
ಬೆಂಗಳೂರಿನಲ್ಲಿ ಮೊದಲ ಹಂತದ ಮರ ಸಮೀಕ್ಷೆ ಪೂರ್ಣ, 2ನೇ ಹಂತ ಸದ್ಯವೇ ಆರಂಭ, ಮಾರ್ಚ್‌ಗೆ ವಿವರ ಲಭ್ಯ.
ಬೆಂಗಳೂರು: ಒಂದು ಕಾಲಕ್ಕೆ ಉದ್ಯಾನನಗರಿ ಎಂದು ಹೆಸರುವಾಸಿಯಾಗಿದ್ದು, ಎಲ್ಲೆಲ್ಲೂ ಹಸಿರು ಹೊದಿಕೆಯಂತೆ ಕೆಲಸ ಮಾಡುತ್ತಿದ್ದ ಮರಗಳ ಸಂಖ್ಯೆ ಕಡಿಮೆಯಾಗಿದೆಯಾ ಎನ್ನುವ ಪ್ರಶ್ನೆ ಈಗಿನ ಬೆಂಗಳೂರು ಗಮನಿಸಿದರೆ ಉದ್ಭವಿಸದೇ ಇರದು.
ನಗರದಲ್ಲಿ ಇರುವ ಅಧಿಕೃತ ಮರಗಳ ಸಂಖ್ಯೆ ಪತ್ತೆ ಮಾಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ( ಜಿಬಿಎ) 2022ರಲ್ಲೇ ಆರಂಭಿಸಿ 2024 ರಲ್ಲೇ ಮುಗಿಯಬೇಕಾಗಿದ್ದ ಮರಗಳ ಸಮೀಕ್ಷೆ ಕಾರ್ಯದ ಮೊದಲ ಹಂತ ಈಗ ಪೂರ್ಣಗೊಂಡಿದ್ದು, ಸುಮಾರು 7 ಲಕ್ಷ ಮರಗಳು ಸಾರ್ವಜನಿಕ ಸ್ಥಳಗಳಲ್ಲಿ ಗುರುತಿಸಲಾಗಿದೆ.
ಒಂದು ಕಾಲಕ್ಕೆ 15 ಲಕ್ಷಕ್ಕೂ ಅಧಿಕ ವೈವಿಧ್ಯಮಯ ಮರಗಳಿಂದ ಹೆಸರುವಾಸಿಯಾಗಿದ್ದ ಬೆಂಗಳೂರಿನ ಹಸಿರಿನ ಮಹತ್ವ, ಮರಗಳ ನಿಖರ ಮಾಹಿತಿ ಪಡೆಯುವ ಉದ್ದೇಶದಿಂದ ಇಡೀ ನಗರದಲ್ಲಿ ಎರಡು ವರ್ಷದಿಂದ ಸಮೀಕ್ಷೆ ಕೈಗೊಳ್ಳಲಾಗಿತ್ತು.
ನಗರದ ವಿವಿಧ ಭಾಗಗಳ ರಸ್ತೆ, ಉದ್ಯಾನ, ಬಡಾವಣೆ, ರಾಜ್ಯ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರಗಳ ಸಮೀಕ್ಷೆ ನಡೆಸಲಾಗಿದೆ. ಹಲವು ಜಾತಿಯ ಹಾಗೂ ಗಾತ್ರದ ಹಳೆಯ ಮರಗಳು ಇರುವುದು ಸಮೀಕ್ಷೆ ವೇಳೆ ಪತ್ತೆಯಾಗಿದೆ.
ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿ ಆವರಣಗಳಲ್ಲಿ ಮರಗಳ ಸಮೀಕ್ಷೆ ಬಾಕಿಯಿದೆ. ಅದೂ ಕೂಡ ಸದ್ಯದಲ್ಲೇ ಆರಂಭವಾಗಲಿದೆ. ಈ ಕಚೇರಿಗಳ ಆವರಣದಲ್ಲೂ ಒಂದು ಲಕ್ಷ ಮರಗಳಿರುವ ಅಂದಾಜಿದೆ.
1950ರ ವೇಳೆಗೆ ಬೆಂಗಳೂರು ನಗರ ಹಾಗೂ ಕಾಲಾ ನಂತರ ಸೇರಿಕೊಂಡಿರುವ ಹಳ್ಳಿಗಳಲ್ಲಿ ಅಶ್ವತ್ಥ ಕಟ್ಟೆಗಳು, ಗುಂಡುತೋಪುಗಳು ಯಥೇಚ್ಚವಾಗಿದ್ದವು. ಆನಂತರ ಅಭಿವೃದ್ದಿಗೆ ಮರಗಳು ಕಡಿತಗೊಂಡಿದ್ದರೂ ಈಗಲೂ 700ಕ್ಕೂ ಅಧಿಕ ಜಾತಿಯ ಮರಗಳು ಈಗಲೂ ಬೆಂಗಳೂರಿನಲ್ಲಿವೆ. ಅವುಗಳ ನಿಖರ ಸಂಖ್ಯೆ ಅರಿಯುವ ಪ್ರಯತ್ನವೂ ನಡೆದಿತ್ತು.
ಇದಕ್ಕಾಗಿ ಗ್ರೇಟರ್ ನೊಯ್ಡಾ, ಪುಣೆ ನಗರಗಳ ರೀತಿಯಲ್ಲಿ ಬೆಂಗಳೂರಿನಲ್ಲಿ ಮರಗಳ ಸ್ಥಿತಿಗತಿ ಅಧ್ಯಯನದ ಜತೆಗೆ ಜನರಿಗೆ ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗುವಂತೆ ಮಾಡಲು ಸಮೀಕ್ಷೆ ನಡೆಸುವ ತೀರ್ಮಾನವನ್ನು 2019ರಲ್ಲಿ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿತ್ತು.
ಕೋವಿಡ್ ಅವಧಿಯೂ ಸೇರಿ ನಾನಾ ಕಾರಣಗಳಿಂದ ನಾಲ್ಕು ವರ್ಷ ವಿಳಂಬವಾಗಿ 2 ವರ್ಷದ ಹಿಂದೆ ಸಮೀಕ್ಷೆಯನ್ನು ಎರಡು ಭಾಗ ಮಾಡಿ ಟೆಂಡರ್ ಕರೆಯಲಾಗಿತ್ತು. ಒಡಿಶಾ ಮೂಲದ ಟ್ರೀ ಲಾನ್ಸರ್ ಹಾಗೂ ಪುಣೆಯ ಆರ್ನೆಟ್ ಎನ್ನುವ ಸಂಸ್ಥೆಗಳಿಗೆ ಮರ ಸಮೀಕ್ಷೆಯ ಗುತ್ತಿಗೆ ನೀಡಲಾಗಿತ್ತು. ಟೆಂಡರ್ ನಿಯಮಗಳಂತೆ ಒಂದು ವರ್ಷದಲ್ಲಿ ಎರಡೂ ಸಂಸ್ಥೆಗಳು ಸಮೀಕ್ಷೆ ಮುಗಿಸಬೇಕಾಗಿತ್ತು. ಸಮೀಕ್ಷೆ ನಿಧಾನ ಮಾಡಿದ ಒಂದು ಸಂಸ್ಥೆಯನ್ನು ಬದಲಿಸಿ ಹೊಸ ಸಂಸ್ಥೆಗೆ ಗುತ್ತಿಗೆಯನ್ನು ನಾಲ್ಕು ತಿಂಗಳ ಹಿಂದೆ ನೀಡಲಾಯಿತು.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಅಡಿ ನಿಗದಿಪಡಿಸಲಾದ ಮಾನದಂಡದ ಪ್ರಕಾರ ಮರ ಎಂದರೆ ಅದರ ಸುತ್ತಳತೆ 17.28 ಸೆ.ಮೀ ಇರಬೇಕು. ಈ ಅಳತೆಯ ಮರವನ್ನು ಮಾತ್ರ ಸಮೀಕ್ಷೆಗೆ ಸೇರಿಸಿಕೊಳ್ಳಲಾಗಿತ್ತು. ಮರದ ಜಾತಿ, ಸುತ್ತಳತೆ, ಕಾಂಡದ ವಿವರ, ಅಂದಾಜು ವಯಸ್ಸು, ಅದರ ಮಹತ್ವ, ಸ್ಥಳದ ವಿವರವನ್ನು ಸಮೀಕ್ಷೆದಾರರು ದಾಖಲಿಸಿದ್ದಾರೆ. ಇದರಲ್ಲಿ 70 ವರ್ಷ ಮೇಲ್ಪಟ್ಟ, ಪಾರಂಪರಿಕ ಮರಗಳು ಇರುವುದನ್ನು ದಾಖಲು ಮಾಡಲಾಗಿದೆ. ಗಣತಿ ಆದ ಮರದ ಒಂದು ಭಾಗದಲ್ಲಿ ಬಣ್ಣದ ಗುರುತು ಹಾಕಲಾಗಿದೆ.
‘ಮೂರು ತಿಂಗಳ ಹಿಂದೆಯೇ ಪ್ರಕ್ರಿಯೆ ಮುಗಿಯಬೇಕಿತ್ತು. ಗುತ್ತಿಗೆ ಪಡೆದ ಸಂಸ್ಥೆಯೊಂದರ ಸಮಸ್ಯೆಯಿಂದ ವಿಳಂಬವಾಗಿ ಈಗ ಸಮೀಕ್ಷೆಯ ಒಂದು ಭಾಗ ಮುಗಿದಿದೆ. ಮೊದಲ ಹಂತದಲ್ಲಿ ದೊರೆತ ಮಾಹಿತಿಯನ್ನು ಕಲೆ ಹಾಕಲಾಗಿದೆ. ಇನ್ನೊಂದು ಹಂತದಲ್ಲೂ ಪ್ರಕ್ರಿಯೆ ಮುಗಿಸಿ ನಗರದ ಮರಗಳ ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವೂ(ಕೆಎಸ್‌ಆರ್‌ಎಸ್‌ಎಸಿ) ಇದಕ್ಕೆ ಸಹಕಾರ ನೀಡಲಿದೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ತಿಳಿಸಿದರು.
‘ನಗರದಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಹಲವು ಕಚೇರಿಗಳಿವೆ. ಭಾರತೀಯ ವಿಜ್ಞಾನ ಸಂಸ್ಥೆ ಸಹಿತ ಪ್ರಮುಖ ವಿಶಾಲ ಆವರಣಗಳಿದ್ದು, ಒಳ ಪ್ರವೇಶಿಸಲು ಅನುಮತಿ ಬೇಕಾಗಿರುವುದರಿಂದ ಆಯಾ ಕಚೇರಿಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗುತ್ತಿದೆ. ಅಲ್ಲಿನ ಅಧಿಕಾರಿಗಳ ಸಹಕಾರದೊಂದಿಗೆ ಮುಂದಿನ ಒಂದೆರಡು ತಿಂಗಳಲ್ಲಿ ಉಳಿದ ಮರಗಳ ವಿವರ ದಾಖಲಿಸಲಾಗುತ್ತದೆ’ ಎನ್ನುವುದು ಅವರ ವಿವರಣೆ.
ಇದಲ್ಲದೇ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಗಳು, ಕಟ್ಟಡಗಳು, ಮನೆಗಳ ಆವರಣದಲ್ಲಿರುವ ಮರಗಳ ಅಂದಾಜು ಆಗಿಲ್ಲ. ಸಾರ್ವಜನಿಕ ಸ್ಥಳದ ಮರಗಳ ಮಾಹಿತಿ ಸಂಗ್ರಹದ ಬಳಿಕ ಖಾಸಗಿ ಮರಗಳ ವಿವರಗಳನ್ನು ಸಂಗ್ರಹಿಸಿ ಅದನ್ನು ಆ್ಯಪ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಈಗಾಗಲೇ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಗರದ ಮರಗಳ ಸಂಪೂರ್ಣ ಮಾಹಿತಿ ಒದಗಿಸುವ ಟ್ರೀ ಸೆನ್ಸಸ್ ಆ್ಯಪ್ ಅನ್ನು ಸಿದ್ದಪಡಿಸುತ್ತಿದೆ. ಮಾರ್ಚ್ ಹೊತ್ತಿಗೆ ಆ್ಯಪ್ ಅಂತಿಮಗೊಳ್ಳಲಿದ್ದು, ಜನ ಆಯಾ ಬಡಾವಣೆಯ ಮರಗಳ ವಿವರಗಳನ್ನು ಇದರಲ್ಲಿ ಪಡೆದುಕೊಳ್ಳಬಹುದು. ಆಯಾ ಭಾಗ ಮರಗಳ ಕುರಿತು ಮಾಹಿತಿ ಪರಿಶೀಲಿಸಿ ಫೀಡ್ ಬ್ಯಾಕ್ ಕೊಡುವ ವ್ಯವಸ್ಥೆ ಆ್ಯಪ್‌ನಲ್ಲಿ ಇರಲಿದೆ ಎನ್ನುತ್ತಾರೆ ಅಧಿಕಾರಿಗಳು.
ಒಂದು ಮರ ಸಮೀಕ್ಷೆಗೆ- ₹22
ಮೀಸಲಿಟ್ಟ ಹಣ -₹30 ಕೋಟಿ
ಗುತ್ತಿಗೆ ಪಡೆದ ಸಂಸ್ಥೆಗಳು -2
ಹಿಂದೆ ಯಾವಾಗಲೂ ಬೆಂಗಳೂರಿನಲ್ಲಿ ಮರಗಳ ಸಮೀಕ್ಷೆ ಆಗಿರಲಿಲ್ಲ. ಸಮೀಕ್ಷೆ ನಡೆಸಿ ಸಾರ್ವಜನಿಕವಾಗಿ ಮಾಹಿತಿ ಸಿಗುವಂತೆ ಮಾಡುತ್ತಿರುವುದು ಒಳ್ಳೆಯದು. ಬೇಗನೇ ಪ್ರಕ್ರಿಯೆ ಮುಗಿಸುವುದು ಒಳ್ಳೆಯದು.-ಎ.ಎನ್.ಯಲ್ಲಪ್ಪರೆಡ್ಡಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ
-ಎ.ಎನ್.ಯಲ್ಲಪ್ಪರೆಡ್ಡಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.