆಪಿ ವಿರುದ್ಧ ಇರುವವರ ಅರ್ಹರ ಹೆಸರು ತೆಗೆಸಲು ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ. ಇದರ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ADVERTISEMENT

ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿರದಿದ್ದರೆ ಚಿಲುಮೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಸರ್ಕಾರ ಬಂಧಿಸಿರುವುದೇಕೇ? ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿ ವಹಿಸಿದ್ದೇ ತಪ್ಪು. ಯಾರ ಗಮನಕ್ಕೂ ತಾರದೇ ಮತದಾರರ ಪಟ್ಟಿ ಪರಿಷ್ಕರಣೆ ಖಾಸಗಿ ಸಂಸ್ಥೆಗೆ ವಹಿಸಿ, ವೈಯಕ್ತಿಕ ಮಾಹಿತಿ ಪಡೆಯಲು ಅವಕಾಶ ಕೊಟ್ಟಿದ್ದೇ ದೊಡ್ಡ ತಪ್ಪು ಎಂದು ಹೇಳಿದರು.

ವಿಜಯನಗರ ಕ್ಷೇತ್ರದ ಮತದಾರರ ಪಟ್ಟಿ ಕೊಡಬೇಕೆಂದು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೆ ಏಳೆಂಟು ತಿಂಗಳಾದರೂ ಕೊಟ್ಟಿಲ್ಲ. ಇನ್ನು, ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಾರದು ಎಂದು ತಿಳಿಸಿದರು.

ಚುನಾವಣೆಯಲ್ಲಿ ಯಾರು ಬೇಕಾದರೂ ಗೆಲ್ಲಲಿ. ಆದರೆ, ಆರೋಗ್ಯಪೂರ್ಣ ವಾತಾವರಣದಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದರೆ ಏನು ಮಾಡಲಾಗುವುದಿಲ್ಲ ಎಂದು ಬಿಜೆಪಿ ಸೋಲುವ ಕ್ಷೇತ್ರಗಳಲ್ಲಿ ಜನಸಂಪರ್ಕ ಯಾತ್ರೆ ನಡೆಸುತ್ತಿದೆ. ಒಂದಾದ ನಂತರ ಒಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನಾಲ್ಕೈದು ತಿಂಗಳಲ್ಲಿ ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ನಗರಸಭೆ ಸದಸ್ಯ ಗೌಸ್, ಮುಖಂಡರಾದ ಹಾಲಪ್ಪ, ಹೊಸಹಳ್ಳಿ ಚಂದ್ರಶೇಖರಪ್ಪ, ಬಾಲೇ ಸಾಬ್, ತಮ್ಮನ್ನಳ್ಳೆಪ್ಪ , ಲಕ್ಷ್ಮಣ, ರಮೇಶ, ತಾರಾ ಬಾಷ, ಬುಡೇನ್, ನಬಿ, ಕೊಡಗಿನಹಾಳು ಮಲ್ಲಿಕಾರ್ಜುನ, ನಾಗೇನಹಳ್ಳಿ ಚನ್ನಪ್ಪ, ಬಾನುಬೀ, ಸೋಮಪ್ಪ, ನರಸಪ್ಪ, ಕೃಷ್ಣ, ಮಲ್ಲಿಕಾರ್ಜುನ, ಜಂಬಣ್ಣ ಮೇಟಿ ಇತರರಿದ್ದರು.

28 ಸಾವಿರ ಜನರಿಗೆ ಸೂರಿಲ್ಲ
ವಿಜಯನಗರ ಕ್ಷೇತ್ರದ 28 ಸಾವಿರ ಜನರಿಗೆ ಸೂರಿಲ್ಲ. ಒಟ್ಟು 58 ಸ್ಲಂಗಳಲ್ಲಿ ಜನ ಬಹಳ ದಯನೀಯವಾಗಿ ಬದುಕುತ್ತಿದ್ದಾರೆ. ಅವರನ್ನು ನೋಡಿದರೆ ಕಣ್ಣೀರು ಬರುತ್ತದೆ. ತುಂಗಭದ್ರಾ ಜಲಾಶಯವಿದ್ದರೂ ಟ್ಯಾಂಕರ್ ನಿಂದ ನೀರು ಪೂರೈಸುತ್ತಿರುವುದು ದುರದೃಷ್ಟಕರ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.