
ತುಮಕೂರು: ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ಜಾರಿಗೊಳಿಸಿದ ‘ಅಕ್ಕಪಡೆ’ ಗಸ್ತು, ಪಹರೆ ಆರಂಭಿಸಿದೆ. ಕಳೆದ ಒಂದು ತಿಂಗಳಿನಿಂದ ಕಾರ್ಯಪ್ರವೃತ್ತವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ ಅಕ್ಕ ಪಡೆಯನ್ನು ಕಾರ್ಯರೂಪಕ್ಕೆ ತಂದಿವೆ. ಗೃಹರಕ್ಷಕ ದಳದಿಂದ ನಾಲ್ಕು ಜನ ಗೃಹರಕ್ಷಕಿಯರನ್ನು ಪಡೆಗೆ ನೇಮಿಸಲಾಗಿದೆ. ಇದರ ಜತೆಗೆ ಇಬ್ಬರು ಮಹಿಳಾ ಕಾನ್‌ಸ್ಟೇಬಲ್, ಒಬ್ಬ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಪಾಳಿಯಲ್ಲಿ ಚಾಲಕ ಸೇರಿ ನಾಲ್ವರು ಇರಲಿದ್ದಾರೆ.
ಪ್ರಾರಂಭಿಕ ಹಂತವಾಗಿ ಶಾಲಾ–ಕಾಲೇಜು, ಹಾಸ್ಟೆಲ್, ಬಸ್, ರೈಲು ನಿಲ್ದಾಣ, ಉದ್ಯಾನವನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಡೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಶೋಷಣೆ, ಕಿರುಕುಳ ನಡೆದರೆ ಪಡೆಯನ್ನು ಸಂಪರ್ಕಿಸುವ ಬಗ್ಗೆ ಸಿಬ್ಬಂದಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿರುವ ಮಕ್ಕಳು, ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಗೃಹರಕ್ಷಕ ಸಿಬ್ಬಂದಿಗೆ ಗೌರವ ಧನ, ವಾಹನ ಖರ್ಚು–ವೆಚ್ಚ ಎಲ್ಲ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 6ರಿಂದ 2 ಗಂಟೆ, 2ರಿಂದ 10 ಗಂಟೆ ಪಾಳಿ ಲೆಕ್ಕದಲ್ಲಿ ಅಕ್ಕ ಪಡೆ ಮೊದಲ ಹೆಜ್ಜೆ ಇಟ್ಟಿದೆ. ಈಗ ನಗರ ಪ್ರದೇಶದಕ್ಕೆ ಸೀಮಿತವಾಗಿದ್ದು, ಜಿಲ್ಲೆಯಾದ್ಯಂತ ವಿಸ್ತರಿಸುವ ಯೋಜನೆಯೂ ಇದೆ.
ಜ. 1ರಿಂದ ಸಿಬ್ಬಂದಿ ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ. ಸಂಕಷ್ಟಕ್ಕೆ ಒಳಗಾದ, ದೌರ್ಜನ್ಯ, ಹಿಂಸೆ, ಶೋಷಣೆ ಎದುರಿಸುತ್ತಿರುವ ಮಹಿಳೆಯರು, ಮಕ್ಕಳು ‘181’ ಸಹಾಯವಾಣಿ ಸಂಪರ್ಕಿಸಿದರೆ ಅಕ್ಕ ಪಡೆ ನೆರವಿಗೆ ಧಾವಿಸಲಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಾಗಿದೆ.
ಬಸ್ ನಿಲ್ದಾಣ, ವಿಶ್ವವಿದ್ಯಾಲಯ, ಕಾಲೇಜುಗಳ ಬಗ್ಗೆ ಅಕ್ಕ ಪಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಯುವ ಸಮೂಹವನ್ನು ಗುರಿಯಾಗಿಸಿಕೊಂಡು ಕ್ಷೇತ್ರ ಕಾರ್ಯ ಮುಂದುವರಿಸಿದೆ. ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಜತೆಗೆ ಅವರ ಸಬಲೀಕರಣಕ್ಕೂ ಉತ್ತೇಜನ ನೀಡುತ್ತಿದೆ. ಸಂತ್ರಸ್ತರ ಪರವಾಗಿ ನಿಂತು, ಆಯಾ ವ್ಯಾಪ್ತಿಯ ಠಾಣೆಗೆ ವರದಿ ಸಲ್ಲಿಸಲಾಗುತ್ತದೆ. ಕಿರುಕುಳ ತಡೆಗೆ ಪೂರಕವಾದ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ಸಹಾಯವಾಣಿ ಕುರಿತು ಎಲ್ಲೆಡೆ ಪ್ರಚಾರ ಶುರು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.