
ಕೊಪ್ಪಳ: ಕರ್ನಾಟಕದ ಭತ್ತದ ಕಣಜ ಎನ್ನುವ ಹೆಗ್ಗಳಿಕೆ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಹೊಂದಿರುವ ಗಂಗಾವತಿ ಭಾಗದಲ್ಲಿ ಸಮೃದ್ಧ ಅಕ್ಕಿ ಬೆಳೆಯುತ್ತಿದ್ದರೆ; ಕೊಪ್ಪಳ, ಕುಷ್ಟಗಿ, ಕನಕಗಿರಿಯ ಹಲವು ಭಾಗಗಳಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ವಿದೇಶದಲ್ಲಿ ಕಂಗೊಳಿಸಿದ ಹಣ್ಣುಗಳು ಈಗ ಜಿಲ್ಲೆಯ ಜನರ ನಾಲಿಗೆ ಸವಿ ರುಚಿಸುತ್ತಿವೆ.
ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಬೆಳೆಯುವ ದುಬಾರಿ ಬೆಲೆಯ ಹಣ್ಣುಗಳು, ಸಸಿಗಳನ್ನು ತಂದು ಜಿಲ್ಲೆಯಲ್ಲಿ ಮೇಳ ನಡೆಸಿ ಜನರ ಮುಂದೆ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಆ ಬೆಳೆಗಳನ್ನು ಬೆಳೆಯುವಂತೆ ಇಲ್ಲಿನ ತೋಟಗಾರಿಕಾ ಇಲಾಖೆ ರೈತರನ್ನು ಹುರುದುಂಬಿಸುತ್ತಿರುವ ಪರಿಣಾಮ ಜಿಲ್ಲೆಯ ರೈತರು ವಿದೇಶಿ ತಳಿಗಳ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಕೊಪ್ಪಳ ಕೇಸರ್, ಪೇರಲ, ದಾಳಿಂಬೆ ಹಣ್ಣುಗಳಿಗೆ ಖ್ಯಾತಿಯಾಗಿರುವ ಕೊಪ್ಪಳದ ತೋಟಗಾರಿಕಾ ಕ್ಷೇತ್ರ ಈಗ ವಿದೇಶಿ ಹಣ್ಣುಗಳನ್ನು ಸ್ಥಳೀಯವಾಗಿ ಬೆಳೆಯುವ ‘ಪ್ರಯೋಗದ ಮನೆ’ಯಾಗಿ ಮಾರ್ಪಡುತ್ತಿದೆ.
ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ‘ಮೀಯಾಜಾಕಿ’ ತಳಿಯನ್ನು ಮೂರು ವರ್ಷಗಳ ಹಿಂದೆ ತೋಟಗಾರಿಕಾ ಇಲಾಖೆ ವತಿಯಿಂದ ನಡೆದಿದ್ದ ಹಣ್ಣುಗಳ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆಗ ಈ ತಳಿಯ ಒಂದು ಕೆ.ಜಿ. ಮಾವಿನ ಹಣ್ಣಿಗೆ ₹2.50 ಲಕ್ಷ ಇತ್ತು. ಒಂದು ಸಸಿಯ ಬೆಲೆ ಕನಿಷ್ಠ ₹2,500 ನಿಗದಿಯಾಗಿತ್ತು. ಜಪಾನ್‌ನ ಮಿಯಾಜಾಕಿ ಹಣ್ಣು ಬೆಲೆ ಮತ್ತು ಔಷಧಿ ತಯಾರಿಸಲು ಹೆಚ್ಚು ಉಪಯುಕ್ತ ಎನ್ನುವ ಕಾರಣಗಳಿಂದಾಗಿ ’ಶ್ರೀಮಂತ’ ರೈತರ ಕಣ್ಣು ಕುಕ್ಕಿಸಿತ್ತು.
ರೈತರು ಎಜೆನ್ಸಿಗಳ ನೆರವಿನಿಂದ ಮೀಯಾಜಾಕಿ ಸಸಿಗಳನ್ನು ತರಿಸಿಕೊಂಡು ಈಗ ಜಿಲ್ಲೆಯಲ್ಲಿಯೇ ಬೆಳೆಯುತ್ತಿದ್ದಾರೆ. ಯಲಬುರ್ಗಾ ತಾಲ್ಲೂಕಿನ ತರ್ಲಕಟ್ಟಿ ಗ್ರಾಮದ ರಂಗನಾಥ ವಲಮಕೊಂಡಿ ಎಂಬುವವರು 600 ಸಸಿಗಳನ್ನು ನಾಟಿ ಮಾಡಿದ್ದರು. ರಂಗನಾಥ್ ಒಂದು ಸಸಿಗೆ ₹2500 ನೀಡಿ ಖರೀದಿಸಿದ್ದು ನಮಗೆ ಲಕ್ಷಾಂತರ ರೂಪಾಯಿಗೆ ಮಾರಾಟವಾಗದಿದ್ದರೂ ಅತ್ಯಂತ ಕನಿಷ್ಠವೆಂದರೂ ಒಂದು ಕೆ.ಜಿಗೆ. ₹1,000 ಮಾರಾಟವಾದರೂ ಅದು ದೊಡ್ಡ ಲಾಭವೇ ಎನ್ನುತ್ತಾರೆ ಅವರು.
ಅದೇ ರೀತಿ ದುಬಾರಿ ಬೆಲೆಯ ದ್ರಾಕ್ಷಿ ತಳಿಗಳಲ್ಲಿ ಒಂದಾದ ‘ರೂಬಿ ರೋಮನ್’ ರೈತರನ್ನು ಸೆಳೆದಿದೆ. ಜಪಾನ್ ಮೂಲದ ರೂಬಿ ರೋಮನ್ ಬೆಲೆ ಒಂದು ಬಂಚ್‌ಗೆ ₹8 ಲಕ್ಷ. ಈ ತಳಿ ಸಾಮಾನ್ಯ ದ್ರಾಕ್ಷಿಗಿಂತ ಶೇ. 18ರಷ್ಟು ಹೆಚ್ಚು ಸಕ್ಕರೆ ಹಾಗೂ ರೋಗ ನಿರೋಧಕ ಶಕ್ತಿ ಒಳಗೊಂಡಿದೆ. ವಿಟಮಿನ್ ಸಿ ಅಂಶವೂ ಈ ಹಣ್ಣಿನಲ್ಲಿದೆ. ಜಪಾನ್‌ನಲ್ಲಿ ಬೆಳೆಯುವ ವಿಶಿಷ್ಟ ತಳಿ ಇದಾಗಿದ್ದು, ಕೆಂಪು ಬಣ್ಣದಿಂದ ಕೂಡಿದೆ. ಇದನ್ನೂ ಜಿಲ್ಲೆಯಲ್ಲಿ ಬೆಳೆಯುವ ಪ್ರಯೋಗ ಆರಂಭವಾಗಿದೆ.
ಕೊಪ್ಪಳ ಜಿಲ್ಲೆಯ ಹವಾಗುಣ, ತೋಟಗಾರಿಕಾ ಬೆಳೆಗಳಿಗೆ ಬೇಕಾದಷ್ಟು ನೀರಿನ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ, ಬ್ರ್ಯಾಂಡ್ ಮೌಲ್ಯದ ಕಾರಣದಿಂದಾಗಿ ತೋಟಗಾರಿಕೆ ಬೆಳೆಯುವ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ. ಪ್ರತಿ ತಿಂಗಳೂ ಆದಾಯ ಗಳಿಸುವ ‘ನೌಕರ’ನಾಗುತ್ತಿದ್ದಾನೆ. ಇಲಾಖೆ ವತಿಯಿಂದ ಪ್ರತಿವರ್ಷ ಆಯೋಜಿಸುವ ಸಸ್ಯಸಂತೆಯಲ್ಲಿ ಈ ಬಾರಿ 45 ಲಕ್ಷಕ್ಕೂ ಹೆಚ್ಚಿನ ಸಸಿಗಳು ಮಾರಾಟವಾಗಿವೆ. ಮೋಸಂಬಿ, ನೇರಳೆ, ಸೇಬು, ನಿಂಬೆ, ಹಲಸು ಹಾಗೂ ವಿದೇಶಿ ಸಸಿಗಳಿಗೆ ಬೇಡಿಕೆಯಿದೆ. ‘ಕಡಿಮೆ ಖರ್ಚು, ಕಡಿಮೆ ನಿರ್ವಹಣೆ ನಿರಂತರ ಆದಾಯ’ ಎನ್ನುವ ಮಾತು ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಮಾವು, ಲಿಂಬೆ, ಮೊಸಂಬೆ, ಹಲಸು, ಕಿತ್ತಳೆ, ಚೈನಿಸ್ ಕಿತ್ತಳೆ, ಪೇರಲ, ತೆಂಗು, ದಾಳಿಂಬೆ, ಅಂಜೂರ, ವಾಟರ್ ಆ್ಯಪಲ್, ಬೀಜರಹಿತ ಲಿಂಬೆ, ರಾಮ್‌ಫಲ, ಲಕ್ಷ್ಮಣ್ ಫಲ ಸೇರಿದಂತೆ ವಿವಿಧ ಹಣ್ಣುಗಳು, ಕರಿಬೇವು, ವೀಳ್ಯೆದೆಲೆ ಹಾಗೂ ಅಲಂಕಾರಿಕ ಸೇರಿದಂತೆ ಇತರೆ ತಳಿಯ ಸಸಿಗಳಿಗೆ ಪ್ರತಿವರ್ಷವೂ ಬೇಡಿಕೆ ವ್ಯಕ್ತವಾಗುತ್ತದೆ. ಕೊಪ್ಪಳ ಕೇಸರ್, ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ, ಇಮಾಮ ತಳಿಗಳಿಗೆ ನಿರಂತರವಾಗಿ ಬೇಡಿಕೆ ವ್ಯಕ್ತವಾಗುತ್ತಲೇ ಇದೆ. ವಿಶೇಷವೆಂದರೆ ಜಿಲ್ಲೆಯ ರೈತರೇ ಕೊಪ್ಪಳ ಕೇಸರ್ ತಳಿಯ ಮಾವಿನ ಹಣ್ಣಿನ ಸಸಿಗಳನ್ನು ಜಿಲ್ಲೆಯಲ್ಲಿಯೇ ಬೆಳೆದು ಬೇರೆ ಜಿಲ್ಲೆಯವರಿಗೆ ಮಾರಾಟ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆ ತೋಟಗಾರಿಕಾ ಹಬ್ ಆಗಿ ಬೆಳೆಯುತ್ತಿದೆ. ಪ್ರತಿವರ್ಷ ಹಣ್ಣುಗಳ ಮೇಳ, ಸಸ್ಯಸಂತೆ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ವಿದೇಶದ ತಳಿಗಳ ದುಬಾರಿ ಹಣ್ಣುಗಳನ್ನು ಜನರ ಗಮನ ಸೆಳೆಯುವ ಸಲುವಾಗಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಈಗ ಆ ಹಣ್ಣುಗಳನ್ನು ಜಿಲ್ಲೆಯಲ್ಲಿ ರೈತರೇ ಬೆಳೆಯುವಂತಾಗಿದೆ. ಇದರಿಂದಾಗಿ ರೈತರಿಗೂ ಉತ್ತಮ ಆದಾಯ ಸಿಗುತ್ತಿದ್ದು ಜಿಲ್ಲೆಗೂ ಕೀರ್ತಿ ಬರುತ್ತಿದೆ.ಕೃಷ್ಣ ಸಿ. ಉಕ್ಕುಂದ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.