ADVERTISEMENT

Russia–Ukraine Conflict: ವಿಮಾನಯಾನ ಕಂಪನಿಗಳ ಧನದಾಹ, ಪ್ರಯಾಣ ದರ ಹೆಚ್ಚಳ

ವಿದ್ಯಾರ್ಥಿಗಳ ಆರೋಪ

ಬಸವರಾಜ ಸಂಪಳ್ಳಿ
Published 26 ಫೆಬ್ರುವರಿ 2022, 3:09 IST
Last Updated 26 ಫೆಬ್ರುವರಿ 2022, 3:09 IST
ಉಕ್ರೇನ್‌ನಿಂದ ವಿಜಯಪುರಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿನಿ ಸ್ನೇಹಾ ಪಾಟೀಲ
ಉಕ್ರೇನ್‌ನಿಂದ ವಿಜಯಪುರಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿನಿ ಸ್ನೇಹಾ ಪಾಟೀಲ   

ವಿಜಯಪುರ: ಯುದ್ಧದ ಭೀತಿಯಲ್ಲಿದ್ದ ಉಕ್ರೇನ್‌ನಿಂದ ತಾಯ್ನಾಡಿಗೆ ಮರಳಲು ಹಂಬಲಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ವಿಮಾನಯಾನ ಕಂಪನಿಗಳ ಧನದಾಹದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಯುದ್ಧ ಇನ್ನೇನು ಆರಂಭವಾಯಿತು ಎನ್ನುವ ಸಂದರ್ಭದಲ್ಲಿ ಸ್ವದೇಶಕ್ಕೆ ಮರಳಲು ಸಾವಿರಾರು ವಿದ್ಯಾರ್ಥಿಗಳು ಪ್ರಯತ್ನ ಆರಂಭಿಸುತ್ತಿದ್ದಂತೆ, ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ವಿಮಾನಯಾನ ಕಂಪನಿಗಳು ಟಿಕೆಟ್ ದರ ಮೂರುಪಟ್ಟು ಹೆಚ್ಚಳ ಮಾಡಿದವು. ಇದರಿಂದಾಗಿ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕುವಂತಾಗಿದೆ.

‘ಸಾಮಾನ್ಯ ದಿನಗಳಲ್ಲಿ ಉಕ್ರೇನ್‌ನಿಂದ ಬೆಂಗಳೂರಿಗೆವಿಮಾನ ಪ್ರಯಾಣದ ಟಿಕೆಟ್ ದರ ₹ 28 ಸಾವಿರದಿಂದ ₹ 31 ಸಾವಿರ ಇರುತ್ತದೆ. ಆದರೆ, ಇದೀಗ ₹90 ಸಾವಿರದ ವರೆಗೂ ಏರಿಕೆಯಾಯಿತು. ಇದರಿಂದ ಅಂಜಿದ ವಿದ್ಯಾರ್ಥಿಗಳು ಟಿಕೆಟ್‌ ದರ ಕಡಿಮೆಯಾದ ಬಳಿಕ ಬರುತ್ತೇವೆ ಎಂದು ಅಲ್ಲಿಯೇ ಉಳಿದುಕೊಂಡಿದ್ದಾರೆ‘ ಎಂದು ಉಕ್ರೇನ್‌ನಿಂದ ಭಾರತಕ್ಕೆ ಹೊರಟ ಕೊನೆಯ ವಿಮಾನದಲ್ಲಿ ದೇಶ ತಲುಪಿರುವ ಸ್ನೇಹಾ ಪಾಟೀಲ ಅವರ ತಂದೆ ಆರ್‌.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಇಷ್ಟೆಲ್ಲ ತೊಂದರೆ ಆದರೂ ಭಾರತೀಯ ರಾಯಭಾರಿ ಕಚೇರಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ದೂರಿದರು

ADVERTISEMENT

ಗುಣಮಟ್ಟದ ಶಿಕ್ಷಣ, ಕಡಿಮೆ ಶುಲ್ಕ: ‘ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಎಂಬುದು ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಆದರೆ, ಉಕ್ರೇನ್‌ನಲ್ಲಿ ₹ 55 ಲಕ್ಷ ಖರ್ಚು ಮಾಡಿದರೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಲಭಿಸುತ್ತದೆ. ಈ ಕಾರಣಕ್ಕೆ ಬಹಳಷ್ಟು ಮಂದಿ ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣಕ್ಕೆ ತೆರಳುತ್ತಾರೆ. ಅಲ್ಲದೇ, ಅಲ್ಲಿ ಶೈಕ್ಷಣಿಕ ಸಾಲ ಸೌಲಭ್ಯಗಳು ಬೇಗ ಲಭಿಸುತ್ತದೆ’ ಎಂದು ಆರ್‌.ಎಸ್‌.ಪಾಟೀಲ ತಿಳಿಸಿದರು.

ಜಿಲ್ಲೆಯ 13 ವಿದ್ಯಾರ್ಥಿಗಳು: ವಿಜಯಪುರ ಜಿಲ್ಲೆಯ 13 ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಖಚಿತ ಪಡಿಸಿದ್ದಾರೆ.

ಪ್ರತಿಭಟನೆ: ಉಕ್ರೇನ್‌ ಮೇಲಿನ ದಾಳಿ ನಿಲ್ಲಿಸುವಂತೆ ಆಗ್ರಹಿಸಿ ನವದೆಹಲಿಯಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಎದುರು ಉಕ್ರೇನ್‌ ಬೆಂಬಲಿಗರು ಮತ್ತು ಭಾರತೀಯ ವಿದ್ಯಾರ್ಥಿಗಳ ಪೋಷಕರು ಫೆ.26ರಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ಸ್ನೇಹಾ ಪಾಟೀಲ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಉಕ್ರೇನ್‌ ಬೆಂಬಲಿಗರು, ವಿದ್ಯಾರ್ಥಿಗಳ ಪೋಷಕರು ಸೇರಿಕೊಂಡು ಹರ್‌ದೀಪ್‌ ಸಿಂಗ್‌ ಎಂಬುವವರ ನೇತೃತ್ವದಲ್ಲಿ ಈಗಾಗಲೇ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದು, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ದೆಹಲಿ ಸುತ್ತಮುತ್ತ ಇರುವವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದರು.

ಉಕ್ರೇನ್‌ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸಾತಿಗೆ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.