ADVERTISEMENT

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ

ಎಂ.ಜಿ.ಬಾಲಕೃಷ್ಣ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
ಕನ್ಹಯ್ಯ ನಾಯ್ಡು 
ಕನ್ಹಯ್ಯ ನಾಯ್ಡು    

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸುವ ಕೆಲಸ ಈಗ ನಡೆಯುತ್ತಿದೆ. ಆದರೆ, ಹಣ ಕೊಡದೇ ಕರ್ನಾಟಕ ಸರ್ಕಾರ ಸತಾಯಿಸುತ್ತಿದೆ. ಇದರಿಂದ ಕೆಲಸ ನಿಧಾನವಾಗಬಹುದು ಅಥವಾ ಸ್ಥಗಿತವೂ ಆಗಬಹುದು’ ಎಂದು ಗೇಟ್‌ ತಜ್ಞ ಕನ್ಹಯ್ಯ ನಾಯ್ಡು ಹೇಳಿದರು.

ಎರಡು ದಿನಗಳ ಹಿಂದೆ ಅಣೆಕಟ್ಟೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದ ಅವರು ಗುರುವಾರ ‘ಪ್ರಜಾವಾಣಿ’ ಜತೆಗೆ ಮಾತನಾಡಿ, ‘ಕರ್ನಾಟಕ ಸರ್ಕಾರ ಆರಂಭಿಕ ಕಂತಿನ ರೂಪದಲ್ಲಿ ₹10 ಕೋಟಿ ಮಂಜೂರು ಮಾಡಿದ್ದನ್ನು ವಾಪಸ್ ಪಡೆದಿದೆ. ಬುಕ್‌ ಅಡ್ಜಸ್ಟ್‌ಮೆಂಟ್ ಎಂದು ಹೇಳಿ ಹಣ ಕೊಡದೆ ಸತಾಯಿಸುತ್ತಿದೆ ಎಂದು ಗುತ್ತಿಗೆದಾರರು ನನ್ನಲ್ಲಿ ದೂರಿದ್ದಾರೆ. ತಕ್ಷಣ ಹಣ ತರಿಸಿ ಎಂದು ನಾನು ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸಿದ್ದೇನೆ’ ಎಂದರು.

‘ಆಂಧ್ರ ಪ್ರದೇಶ ಸರ್ಕಾರ ತನ್ನ ಪಾಲಿನ ₹35 ಕೋಟಿಯನ್ನು ಈಗಾಗಲೇ ಕರ್ನಾಟಕ ಖಜಾನೆಗೆ ಹಸ್ತಾಂತರಿಸಿದೆ. ತೆಲಂಗಾಣ ರಾಜ್ಯವು ಜಲಾಶಯದ ದೊಡ್ಡ ಫಲಾನುಭವಿಯಲ್ಲ. ಸದ್ಯ ಆಂಧ್ರ ಪ್ರದೇಶ ಸರ್ಕಾರವೇ ತೆಲಂಗಾಣದ ಪಾಲನ್ನು ಸೇರಿಸಿ ಹಣ ನೀಡಿದೆ. ಆಂಧ್ರ ಪ್ರದೇಶ ಸರ್ಕಾರದ ಸೂಚನೆಯಂತೆ ನಾನು ಗೇಟ್ ಪರಿಶೀಲಿಸಲು ಬಂದಿದ್ದೆ. ಆದರೆ, ಗುತ್ತಿಗೆದಾರರು ಹಣದ ಕೊರತೆ ಇರುವುದನ್ನು ನನ್ನ ಎದುರು ಹೇಳಿಕೊಂಡರು. ನನಗಂತೂ ಇದು ಆಘಾತ ತಂದಿದೆ. ತಕ್ಷಣ ಕರ್ನಾಟಕ ಸ್ಪಂದಿಸದಿದ್ದರೆ, ಜೂನ್‌ ಒಳಗೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳದು’ ಎಂದು ಕನ್ಹಯ್ಯ ನಾಯ್ಡು ಎಚ್ಚರಿಸಿದರು.

ADVERTISEMENT

ಕೆಲಸ ಸಮರ್ಪಕ: ‘ಗೇಟ್‌ ಅಳವಡಿಕೆ ಕಾಮಗಾರಿಗಳೆಲ್ಲ ಸಮರ್ಪಕವಾಗಿ ನಡೆಯುತ್ತಿವೆ. ಅಳವಡಿಕೆಯಾದ ಗೇಟ್‌ ಮೇಲಕ್ಕೆ ಎತ್ತುವ ಪ್ರಯೋಗವನ್ನೂ ಗಮನಿಸಿದ್ದೇನೆ, ಸಮಾಧಾನವಾಗಿದೆ. ಎಲ್ಲ ಗೇಟ್‌ಗಳಿಗೂ ಹೊಸ ಚೈನ್‌ಲಿಂಕ್ ಅಳವಡಿಕೆ ಆಗಲಿದೆ’ ಎಂದು ನಾಯ್ಡು ತಿಳಿಸಿದರು.

ತುಂಗಭದ್ರಾ ಅಣೆಕಟ್ಟೆಯಲ್ಲಿ 2024ರ ಆಗಸ್ಟ್‌ 10ರಂದು ಕೊಚ್ಚಿಕೊಂಡು ಹೋಗಿದ್ದ 19ನೇ ಕ್ರೆಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಗೇಟ್‌ ಅನ್ನು ಅನ್ನು ಗುರುವಾರ ತೆರವುಗೊಳಿಸಲಾಯಿತು. ಇಲ್ಲಿ ಹೊಸ ಗೇಟ್‌ ಶೀಘ್ರ ಅಳವಡಿಕೆಯಾಗಲಿದೆ 

ಬಾರದ ಹಣ: ಗೊತ್ತಾದದ್ದು ಹೇಗೆ?

‘ತಿಂಗಳಿಗೆ ಕೇವಲ ನಾಲ್ಕು ಗೇಟ್‌ನಂತೆ ಕೂರಿಸುತ್ತ ಹೋದರೆ ಜೂನ್‌ಗೆ ಕೆಲಸ ಮುಗಿಯದು. ಸದ್ಯ ಎರಡು ತಂಡಗಳು ಕೆಲಸ ಮಾಡುತ್ತಿವೆ. ಇದನ್ನು ಮೂರು ಅಥವಾ ನಾಲ್ಕು ತಂಡಗಳಾಗಿ ವಿಸ್ತರಿಸಿ ಎಂದು ನಾನು ಸಲಹೆ ನೀಡಿದಾಗ ಗುತ್ತಿಗೆದಾರರು ಹಣದ ಕೊರತೆಯನ್ನು ನನ್ನ ಮುಂದಿಟ್ಟರು. ನಾನು ತಕ್ಷಣ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಅವರಲ್ಲಿ ವಿಚಾರಿಸಿದೆ. ಆಗ ಅವರು ಕರ್ನಾಟಕ ಸರ್ಕಾರ ಕೊಟ್ಟ ಹಣವನ್ನು ವಾಪಸ್ ಪಡೆದಿರುವುದಾಗಿ ತಿಳಿಸಿದರು.  ಹೀಗಾಗಿ ಈಗ ಈ ವಿಷಯ ನನ್ನ ಗಮನಕ್ಕೆ ಬಂತು’ ಎಂದು ಕನ್ಹಯ್ಯ ನಾಯ್ಡು ಹೇಳಿದರು.

ಗೇಟ್ ಅಳವಡಿಕೆಯ ಟೆಂಡರ್ ಮೊತ್ತ ₹54 ಕೋಟಿ. ಆಂಧ್ರ ಸರ್ಕಾರ ₹35 ಕೋಟಿ ಕೊಟ್ಟಿದೆ ಮಿಕ್ಕಿದ್ದನ್ನು ಕರ್ನಾಟಕ ಸರ್ಕಾರ ಕೊಡಬೇಕು. ವಿಳಂಬವಾದರೆ ಜೂನ್‌ಗೆ ಕೆಲಸ ಮುಗಿಯಲ್ಲ
–ಕನ್ಹಯ್ಯ ನಾಯ್ಡು, ಕ್ರೆಸ್ಟ್‌ಗೇಟ್ ತಜ್ಞ
₹10 ಕೋಟಿ ವಾಪಸ್‌ ಪಡೆದ ಬಗ್ಗೆ ಖಚಿತವಾಗಿ ಮಾಹಿತಿ ಗೊತ್ತಿಲ್ಲ. ಮಾಹಿತಿ ಪಡೆದು ತಿಳಿಸುವೆ.
–ಲಕ್ಷ್ಮಣ ನಾಯಕ, ಮುಖ್ಯ ಎಂಜಿನಿಯರ್‌ ನೀರಾವರಿ ಕೇಂದ್ರ ವಲಯ ಮುನಿರಾಬಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.