
ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ತಿಮ್ಮಲಾಪುರ ಟೋಲ್‍ನಲ್ಲಿ ಬುಧವಾರ ಸಂಜೆ ದಾಳಿಂಬೆ ತುಂಬಿದ್ದ ಲಾರಿಯೊಂದು ಅತಿವೇಗವಾಗಿ ಬಂದು ಬೊಲೆರೊಗೆ ಹಿಂದಿನಿಂದ ಡಿಕ್ಕಿ ಹೊಡೆದು ಡಿವೈಡರ್‍ಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಕ್ಲೀನರ್ ತೀವ್ರ ಗಾಯಗೊಂಡಿದ್ದಾರೆ.
ಬಸವನಬಾಗೇವಾಡಿಯ ಲಾರಿ ಚಾಲಕ ಈರಣ್ಣ ಬಾಗಿ(37) ಮೃತಪಟ್ಟವರು. ಕ್ಲೀನರ್ ಶ್ರೀಶೈಲ ತೀವ್ರ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಲಮಟ್ಟಿಯಿಂದ ಮೈಸೂರಿಗೆ ದಾಳಿಂಬೆ ತುಂಬಿ ತೆರಳುತ್ತಿದ್ದ ಲಾರಿ ಟೋಲ್‍ನಲ್ಲಿ ಅತಿವೇಗವಾಗಿ ಬಂದು, ಮೊದಲು ಟೋಲ್‍ನಲ್ಲಿ ಹಣ ಪಾವತಿಸುತ್ತಿದ್ದ ಬೊಲೆರೊಗೆ ಡಿಕ್ಕಿ ಹೊಡೆದು, ನಂತರ ಟೋಲ್ ರೂಮ್ ಪಕ್ಕದ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೊ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.