
ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಜಿಲ್ಲೆಯಲ್ಲಿ ನಾಟಕ ಹಾಗೂ ಇತರೆ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಿರ್ಮಿಸಿರುವ ‘ಹೈಟೆಕ್ ರಂಗಮಂದಿರ’ ಉದ್ಘಾಟನೆಯಾಗಿ ಐದು ವರ್ಷಗಳಿಂದ ಪಾಳು ಬಿದ್ದಿದ್ದು, ಇದುವರೆಗೂ ಅದರ ಆರಂಭಕ್ಕೆ ಅಧಿಕಾರಿಗಳಾಗಲಿ ಹಾಗೂ ಜನಪ್ರತಿನಿಧಿಗಳಾಗಲಿ ಇಚ್ಚಾಶಕ್ತಿ ತೋರಿಸುತ್ತಿಲ್ಲ. ಇವರ ವರ್ತನೆ, ಹಾವೇರಿ ಜನರು ಹಾಗೂ ಕಲಾವಿದರಲ್ಲಿ ನಿರಾಸೆ ಮೂಡಿಸಿದೆ.
ನಗರದ ಹೃದಯ ಭಾಗದಲ್ಲಿರುವ ಜಯಪ್ರಕಾಶ ನಾರಾಯಣ (ಜೆ.ಪಿ) ವೃತ್ತಕ್ಕೆ ಹೊಂದಿಕೊಂಡಂತೆ ಗೂಗಿಕಟ್ಟೆಯ ಪ್ರದೇಶದ 20 ಗುಂಟೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. 2021ರ ಮಾರ್ಚ್‌ನಲ್ಲಿಯೇ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಆದರೆ, ನಿರ್ವಹಣೆಗೆ ಗುತ್ತಿಗೆದಾರರು ಇಲ್ಲದೇ ರಂಗಮಂದಿರಕ್ಕೆ ಬೀಗ ಹಾಕಲಾಗಿದೆ.
ನಗರಸಭೆಯ ಅಧೀನದಲ್ಲಿರುವ ಹೈಟೆಕ್ ರಂಗಮಂದಿರ ಐದು ವರ್ಷವಾದರೂ ಬಾಗಿಲು ತೆರೆದಿಲ್ಲ. ನಿರ್ವಹಣೆ ಮಾಡಲು ಗುತ್ತಿಗೆದಾರರ ಸಿಗದಿದ್ದರಿಂದಲೇ, ರಂಗಮಂದಿರದ ಬಾಗಿಲು ತೆರೆಯಲು ಆಗುತ್ತಿಲ್ಲವೆಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ದಿನದಿಂದ ದಿನಕ್ಕೆ ಕಟ್ಟಡ ಶಿಥಿಲಾವಸ್ಥೆಗೆ ತಲುಪುತ್ತಿದೆ. ₹ 6 .47 ಕೋಟಿ ಖರ್ಚು ಮಾಡಿ ಕಟ್ಟಿದ್ದ ಕಟ್ಟಡ ಹಾಗೂ ಸುತ್ತಮುತ್ತಲಿನ ಸ್ಥಳವೆಲ್ಲವೂ ಈಗ ಹಾಳು ಪ್ರದೇಶವಾಗಿ ಮಾರ್ಪಟ್ಟಿದೆ.
ಅವಿಭಜಿತ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟ ಹಾವೇರಿ ಜಿಲ್ಲೆ ಜಾನಪದ ಹಾಗೂ ರಂಗಭೂಮಿ ಮೂಲಕವೂ ಹೆಸರು ಮಾಡಿದೆ. ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು, ಬಯಲು ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ನಾಟಕ ಪ್ರದರ್ಶಿಸುತ್ತಿದ್ದಾರೆ. ಕೆಲವರು, ಕಲ್ಯಾಣ ಮಂಟಪ ಹಾಗೂ ಇತರೆ ಸ್ಥಳಗಳ ಮೊರೆ ಹೋಗುತ್ತಿದ್ದಾರೆ. ಕೆಲವರು, ಮನೆಗಳ ಆವರಣದಲ್ಲಿಯೇ ನಾಟಕ ಪ್ರದರ್ಶಿಸಿ ಸುಮ್ಮನಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಸಜ್ಜಿತವಾದ ರಂಗ ಮಂದಿರ ಬೇಕೆಂಬುದು ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಹೈಟೆಕ್ ರಂಗಮಂದಿರ ನಿರ್ಮಾಣಕ್ಕಾಗಿ ಸಾಹಿತಿಗಳು, ಕಲಾವಿದರು ಹಲವು ಬಾರಿ ಮನವಿ ಸಲ್ಲಿಸಿದ್ದರು. 2016–17ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಗೆ ₹ 50 ಕೋಟಿ ವಿಶೇಷ ಅನುದಾನ ನೀಡಿದ್ದರು. ಇದೇ ಹಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಹಾವೇರಿ ನಗರಸಭೆ ಆಶ್ರಯದಲ್ಲಿ ₹ 6 .47 ಕೋಟಿ ಬಳಸಿಕೊಂಡು ಹೈಟೆಕ್ ರಂಗಮಂದಿರ ನಿರ್ಮಿಸಲಾಗಿದೆ. ಗುತ್ತಿಗೆ ಪಡೆದ ಕಂಪನಿಯವರು, 2019ರಲ್ಲಿ ಕಾಮಗಾರಿ ಆರಂಭಿಸಿ 2021ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಿ ನಗರಸಭೆಗೆ ಕಟ್ಟಡ ಹಸ್ತಾಂತರಿಸಿದ್ದಾರೆ. ಆದರೆ, ಐದು ವರ್ಷವಾದರೂ ರಂಗಮಂದಿರ ಬಳಕೆಗೆ ಮುಕ್ತವಾಗದಿರುವುದು ಕಲಾವಿದರು ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ಅಂತಸ್ತಿನ ಹೈಟೆಕ್ ರಂಗಮಂದಿರದ ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದೆ. ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸ್ವಾಗತಕಾರರ ಕಚೇರಿ, ಊಟದ ಜಾಗ, ಅಡುಗೆ ಮನೆ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ಸುಸಜ್ಜಿತ ರಂಗಸಜ್ಜಿಕೆ ಸಭಾಭವನವೂ ಇದೆ. ನೆಲ ಮಹಡಿಯಲ್ಲಿಯೇ ಚಿಕ್ಕ ‘ಸಮಾವೇಶ ಕೊಠಡಿ’ಯಿದೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಜೊತೆಗೆ, ರಂಗಮಂದಿರ ಸುತ್ತಮುತ್ತಲೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕೆಲವರು ರಂಗಮಂದಿರದ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ.
ಸ್ವಚ್ಛತೆ ಸಾಮಗ್ರಿ ಇರಿಸಲು ಬಳಕೆ: ನಗರಸಭೆಯವರು ಹೈಟೆಕ್ ರಂಗಮಂದಿರವನ್ನು ತಮ್ಮ ವಸ್ತುಗಳನ್ನು ಸಂಗ್ರಹಿಸಿಡಲು ಬಳಸುತ್ತಿದ್ದಾರೆ. ನಗರದ ಸ್ವಚ್ಛತೆಗೆ ಅಗತ್ಯವಿರುವ ಬುಟ್ಟಿಗಳು ಹಾಗೂ ಇತರೆ ವಸ್ತುಗಳನ್ನು ರಂಗಮಂದಿರಲ್ಲಿ ಕಾಣಬಹುದಾಗಿದೆ. ಮೂಲ ಉದ್ದೇಶ ಮರೆತಿರುವ ನಗರಸಭೆ, ಅನ್ಯ ಉದ್ದೇಶಕ್ಕೆ ರಂಗಮಂದಿರ ಬಳಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
‘ಹಾವೇರಿ ಜಿಲ್ಲೆಯಲ್ಲಿ ಮನೋರಂಜನೆಗೆ ನಾಟಕವೂ ಒಂದಾಗಿದೆ. ರಂಗಮಂದಿರ ಆರಂಭವಾದರೆ, ಹವ್ಯಾಸಿ ಹಾಗೂ ವೃತ್ತಿ ಕಲಾವಿದರು ನಾಟಕ ಪ್ರದರ್ಶನ ಮಾಡುತ್ತಾರೆ. ತ್ವರಿತವಾಗಿ ರಂಗಮಂದಿರ ಆರಂಭಿಸಬೇಕು. ಟೆಂಡರ್ ಪಡೆಯಲು ಯಾರೂ ಬರದಿದ್ದರೆ, ನಗರಸಭೆಯವರೇ ಸಿಬ್ಬಂದಿಯನ್ನು ನೇಮಿಸಿ ರಂಗಮಂದಿರದ ಬಾಗಿಲು ತೆರೆಯಬೇಕು’ ಎಂದು ರಂಗ ಕಲಾವಿದರು ಆಗ್ರಹಿಸುತ್ತಿದ್ದಾರೆ.
ನಿರ್ವಹಣೆಗೆ ಟೆಂಡರ್: ‘ಹೈಟೆಕ್ ರಂಗಮಂದಿರದ ನಿರ್ವಹಣೆಗೆ ಇತ್ತೀಚೆಗಷ್ಟೇ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಅವರು ರಂಗ ಮಂದಿರವನ್ನು ಸ್ವಚ್ಛಗೊಳಿಸಿ, ಬಾಗಿಲು ತೆರೆಯಲಿದ್ದಾರೆ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ಹೇಳಿದರು.
ಟೆಂಡರ್ ಪಡೆದಿರುವ ಗುತ್ತಿಗೆದಾರ, ರಂಗಮಂದಿರದ ಬಾಗಿಲು ತೆರೆಯಲು ಆಸಕ್ತಿ ತೋರಿಸುತ್ತಿಲ್ಲವೆಂದು ಕಲಾವಿದರು ಹೇಳುತ್ತಿದ್ದಾರೆ. ‘ಹೈಟೆಕ್ ರಂಗಮಂದಿರ ಹೆಚ್ಚು ಗಲೀಜಾಗಿದೆ. ಸ್ವಚ್ಛತೆ ಕೆಲಸಕ್ಕೆ ಹೆಚ್ಚು ಹಣ ಬೇಕು. ಜೊತೆಗೆ, ಅಕ್ಕ–ಪಕ್ಕದ ಪ್ರದೇಶವನ್ನು ಸ್ವಚ್ಛ ಮಾಡಬೇಕು. ನಗರಸಭೆಯವರು ನಿಗದಿಪಡಿಸಿರುವ ಬಾಡಿಗೆ ನೀಡಿ, ರಂಗಮಂದಿರ ಆರಂಭಿಸಲು ಆಗುವುದಿಲ್ಲವೆಂದು ಗುತ್ತಿಗೆದಾರರು ಹೇಳುತ್ತಿರುವುದು ಗೊತ್ತಾಗಿದೆ’ ಎಂದು ಕಲಾವಿದರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.